ಮಂಗಳೂರು/ಕಾರ್ಕಳ/ಧರ್ಮಸ್ಥಳ: ಕಾಂತ್ರಿಕಾರಿ ರಾಷ್ಟ್ರಸಂತ, “ಕಹಿಗುಳಿಗೆ’ ಪ್ರವಚನ ಖ್ಯಾತಿಯ ತರುಣ ಸಾಗರ ಮುನಿಮಹಾರಜ ಅವರಿಗೂ, ಅವಿಭಜಿತ ಜಿಲ್ಲೆಗೂ ಉತ್ತಮ ನಂಟಿತ್ತು. ಧರ್ಮಸ್ಥಳ, ಕಾರ್ಕಳ, ಮಂಗಳೂರಿಗೂ ಅವರು ಭೇಟಿ ನೀಡಿ ವಿವಿಧ ಕಾರ್ಯಕ್ರಮ, ಪ್ರವಚನಗಳಲ್ಲಿ ಭಾಗಿಯಾಗಿದ್ದರು. ಅಷ್ಟೇ ಅಲ್ಲದೆ, ಅಪಾರ ಸಂಖ್ಯೆಯ ಶಿಷ್ಯವರ್ಗ, ಅಭಿಮಾನಿಗಳನ್ನು ಹೊಂದಿದ್ದರು.
2007ರಲ್ಲಿ ತರುಣ ಸಾಗರ ಮುನಿಗಳು ಧರ್ಮಸ್ಥಳದಲ್ಲಿ ನಡೆದಿದ್ದ ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕದಲ್ಲಿ ಭಾಗವಹಿಸಿ ಪ್ರವಚನ ನೀಡಿದ್ದರು. ಕ್ಷೇತ್ರದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿ ಸತ್ಕರಿಸಲಾಗಿದ್ದು, ಲಕ್ಷಾಂತರ ಮಂದಿ ಆಶೀರ್ವಾದ ಪಡೆದಿದ್ದರು.
ಅದೇ ವರ್ಷದಲ್ಲಿ ಅವರು ಕಾರ್ಕಳಕ್ಕೂ ಶಿಷ್ಯರೊಂದಿಗೆ ಆಗಮಿಸಿದ್ದರು. ಡೋಲಿಯಲ್ಲಿ ಮೂಡಬಿದಿರೆಯಿಂದ ಆಗಮಿಸಿದ್ದ ಅವರು ಎರಡು ದಿನ ತಂಗಿದ್ದರು. ಹಿರಿಯಂಗಡಿಯ ಶ್ರೀ ನೇಮಿನಾಥ ಬಸದಿಗೂ ಭೇಟಿ ನೀಡಿದ್ದರು. ಅಲ್ಲಿನ ಬಾಹುಬಲಿ ಮಂದಿರದಲ್ಲಿ ಪ್ರವಚನ ನೀಡಿದ್ದರು. ಬಳಿಕ ನಲ್ಲೂರು ಬಸದಿ ಸೇರಿದಂತೆ ಪ್ರಮುಖ ಬಸದಿಗಳಿಗೆ ಭೇಟಿ ನೀಡಿದ್ದು. ತರುಣ ಸಾಗರ ಮುನಿಗಳ ಅಂದಿನ ಪ್ರವಚನ ಅದ್ಭುತವಾಗಿತ್ತು ಎಂದು ಜೈನ ಸಮುದಾಯದ ಪ್ರಮುಖರು ನೆನಪಿಸಿಕೊಳ್ಳುತ್ತಾರೆ.
ಇದೇ ಸಂದರ್ಭ ಮಂಗಳೂರಿಗೂ ಭೇಟಿ ನೀಡಿದ್ದ ಅವರು ಒಂದು ತಿಂಗಳ ಕಾಲ ಇದ್ದು, ಪ್ರವಚನ ನೀಡಿದ್ದರು. ನಗರದ ಬಜಿಲಕೇರಿ ಯಲ್ಲಿರುವ ಆದೀಶ್ವರ ಸ್ವಾಮಿ ಜೈನ ಬಸದಿ ಮತ್ತು ಉಳ್ಳಾಲದ ಪಾರ್ಶ್ವನಾಥ ಸ್ವಾಮಿ ಬಸದಿ ಸಂದರ್ಶಿಸಿ ಸಮಾಜ ಬಾಂಧವರನ್ನು ಉದ್ದೇಶಿಸಿ ಮಾತನಾಡಿದ್ದರು. ಬಲ್ಲಾಳ್‌ಬಾಗ್‌ನಲ್ಲಿರುವ ಧರ್ಮಸ್ಥಳದ ಡಾ| ವಿರೇಂದ್ರ ಹೆಗ್ಗಡೆ ಅವರ ಮನೆ “ವೀರ ಭವನ’ದಲ್ಲಿ ಒಂದು ತಿಂಗಳ ಕಾಲ ದಿನಂಪ್ರತಿ ಪ್ರವಚನ ನೀಡಿದ್ದರು. ಒಂದು ದಿನ ಕರಾವಳಿ ಉತ್ಸವ ಮೈದಾನದಲ್ಲಿ ಸಾರ್ವಜನಿಕವಾಗಿ ಪ್ರವಚನ ನೀಡಿ ಲೋಕ ಕಲ್ಯಾಣಕ್ಕಾಗಿ ಶಾಂತಿ ಮಂತ್ರ ಬೋಧಿಸಿದ್ದರು. ಪ್ರವಚನವನ್ನು ಆಲಿಸಲು ಎಲ್ಲ ಧರ್ಮೀಯರು ಆಗಮಿಸಿದ್ದರು.
ಭಾರತ ಸೇರಿದಂತೆ 122 ಕ್ಷೇತ್ರಗಳಲ್ಲಿ ಮಹಾವೀರರ ಸಂದೇಶವನ್ನು ಸಾರಿ ದ್ದಾರೆ. ಪ್ರತಿಯೊಬ್ಬರೂ ಓದಬಲ್ಲಂತಹ ವೈಚಾರಿಕ ಸಾಹಿತ್ಯವನ್ನು ಕಟ್ಟಿಕೊಟ್ಟಿದ್ದಾರೆ. ಅದ್ಭುತ ಪ್ರವಚನಕಾರರಾಗಿದ್ದ ಅವರು ಸರ್ವಶ್ರೇಷ್ಠ ಅಧ್ಯಾತ್ಮ ಗುರುಗಳು. ಪ್ರತಿಯೊಂದು ಧರ್ಮಗಳ ಬಗ್ಗೆ ತಿಳಿದಿದ್ದ ಅವರು ಎಲ್ಲರಿಗೂ ಗುರುಗಳಾಗಿದ್ದರು.
-
ಶ್ರೀ ರಾಜಗುರು ಧ್ಯಾನಯೋಗಿ ಲಲಿತಕೀರ್ತ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಜೈನ ಮಠ ಕಾರ್ಕಳ
ಜಗತ್ತು ಒಗ್ಗೂಡಿಸಿದ್ದಾರೆ
ಮುನಿಶ್ರೀ ತರುಣ್‌ಸಾಗರ್ ಅವರು ಜೈನ ಧರ್ಮದ ಸಂದೇಶವನ್ನು ಇಡೀ ಜಗತ್ತಿಗೆ ಸಾರಿದ್ದಾರೆ. ಜಗತ್ತನ್ನು ಒಗ್ಗೂಡಿಸಿ ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದ್ದಾರೆ.
–
ಮುನಿಶ್ರೀ ವೀರ್‌ಸಾಗರ್ ಮಹಾರಾಜ್
ಪೂಜ್ಯರಿಂದ ಸರ್ವ ಧರ್ಮೀ ಯರೂ ಪ್ರಭಾವಿತರಾಗಿದ್ದು, ವಾಸ್ತವಿಕವಾಗಿ ಜೀವನದಲ್ಲಿ ಧರ್ಮ ವನ್ನು ಅನುಷ್ಠಾನಗೊಳಿಸುವ ಕುರಿತು ಅವರು ಮಾರ್ಗದರ್ಶನ ನೀಡು ತ್ತಿದ್ದರು. ಧರ್ಮ ಪ್ರಭಾವನೆ ಜತೆಗೆ ಸಾಂಸಾರಿಕ ಹಾಗೂ ಸಾಮಾಜಿಕ ಸಮಸ್ಯೆಗಳ ಪರಿಹಾರದ ಕುರಿತು ಕೂಡ ನಿರ್ಭಯವಾಗಿ ಪೂಜ್ಯರು ಸದಾ ಮಾರ್ಗದರ್ಶನ ನೀಡುತ್ತಿದ್ದರು.
ಡಾ| ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಧರ್ಮಸ್ಥಳ
ಜೈನ ಮುನಿ ತರುಣ್ ಸಾಗರ್ ಸರಳ ಸ್ವಭಾವದವರು. ಆದರೆ ಪ್ರವಚನ ತೀಕ್ಷ್ಣವಾಗಿರುತ್ತಿದ್ದವು. ದೇಶಾದ್ಯಂತ ಪ್ರವಚನದ ಮೂಲಕ ಜೈನ ಸಮಾಜದಲ್ಲಿ ಕ್ರಾಂತಿ ಉಂಟು ಮಾಡಿದ್ದರು
ಸುರೇಶ್ ಬಲ್ಲಾಳ್, ಮುಡಾ ಅಧ್ಯಕ್ಷ