ಅಜೆಕಾರು: ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಕಾರ್ಕಳ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಅಜೆಕಾರು ಮತ್ತು ಮುನಿಯಾಲು, ಸರಕಾರಿ ಪದವಿ ಪೂರ್ವ ಕಾಲೆಜು ಮುನಿಯಾಲು, ಗ್ರಾ.ಪಂ. ವರಂಗ, ಲಯನ್ಸ್ ಕ್ಲಬ್ ಮುನಿಯಾಲು ಇದರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆಯು ಮುನಿಯಾಲು ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ವರಂಗ ಗ್ರಾ.ಪಂ. ಅಧ್ಯಕ್ಷ ಸುರೇಂದ್ರ ಶೆಟ್ಟಿ ಅವರು ವಹಿಸಿ ಕುಟುಂಬ ಕಲ್ಯಾಣ ಯೋಜನೆಯನ್ನು ಎಲ್ಲ ಸಮುದಾಯದವರು ಅನುಸರಿಸಿ ಭವ್ಯ ಸಮಾಜ ಕಟ್ಟುವಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿದರು. ತಾ.ಪಂ. ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಜನಸಂಖ್ಯೆ ಹೆಚ್ಚಳದಿಂದಾಗಿ ಹಲವು ಸಮಸ್ಯೆಗಳು ಉದ್ಭವವಾಗುತ್ತಿದ್ದು ಜನಸಂಖ್ಯಾ ನಿಯಂತ್ರಣ ಇಂದಿನ ಪ್ರಮುಖ ಅಂಶವಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯೆ ಜ್ಯೋತಿಹರೀಶ್ ಜನಸಂಖ್ಯಾ ದಿನಾಚರಣೆಯ ಮಾಹಿತಿ ಕರಪತ್ರಗಳನ್ನು ಬಿಡುಗಡೆಗೊಳಿಸಿ, ಜನಸಂಖ್ಯಾ ನಿಯಂತ್ರಣ ಸಮಾಜದ ಪ್ರತಿಯೋರ್ವರ ಜವಾಬ್ದಾರಿ ಎಂದು ತಿಳಿಸಿದರು. ಅತಿಥಿಗಳಾಗಿ ಮುನಿಯಾಲು ಲಯನ್ಸ್ ಕ್ಲಬ್ ಅಧ್ಯಕ್ಷ ಮಂಜುನಾಥ ಟಿ., ಮುನಿಯಾಲು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬೇಬಿ ಶೆಟ್ಟಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ರಾಮ ರಾವ್ ಉಪಸ್ಥಿತರಿದ್ದರು.
ಈ ಸಂದರ್ಭ ಡಾ| ಶಮಾ ಶುಕುರ್, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಕುಮುದಾವತಿ, ವಿಮಲ ಬಾಯರಿ, ರೇಷ್ಮಾ, ಆಶಾ ಕಾರ್ಯಕರ್ತೆ ಜಯಶ್ರೀ, ಸುಮನಾ ಅವರನ್ನು ಸಮ್ಮಾನಿಸಲಾಯಿತು. ತಾಲೂಕಿನ ಹಿರಿಯ ಆರೋಗ್ಯ ಸಹಾಯಕಿ ಅನ್ಕಕುಟ್ಟಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಎಚ್. ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ| ಕೃಷ್ಣಾನಂದ ಶೆಟ್ಟಿ ಪ್ರಾಸ್ತಾವಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಜಾಗೃತಿ ಜಾಥಕ್ಕೆ ಡಾ| ಪ್ರಮೋದ್ ಕುಮಾರ್ ಹೆಗ್ಡೆ ಚಾಲನೆ ನೀಡಿದರು. ಅಜೆಕಾರು ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಡಾ| ಕಾರ್ತಿಕೇಶ್ ಐತಾಳ್ ಸ್ವಾಗತಿಸಿದರು. ಮುನಿಯಾಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸೌಮ್ಯಾ ವಂದಿಸಿದರು.