ಕೆಜಿಎಫ್: ನಗರದಲ್ಲಿ ಸೋಮವಾರ ರಾತ್ರಿ ಶಾಸಕಿ ರೂಪಕಲಾ ನೇತೃತ್ವದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ರೋಡ್ ಶೋ ನಡೆಸಿದರು. ನಗರಸಭೆ ಮುಂಭಾಗದಿಂದ ಕಾರ್ಯಕರ್ತರು, ಬೆಂಬಲಿಗರೊಂದಿಗೆ ತೆರೆದ ವಾಹನ ದಲ್ಲಿ ರೋಡ್ ಶೋ ನಡೆಸಿದ ಮುನಿಯಪ್ಪ ಮತದಾರರನ್ನು ಉದ್ದೇಶಿಸಿ ಮಾತನಾಡಿ, ಕೆಜಿಎಫ್ನಲ್ಲಿ ಟೌನ್‌ಶಿಪ್ ಮಾಡಲು ಈಗಾಗಲೇ ಸಚಿವ ಜಾರ್ಜ್ ಜೊತೆ ಮಾತುಕತೆ ನಡೆಸಿದ್ದೇವೆ.
ಬಿಜಿಎಂಎಲ್‌ನ 12 ಸಾವಿರ ಎಕರೆ ಭೂಪ್ರದೇಶ ದಲ್ಲಿ ಕೈಗಾರಿಕೆ ಸ್ಥಾಪಿಸಿ ಪ್ರತಿ ಕುಟುಂಬ ದಲ್ಲೊಬ್ಬರಿಗೆ ಉದ್ಯೋಗ ನೀಡುವ ಮೂಲಕ ನಿತ್ಯ ಸಾವಿರಾರು ಪ್ರಯಾಣಿಕರ ಸಂಕಷ್ಟ ನೀಗಿಸಲು ಶಾಸಕಿ ರೂಪಕಲಾ ಸರ್ಕಾರದೊಂದಿಗೆ ಚರ್ಚಿಸಿದ್ದಾರೆ ಎಂದು ಹೇಳಿದರು.
ಕೇಂದ್ರದಲ್ಲಿ ರಾಹುಲ್‌ಗಾಂಧಿ ಪ್ರಧಾನಿ ಯಾದ್ರೆ ದೇಶದ ರೈತರ ಸಾಲ ಮನ್ನಾ ಮಾಡುತ್ತಾರೆ. ಅಭಿವೃದ್ಧಿಗೆ ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಬೆಂಬಲಿಸಿ ಎಂದು ಮನವಿ ಮಾಡಿದರು.
ಶಾಸಕಿ ರೂಪಕಲಾ ಮಾತನಾಡಿ, ಕೇಂದ್ರ ಸರ್ಕಾರದ ವೈಫಲ್ಯವನ್ನು ಜನರಿಗೆ ತಿಳಿಸಿ, 10 ತಿಂಗಳಿಂದ ಕೆಜಿಎಫ್ ಕ್ಷೇತ್ರದಲ್ಲಿ ನಡೆಯುತ್ತಿರುವ ಜನಪರ ಕೆಲಸಗಳನ್ನು ಗುರುತಿಸಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ನನ್ನ ತಂದೆ ಕೆ.ಎಚ್.ಮುನಿಯಪ್ಪರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ರೋಡ್ ಶೋದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಾರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದಲೈಮುತ್ತು, ರಾಧಾಕೃಷ್ಣ ರೆಡ್ಡಿ, ಕೆಪಿಸಿಸಿ ಕಾರ್ಯದರ್ಶಿ ಜಿ.ಎಸ್. ಕಾರ್ತಿಕ್, ಮುಖಂಡರಾದ ವಳ್ಳಲ್ ಮುನಿ ಸ್ವಾಮಿ, ಅ.ಮು.ಲಕ್ಷ್ಮೀನಾರಾಯಣ, ವಿಜಯರಾಘವ ರೆಡ್ಡಿ, ಅಪ್ಪಿರೆಡ್ಡಿ, ವಿಜಯಶಂಕರ್, ನಾರಾಯಣರೆಡ್ಡಿ,ವೆಂಕಟ ಕೃಷ್ಣಾರೆಡ್ಡಿ, ಮುನಿರತ್ನಂನಾಯ್ಡು, ಆನಂತ್ ಕೃಷ್ಣ, ಆನಂದಮೂತಿ, ದಾಸ್ ಚಿನ್ನಸವರಿ, ಜೆಡಿಎಸ್ ಮುಖಂಡ ಕೆ.ರಾಜೇಂಡಿದ್ರನ್, ನಗರಸಭೆ ಮಾಜಿ ಸದಸ್ಯರು ಸೇರಿದಂತೆ ಇತರೆ ಮುಖಂಡರು ಪಾಲ್ಗೊಂಡಿದ್ದರು.