Advertisement

ಕೊಲೆ ಯತ್ನ: ದಕ್ಷಿಣ ಕನ್ನಡ ಖಾಝಿ ದೂರು

01:25 AM Feb 28, 2020 | mahesh |

ಮಂಗಳೂರು: ದಕ್ಷಿಣ ಕನ್ನಡದ ಖಾಝಿ ಅಲ್‌ಹಾಜ್‌ ತ್ವಾಕಾ ಅಹ್ಮದ್‌ ಮುಸ್ಲಿಯಾರ್‌ ಅವರ ಕೊಲೆ ಯತ್ನ ನಡೆದಿರುವ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೆ. 8ರಂದು ನಡೆದ ಘಟನೆಯೊಂದು ಈ ಆರೋಪಕ್ಕೆ ಪೂರಕವಾಗಿದೆ ಎಂದು ಖಾಝಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಕದ್ರಿ ಠಾಣೆಯಲ್ಲಿ ವಿವಿಧ ಸೆಕ್ಷನ್‌ಗಳನ್ವಯ ಪ್ರಕರಣ ದಾಖಲಾಗಿದೆ.

Advertisement

ದೂರಿನಲ್ಲಿ ಏನಿದೆ?
“ಫೆ. 8ರಂದು ಸಂಜೆ 7 ಗಂಟೆಗೆ ಹಳೆಯಂಗಡಿಯ ಬಳ್ಳೂರಿಗೆ ಪ್ರವಚನ ನೀಡಲು ಹೋಗಿದ್ದೆ. ವಾಹನ ನಿಲುಗಡೆ ಸ್ಥಳದಲ್ಲಿ ಅಥವಾ ಪ್ರವಚನದ ಬಳಿಕ ಸಂಚರಿಸಿದ ಮಾರ್ಗದಲ್ಲಿ ನನ್ನ ಇನ್ನೋವಾ ಕಾರಿನ ಟೈರಿಗೆ ಕಬ್ಬಿಣದ ಮೊನಚಾದ ತುಂಡನ್ನು ಹಾಕಿ ಪ್ರಯಾಣದ ವೇಳೆ ಕಾರು ಅಪಘಾತವಾಗುವಂತೆ ಸಂಚು ರೂಪಿಸಿ ಕೊಲೆಗೆ ಯತ್ನಿಸಲಾಗಿತ್ತು. ಪ್ರವಚನ ಮುಗಿದು ರಾತ್ರಿ 10.10ಕ್ಕೆ ಕಾರಿನಲ್ಲಿ ಚಾಲಕ ಸೈಫ್‌ ಜತೆ ಕಾಸರಗೋಡಿಗೆ ಹೊರಟಿದ್ದೆ. 10.30ಕ್ಕೆ ನಂತೂರು ಜಂಕ್ಷನ್‌ ತಲುಪಿದಾಗ ಹಿಂಬದಿ ಟೈರ್‌ ಪಂಕ್ಚರ್‌ ಆಗಿದ್ದು, ಕೂಡಲೇ ಬದಲಿಸಿದೆವು. ಅಷ್ಟರಲ್ಲಿ ಬೈಕಿನಲ್ಲಿ ಬಂದ ಅಪರಿಚಿತನೊಬ್ಬ ನಮ್ಮ ಜತೆ ಮಾತನಾಡಿದ್ದ. ಬಳಿಕ ಪ್ರಯಾಣ ಮುಂದುವರಿಸಿದೆವು. ಪಂಕ್ಚರಾದ ಟೈರನ್ನು ಫೆ. 10ರಂದು ಕಾಸರಗೋಡಿನಲ್ಲಿ ಸರಿ ಮಾಡಿಸಲು ಹೋದಾಗ ಟೈರ್‌ನಲ್ಲಿ ಚೂಪಾದ ಕಬ್ಬಿಣದ ತುಂಡು ಪತ್ತೆಯಾಗಿದೆ’.

“ಪ್ರವಚನಗಳಲ್ಲಿ ನಾನು ಎಲ್ಲ ಜನರು ಮತ್ತು ಜನಾಂಗದವರು ಸೌಹಾರ್ದ ದಿಂದ ಬಾಳ್ವೆ ನಡೆಸುವಂತೆ ಉಪದೇಶ ಮಾಡುತ್ತಿದ್ದೇನೆ. ಎನ್‌ಆರ್‌ಸಿ ವಿಚಾರ ದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿರುತ್ತೇನೆ. ನನ್ನ ಭಾಷಣದ ಧ್ವನಿ ಮುದ್ರಿಕೆಯನ್ನು ಕಾಸರಗೋಡಿನ ಒಂದು ವಾಹಿನಿಯವರು ತಿರುಚಿ ಪ್ರಸಾರ ಮಾಡಿದ್ದು, ಈ ಬಗ್ಗೆ ಉರ್ವ ಠಾಣೆ ಯಲ್ಲಿ ಕೇಸು ದಾಖಲಿಸಿದ್ದೇನೆ. ಆ ಬಳಿಕ ಕೆಲವು ಅಪರಿಚಿತರು ನನ್ನನ್ನು ಹಿಂಬಾ ಲಿಸುತ್ತಿರುವ ಬಗ್ಗೆ ಗುಮಾನಿ ಇತ್ತು’.

“ಫೆ. 8ರಂದು ರಾತ್ರಿ ನನ್ನ ಕಾರನ್ನು ನಿಲುಗಡೆ ಮಾಡಿರುವ ವೇಳೆ ಅಥವಾ ಹಳೆಯಂಗಡಿಯಿಂದ ಕಾಸರಗೋಡಿಗೆ ಸಂಚರಿಸುವ ದಾರಿಯಲ್ಲಿ ಉದ್ದೇಶ ಪೂರ್ವಕವಾಗಿ ಕಬ್ಬಿಣದ ಮೊನಚಾದ ತುಂಡನ್ನು ಹಾಕಿ ಕಾರು ಅಪಘಾತಕ್ಕೆ ಈಡಾಗಿ ನನ್ನ ಜೀವಕ್ಕೆ ಹಾನಿ ಉಂಟು ಮಾಡುವ ಅಥವಾ ಕಾರು ಸಂಚರಿಸದಂತೆ ತಡೆ ಉಂಟು ಮಾಡಿ ನನ್ನ ಕೊಲೆಗೆ ಸಂಚು ರೂಪಿಸಿದ ಬಗ್ಗೆ ಅನುಮಾನವಿದೆ’.

“ನನ್ನ ಜೀವಕ್ಕೆ ಹಾನಿ ಮಾಡಿ ವಿವಿಧ ಕೋಮುಗಳ ಸಾಮರಸ್ಯ ಕದಡುವ ಪ್ರಯತ್ನ ಇದಾಗಿದೆ. ಈ ಸಂಚಿನ ಹಿಂದೆ ಸ್ಥಳೀಯ, ಅಂತಾರಾಜ್ಯದ ಹಾಗೂ ಅಂತಾರಾಷ್ಟ್ರೀಯ ವ್ಯಕ್ತಿಗಳ ಬಗ್ಗೆ ಸಂಶಯವಿದೆ. ಅಂಥವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಖಾಝಿ ಒತ್ತಾಯಿಸಿದ್ದಾರೆ.

Advertisement

ವಿದೇಶೀ ಕರೆಗಳು
ಖಾಝಿ ಅವರಿಗೆ ಕೆಲವು ಸಮಯದಿಂದ ವಿದೇಶೀ ಬೆದರಿಕೆ ಕರೆಗಳು ಬರುತ್ತಿವೆ. ಅಲ್ಲದೆ ಅವರು ಓಡಾಡುವ ಕಾರಿನ ಟೈರಿಗೆ ಕಬ್ಬಿಣದ ಚೂಪಾದ ತುಂಡುಗಳನ್ನಿಟ್ಟ ಘಟನೆ ಈ ಹಿಂದೆಯೂ ಎರಡು ಬಾರಿ ನಡೆದಿತ್ತು. ಆ ಹಿನ್ನೆಲೆಯಲ್ಲಿ ಇದೀಗ ಕದ್ರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಮಸ್ಜಿದ್‌ ಝೀನತ್‌ ಬಕ್ಷ್ ನ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ ತಿಳಿಸಿದ್ದಾರೆ.

ಖಾಝಿ ಅವರು ಕೊಲೆ ಬೆದರಿಕೆ ಬಗ್ಗೆ ದೂರು ನೀಡಿರುವ ಬಗ್ಗೆ ಕದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತಂತೆ ತನಿಖೆ ನಡೆಯುತ್ತಿದೆ.
– ಡಾ| ಹರ್ಷ ಪಿ. ಎಸ್‌., ಪೊಲೀಸ್‌ ಕಮಿಷನರ್‌

Advertisement

Udayavani is now on Telegram. Click here to join our channel and stay updated with the latest news.

Next