Advertisement

ಮುನ್ಸಾಮಿಯ ಆಟಾಟೋಪ

10:42 AM May 27, 2018 | |

“ನಂಬಿಕೆಯೇ ದೇವರು. ನಂಬಿಕೆಗಳಿಂದ ಖುಷಿ ಸಿಗುತ್ತದೆ, ನೆಮ್ಮದಿಯಾಗಿರುತ್ತಾರೆಂದರೆ ಅದನ್ನು ನಾವ್ಯಾಕೆ ವಿರೋಧಿಸಬೇಕು’. ಇನ್ನೇನು ಸಿನಿಮಾ ಮುಗಿಯಲು ಕೆಲವೇ ನಿಮಿಷಗಳಿರುವಾಗ ಸ್ವಾಮೀಜಿ ಹೀಗೆ ಹೇಳುತ್ತಾರೆ. ಇಡೀ ಊರೇ ಆ ಸ್ವಾಮಿಯ ಮಾತನ್ನು ಚಾಚೂ ತಪ್ಪದೇ ಪಾಲಿಸುತ್ತದೆ. ಏನೇ ಕಾರ್ಯಕ್ಕೂ ಆ ಸ್ವಾಮಿಯ ಮುಹೂರ್ತ ಬೇಕೇ ಬೇಕು. ಆ ಸ್ವಾಮಿಗೆ ಮಠವಿಲ್ಲ.

Advertisement

ಖಾವಿ ತೊಟ್ಟುಕೊಂಡು ಕೈಯಲ್ಲೊಂದು ಲಾಲಿಪಾಪ್‌ ಚೀಪುತ್ತಾ ದೇವಸ್ಥಾನವೊಂದರಲ್ಲಿ ಕುಳಿತಿರುವ ಆ ಸ್ವಾಮಿಯ ಹಿಂದೆ ಸಾಕಷ್ಟು ಸ್ವಾರಸ್ಯಕರ ಘಟನೆಗಳಿವೆ. ತನ್ನಿಂದ ಜನರಿಗೆ ಯಾವುದೇ ತೊಂದರೆಯಾಗಬಾರದೆಂಬ ನಿಲುವಿನ ಆ ಸ್ವಾಮಿ ರಾತ್ರಿಯಾದರೆ ಗುಂಡು ಹಾಕುತ್ತಾನೆ, ಕೋಳಿಗೆ ಖಾರ ಮಸಾಲೆ ಅರೆಯುವಂತೆ ಹೇಳುತ್ತಾನೆ, ಪಂಪ್‌ಹೌಸ್‌ ಪದ್ಮಜಾ ಮನೆ ಬಾಗಿಲು ಬಡಿಯುತ್ತಾನೆ.

ಇಂತಹ ಸ್ವಾಮಿಯ ವಿರುದ್ಧ ಸಿಟಿಯಿಂದ ಬಂದ ಯುವಕನೊಬ್ಬ ತಿರುಗಿ ಬೀಳುತ್ತಾನೆ. ಅಲ್ಲಿಂದ ಜಿದ್ದಾಜಿದ್ದಿ ಆರಂಭ. “ಓಳ್‌ ಮುನ್ಸಾಮಿ’ ಚಿತ್ರದಲ್ಲಿ ಏನಿದೆ ಎಂದರೆ ಒಂದು ಸೂಕ್ಷ್ಮ ಸಂದೇಶವಿದೆ, ಜೊತೆಗೆ ಅಲ್ಲಲ್ಲಿ ಉಕ್ಕುವ ನಗೆಬುಗ್ಗೆ ಇದೆ ಎನ್ನಬಹುದು. ನಿರ್ದೇಶಕ ಆನಂದ ಪ್ರಿಯ ಒಂದೂರಲ್ಲಿ ನಡೆಯುವ ಕಥೆಯನ್ನಿಟ್ಟುಕೊಂಡು ಇಡೀ ಸಿನಿಮಾ ಕಟ್ಟಿಕೊಟ್ಟಿದ್ದಾರೆ.

ಇಲ್ಲಿ ಅವರು ಮಾಡಿಕೊಂಡಿರುವ ಒನ್‌ಲೈನ್‌ ಚೆನ್ನಾಗಿದೆ ಮತ್ತು ಇವತ್ತು ಸಮಾಜದಲ್ಲಿ ನಡೆಯುತ್ತಿರುವ ನಂಬಿಕೆ, ಆಚರಣೆಗಳ ಕುರಿತಾದ “ಚರ್ಚೆ’ಗಳಿಗೆ ಹೇಳಿಮಾಡಿಸಿದಂತಿದೆ. ಈ ವಿಷಯವನ್ನು ಕಾಮಿಡಿ ಹಿನ್ನೆಲೆಯಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಬಹುತೇಕ ಸಿನಿಮಾ ಸ್ವಾಮೀಜಿ ಹಾಗೂ ಯುವಕನ ನಡುವಿನ ಜಿದ್ದಾಜಿದ್ದಿಯ ಸುತ್ತವೇ ಸಾಗುತ್ತದೆ.

ಸ್ವಾಮೀಜಿಯ ಮಾತು, ಹಿನ್ನೆಲೆ, ಹುಡುಗರ ಪೋಲಿತನ … ಇಂತಹ ಸನ್ನಿವೇಶಗಳಲ್ಲಿ ಬಹುತೇಕ ಮೊದಲರ್ಧ ಮುಗಿದು ಹೋಗುತ್ತದೆ. ಇಲ್ಲಿ ಹೆಚ್ಚಿನದ್ದೇನೂ ನಿರೀಕ್ಷಿಸುವಂತಿಲ್ಲ. ಹಾಗಂತ ಇಲ್ಲಿ ನಿಮಗೆ ಬೇಸರವೂ ಆಗುವುದಿಲ್ಲ, ಖುಷಿಯೋ ಆಗೋದಿಲ್ಲ. ಆದರೆ, ಸಿನಿಮಾದ ನಿಜವಾದ ಸತ್ವ ಅಡಗಿರೋದು ಕೊನೆಯ 20 ನಿಮಿಷದಲ್ಲಿ. ಸ್ವಾಮೀಜಿಯ ಮಾತುಗಳು, ಆಲೋಚನೆಗಳು, ಇವತ್ತಿನ ಪರಿಸ್ಥಿತಿಗೆ ಕಾರಣ …

Advertisement

ಅನೇಕ ಅಂಶಗಳು ಬಿಚ್ಚಿಕೊಳ್ಳುವ ಮೂಲಕ ಸಿನಿಮಾದ ತೂಕ ಹೆಚ್ಚಿಸಿವೆ. ಜೀವನ, ನಂಬಿಕೆಗಳ ಕುರಿತಾದ ಸಂಭಾಷಣೆಗಳು ಅರ್ಥಪೂರ್ಣವಾಗಿದೆ. “ಅಭಿನಯಿಸೋದು ಸಂಸಾರ ಅಲ್ಲ, ಅನುಭವಿಸೋದು ಸಂಸಾರ’, “ಒಂದು ಹಂತದವರೆಗೆ ಕಾಸು, ಸೆಕ್ಸು, ಸಕ್ಸಸ್‌ ಮಜಾ ಕೊಡುತ್ತದೆ. ಒಂದು ಹಂತದ ದಾಟಿದ ನಂತರ ಎಲ್ಲವೂ ಬರೀ ಓಳು ಅನಿಸುತ್ತದೆ’ … ಈ ತರಹದ ಸಂಭಾಷಣೆಗಳ ಮೂಲಕ ಸಿನಿಮಾದ ಜೀವಂತಿಕೆ ಹೆಚ್ಚಿದೆ.

ಇಡೀ ಚಿತ್ರ ಕೆಲವೇ ಕೆಲವು ಪಾತ್ರಗಳ ಸುತ್ತ ಸುತ್ತುತ್ತದೆ. ಆ ನಿಟ್ಟಿನಲ್ಲಿ ಒಂದು ಸಣ್ಣ ಹಳ್ಳಿಯ ವಾತಾವರಣವನ್ನು ಕಟ್ಟಿಕೊಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಪಡ್ಡೆಗಳ ಮೇಲೂ ಗಮನವಿಟ್ಟಿರುವ ನಿರ್ದೇಶಕರು, ಅದಕ್ಕಾಗಿ ಹಸಿಬಿಸಿ ದೃಶ್ಯ, ಡಬಲ್‌ ಮೀನಿಂಗ್‌ ಸಂಭಾಷನೆಯನ್ನೂ ಇಟ್ಟಿದ್ದಾರೆ. ಇಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತು ಸಾಗಿರೋದು ಕಾಶೀನಾಥ್‌.

ಸ್ವಾಮಿಯಾಗಿ ಅವರು ಪಾತ್ರಕ್ಕೆ ಚೆನ್ನಾಗಿ ಹೊಂದಿಕೆಯಾಗಿದ್ದಾರೆ. ಸಿನಿಮಾದುದ್ದಕ್ಕೂ ಅವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಹಿಸಿದ್ದಾರೆ. ಉಳಿದಂತೆ ನಾಯಕ ನಿರಂಜನ್‌ ಒಡೆಯರ್‌ ಕೂಡಾ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕಿ ಅಖೀಲಾ ಪ್ರಕಾಶ್‌ ನಟನೆಗೆ ಇಲ್ಲಿ ಹೆಚ್ಚಿನ ಅವಕಾಶವಿಲ್ಲ. ಉಳಿದಂತೆ ಚಿತ್ರದಲ್ಲಿ ನಟಿಸಿದವರು ತಮ್ಮ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಸಂಗೀತ ಚಿತ್ರಕ್ಕೆ ಪೂರಕವಾಗಿದೆ. 

ಚಿತ್ರ: ಓಳ್‌ ಮುನ್ಸಾಮಿ
ನಿರ್ಮಾಣ: ಸಮೂಹ ಟಾಕೀಸ್‌
ನಿರ್ದೇಶನ: ಆನಂದ ಪ್ರಿಯ
ತಾರಾಗಣ: ಕಾಶೀನಾಥ್‌, ನಿರಂಜನ್‌ ಒಡೆಯರ್‌, ಅಖೀಲಾ ಪ್ರಕಾಶ್‌ ಮತ್ತಿತರರು. 

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next