ಮುಳಬಾಗಿಲು: ಕೋಲಾರ ಲೋಕಸಭೆ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿರುವ ಕೆ.ಎಚ್.ಮುನಿಯಪ್ಪ ಗೆಲುವು ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ಸೇರಿದ್ದು ಎಂಬುದನ್ನು ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು ಎಂದು ಕೇಂದ್ರ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಹೇಳಿದರು.
ನಗರದ ಶಾದಿ ಮೊಹಲ್ಲಾದಲ್ಲಿ ನಡೆದ ತಾಲೂಕು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 60 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ದೇಶಕ್ಕೆ ಏನು ಮಾಡಿದೆ ಎಂದು ಪ್ರಶ್ನಿಸುವವರು, ಮೊದಲು ಇತಿಹಾಸ ಪುಟ ತಿರುವಿ ನೋಡಿ ನಂತರ ಮಾತನಾಡಲಿ, ದೇಶದಲ್ಲಿನ ಸಂಪತ್ತನ್ನೆಲ್ಲ ಕೊಳೆ ಹೊಡೆದ ಪರಕೀಯರು ಬರಿದಾದ ಭಾರತವನ್ನು
ಕಾಂಗ್ರೆಸ್ ಕೈಗೆ ನೀಡಿದ್ದರು ಎಂಬುದನ್ನು ಮೊದಲು ಅರಿಯಿರಿ ಎಂದು ಬಿಜೆಪಿಗೆ ಹೇಳಿದರು.
ಸರ್ವಧರ್ಮ ಸಮನ್ವಯ: ಭಾರತವನ್ನು ವಿಶ್ವದಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸಾಲಿಗೆ ರೂಪುಗೊಳಿಸಿದ್ದು, ಕಾಂಗ್ರೆಸ್ ಪಕ್ಷ ಎಂಬ ವಿಚಾರ ನೆನಪಿರಲಿ. ದೇಶದಲ್ಲಿನ ಸರ್ವ ಧರ್ಮಗಳನ್ನು ಸಮಾನ ರೀತಿಯಲ್ಲಿ ಕಂಡು ಎಲ್ಲರ ಏಳಿಗೆಗೆ ಶ್ರಮಿಸಿದ್ದು, ಕಾಂಗ್ರೆಸ್ ಪಕ್ಷವೇ ಹೊರತು
ಬಿಜೆಪಿಯಲ್ಲ ಎಂದು ವಾಗ್ಧಾಳಿ ನಡೆಸಿದರು.
ಕೋಲಾರ ಲೋಕಸಭೆ ಅಭ್ಯರ್ಥಿ ಕೆ.ಎಚ್. ಮುನಿಯಪ್ಪ ಮಾತನಾಡಿ, ಪ್ರಧಾನಿ ಮೋದಿ ದೇಶದ ಸೂಕ್ಷ್ಮವಿಚಾರಗಳನ್ನು ಪರಿಹರಿಸಲು ಸಾಧ್ಯವಾಗದೆ, ಅವುಗಳನ್ನು ವೈಭವೀಕರಿಸಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ದೇಶದ ಸಂವಿಧಾನದ ವ್ಯವಸ್ಥೆ ವಿಶ್ವದ ಯಾವುದೇ ದೇಶದಲ್ಲಿ ಇಲ್ಲ ಎಂಬುದು ಅವರಿಗೆ ಗೊತ್ತಾಗುವುದಿಲ್ಲವೇ, ಬಿಜೆಪಿಗರು ಹಿಂದೂ ಧರ್ಮವನ್ನು ನಾವೇ ರಕ್ಷಿಸುತ್ತೇವೆ ಎನ್ನುತ್ತಾರೆ. ಆಗಾದರೆ ಕಾಂಗ್ರೆಸ್‌ನಲ್ಲಿ
ಹಿಂದೂಗಳು ಇಲ್ಲವೇ ಎಂದು ಪಶ್ನಿಸಿದರು.
ರೈತ ವಿರೋಧಿ ನೀತಿ: ಕಾಂಗ್ರೆಸ್ ಸರ್ವರನ್ನೂ ಸಮಾನರಂತೆ ಕಾಣಬೇಕು ಎಂಬ ಗುರಿ ಹೊಂದಿದೆ.
ಆದರೆ, ಬಿಜೆಪಿ ದೇಶದಲ್ಲಿ ಕೋಮುಭಾವನೆ ಮೂಡಿಸಿ ಭಾರತದಲ್ಲಿ ಧರ್ಮ ಧರ್ಮಗಳ ಮಧ್ಯೆ ಬಿರುಕು ಮೂಡಿಸಿ ತಮ್ಮ ಬೆಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಬಿಜೆಪಿ ಸರ್ಕಾರ ರೈತ ವಿರೋಧಿ ಧೋರಣೆ ಹೊಂದಿದೆ, ಒಮ್ಮೆ ರೈತರ ಸಮಸ್ಯೆ ತಿಳಿಸಲು ಹೋದ ನಿಯೋಗಕ್ಕೆ ಪ್ರಧಾನಿ ಮೋದಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯಲು ಪ್ರಜ್ಞಾವಂತ ಮತದಾರರು ಮುಂದಾಗಬೇಕು ಎಂದು ಹೇಳಿದರು.
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಹಾಬಾಜ್ ಖಾನ್, ಜೆಡಿಎಸ್ ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಡಾ.ವಜವುತ್ತುಲ್ಲಾ ಖಾನ್, ಜೈವಿಕಾ ಇಂಧನ ಅಭಿವೃದ್ಧಿ ಮಂಡಳಿ ಮಾಜಿ ಉಪಾಧ್ಯಕ್ಷ ಜಿ.ರಾಮಲಿಂಗಾರೆಡ್ಡಿ, ಯುವ ಕಾಂಗ್ರೆಸ್ ಕಾರ್ಯದರ್ಶಿ ಮಹಮದ್ ಜಬೀವುಲ್ಲಾ, ನಗರಸಭೆ ಸದಸ್ಯ ಆಯಬ್‌ಪಾಷ, ಹಿರಿಯ ಕಾಂಗ್ರೆಸ್ ಮುಖಂಡ ಉತ್ತನೂರು ಶ್ರೀನಿವಾಸ್, ಜಿ.ಎಂ.ಗೋವಿಂದಪ್ಪ, ಟಿಪ್ಪುಬಾಬು, ಅಮಾನುಲ್ಲಾ, ಆಸಿಫ್ಪಾಷ, ಕುರುಡುಮಲೆ ಟಾಸಾಬ್, ರಚ್ಚಬಂಡಹಳ್ಳಿ ಶ್ರೀರಾಮ್ ಇದ್ದರು.