Advertisement

ಎಲೆಚುಕ್ಕಿ ರೋಗ ಬಾಧಿತ ಅಡಿಕೆ ಮರದ ಎಲೆ ಕತ್ತರಿಸಲು ಯೋಜನೆ: ಮುನಿರತ್ನ

12:13 AM Dec 13, 2022 | Team Udayavani |

ಮಂಗಳೂರು: ಎಲೆಚುಕ್ಕಿ ರೋಗ ಬಂದಿರುವ ಎಲ್ಲ ಅಡಿಕೆ ಮರಗಳ ಎಲೆಗಳನ್ನು ಕತ್ತರಿಸುವುದು ಹಾಗೂ ಅವುಗಳಿಗೆ ಕ್ರಿಮಿನಾಶಕ ಸಿಂಪಡಿಸುವುದು, ಕತ್ತರಿಸಿದ ಎಲೆಗಳನ್ನು ಸುಡುವುದು. ಹೀಗೊಂದು ಅಭಿಯಾನ ನಡೆಸಲು ತೋಟಗಾರಿಕೆ ಸಚಿವ ಮುನಿರತ್ನ ಮುಂದಾಗಿದ್ದಾರೆ.

Advertisement

ಸೋಮವಾರ ತೋಟಗಾರಿಕೆ ಇಲಾಖೆಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ನಾನು ರೋಗಬಾಧಿತ ತೋಟಗಳ ಪರಿಶೀಲನೆ ಮಾಡುವಾಗ ಕೃಷಿಕರೊಬ್ಬರು ಇದೇ ವಿಧಾನವನ್ನು ಅನುಸರಿಸಿ ಯಶಸ್ವಿಯಾಗಿರುವುದು ತಿಳಿಯಿತು. ಅವರ ಸಲಹೆಯಂತೆ ಎಲ್ಲರೂ ಇದನ್ನು ಪಾಲಿಸಿದರೆ ಮಾತ್ರ ಇದು ಹೆಚ್ಚು ಪರಿಣಾಮಕಾರಿ ಆಗಬಹುದು ಎಂದು ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದರು.

7 ಜಿಲ್ಲೆಗಳ 42,504 ಹೆಕ್ಟೇರ್‌ನಲ್ಲಿ ರೋಗ
ರಾಜ್ಯದ 7 ಜಿಲ್ಲೆಗಳಲ್ಲಿ ಅಂದಾಜು 42,504 ಹೆಕ್ಟೇರ್‌ ಪ್ರದೇಶದಲ್ಲಿ ರೋಗವಿರುವುದು ಕಂಡುಬಂದಿದೆ. ಶಿಲೀಂಧ್ರದಿಂದ ಬರುವ ರೋಗ ಇದಾಗಿದೆ. ರೋಗಬಾಧಿತ ತೋಟಗಳಲ್ಲಿ ಅಡಿಕೆ ಎಲೆಗಳನ್ನು ಕತ್ತರಿಸಬೇಕು, ಆ ಬಳಿಕ ಅವುಗಳನ್ನು ಸುಡಬೇಕು, ಅನಂತರ ತೋಟಕ್ಕೆ ಕ್ರಿಮಿನಾಶಕ ಸಿಂಪಡಿಸಬೇಕು. ಕೀಟನಾಶಕಕ್ಕೆ ಎಷ್ಟು ಪ್ರಮಾಣದಲ್ಲಿ ನೀರು ಬೆರೆಸಬೇಕು ಎಂದು ತಿಳಿಸಲಾಗುವುದು, ಅಷ್ಟೇ ಹಾಕಬೇಕು. ಇದಕ್ಕೆ ಬೇಕಾದ ಸಂಸ್ಥೆಯನ್ನೂ ನಾವು ಅಂತಿಮಗೊಳಿಸುತ್ತೇವೆ. ಎಲ್ಲ ರೈತರೂ ಇದನ್ನು ಪಾಲಿಸಬೇಕು ಎಂದರು.

ದೋಟಿ, ಏಣಿ ಉಚಿತ
ಇದಕ್ಕೆ ಬೇಕಾದ ದೋಟಿ, ಏಣಿಯನ್ನು ಉಚಿತವಾಗಿ ಒದಗಿಸಲಾಗುವುದು. ಪ್ರಸ್ತುತ ಕೀಟನಾಶಕ ಸಿಂಪಡಣೆಗೆ 4 ಕೋಟಿ ರೂ. ಬಿಡುಗಡೆ ಮಾಡಲಾಗಿದೆ, ಇನ್ನೂ 15 ಕೋಟಿ ರೂ.ಗೆ ಪ್ರಸ್ತಾವನೆಯನ್ನು ಹಣಕಾಸು ಇಲಾಖೆ ಮುಂದಿರಿಸಿದ್ದೇನೆ ಎಂದು ಸಚಿವರು ತಿಳಿಸಿದರು.

ರೋಗಬಾಧೆಗೊಳಗಾದ ತೋಟ, ಅಲ್ಲಿಗೆ ಅಗತ್ಯವಿರುವ ಕೀಟನಾಶಕದ ಪ್ರಮಾಣ ಇತ್ಯಾದಿ ವಿವರವಿರುವ ವರದಿಯನ್ನು ಅಧಿಕಾರಿಗಳಿಂದ ಇದೇ ತಿಂಗಳ 25ರೊಳಗೆ ತರಿಸಿಕೊಳ್ಳಲಾಗುವುದು, ಆ ಬಳಿಕ ಎಲೆ ಕತ್ತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು.

Advertisement

ಸಮಾಲೋಚನ ಸಭೆ
ನಾನು ಇಲ್ಲಿಂದ ಚಿಕ್ಕಮಗಳೂರಿನ ರೋಗಬಾಧಿತ ತೋಟಗಳಿಗೆ ಭೇಟಿ ನೀಡುತ್ತೇನೆ. ಬಳಿಕ ಈ ಕುರಿತು ಸಭೆ ನಡೆಸಲಿದ್ದು, ವಿಜ್ಞಾನಿಗಳೊಂದಿಗೆ ಸಮಾಲೋಚನೆ ನಡೆಸುತ್ತೇನೆ. ತ್ರಿಪುರದಲ್ಲಿ ಕೂಡ ಈ ರೋಗ ಬಂದಿದೆ, ಆದರೆ ಹೆಚ್ಚು ಅಡಿಕೆ ಬೆಳೆಯುವ ಆಂಧ್ರದಲ್ಲಿ ಕಂಡುಬಂದಿಲ್ಲ ಎಂದರು.

ಸದ್ಯ ರೋಗಕ್ಕೆ ಔಷಧ ಸಿಂಪಡಣೆ ಮಾಡಿದ್ದರೂ ರೋಗ ತಗ್ಗಿಲ್ಲ, ಹೆಚ್ಚುತ್ತಲೇ ಇದೆ ಎಂದು ರೈತರು ತಿಳಿಸಿದ್ದಾರೆ. ತಜ್ಞರು ಇದುವರೆಗೆ ಇದಕ್ಕೆ ಸಮರ್ಪಕವಾಗಿ ಯಾವ ಔಷಧ ಸಿಂಪಡಣೆ ಮಾಡಬೇಕೆಂಬ ಬಗ್ಗೆಯೂ ಸಲಹೆ ಕೊಟ್ಟಿಲ್ಲ ಎಂದರು. ಇಸ್ರೇಲ್‌ಗೆ ಪ್ರವಾಸಗೈಯುತ್ತಿದ್ದು ಅಲ್ಲಿನ ತಜ್ಞರೊಂದಿಗೆ ಅಡಿಕೆಯ ಎಲೆಚುಕ್ಕಿ ರೋಗದ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದೂ ತಿಳಿಸಿದರು.

ಪರಿಹಾರ ಪರಿಷ್ಕರಣೆ
ಅಡಿಕೆ ಹಾಗೂ ತೆಂಗಿನ ಮರಕ್ಕೆ ಪರಿಹಾರ ರೂಪದಲ್ಲಿ ಕೊಡುವ ಮೊತ್ತ 50 ವರ್ಷ ಹಳೆಯದಾಗಿದ್ದು, ತೀರಾ ಅತ್ಯಲ್ಪವಾಗಿರುವುದರಿಂದ ಅದನ್ನು ಪರಿಷ್ಕರಿಸುವ ವಿಚಾರ ಚರ್ಚೆಯಲ್ಲಿದೆ ಎಂದರು.

ತೋಟಗಾರಿಕೆ ಇಲಾಖೆ ಮೈಸೂರು ವಿಭಾಗ ಜಂಟಿ ನಿರ್ದೇಶಕ ನಾಗರಾಜ್‌ ಎಚ್‌.ಎಂ., ಜಂಟಿ ನಿರ್ದೇಶಕ ಸಸ್ಯಸಂರಕ್ಷಣೆ ಕದಿರೇಗೌಡ, ದ.ಕ. ಉಪನಿರ್ದೇಶಕ ಎಚ್‌.ಆರ್‌. ನಾಯಕ್‌, ಹಿರಿಯ ಸಹಾಯಕ ನಿರ್ದೇಶಕ ಪ್ರವೀಣ್‌ ಕೆ. ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next