ಮಹಾನಗರ, ಸೆ. 26: ಮಂಗಳೂರು ಮಹಾನಗರ ಪಾಲಿಕೆ ಹಾಗೂ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಕ್ಕೆ ಸದಸ್ಯರ ನಾಮನಿರ್ದೇಶನ ಸ್ಥಾನಗಳ ಭರ್ತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.
ರಾಜ್ಯ ಸರಕಾರದ ಕಡೆಯಿಂದ ಪಾಲಿಕೆಗೆ ಐದು, ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಆರು ಸದಸ್ಯರು ನಾಮನಿರ್ದೇಶನಗೊಳ್ಳಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದು ಒಂದು ವರ್ಷ ಕಳೆದಿದ್ದರೂ ಇಲ್ಲಿವರೆಗೆ ಪಾಲಿಕೆ ಹಾಗೂ ಮುಡಾಕ್ಕೆ ನಾಮ ನಿರ್ದೇಶಿತ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಎರಡೂ ಕಡೆಗಳಲ್ಲಿ ನಾಮನಿರ್ದೇಶಿತ ಸದಸ್ಯರನ್ನು ಆಯ್ಕೆಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಆಡಳಿತ ಪಕ್ಷದ ಸದಸ್ಯರನ್ನು ನಾಮ ನಿರ್ದೇಶನ ಮಾಡಲಾಗುತ್ತದೆ. ಪ್ರಸ್ತುತ ಅಧಿಕಾರದಲ್ಲಿರುವ ಬಿಜೆಪಿಯ ಜಿಲ್ಲಾ ಘಟಕ ಈಗಾಗಲೇ ನಾಮನಿರ್ದೇಶನಕ್ಕೆ ಸದಸ್ಯರ ಹೆಸರುಗಳನ್ನು ಅಂತಿಮಗೊಳಿಸಿದ್ದು, ಪಾಲಿಕೆಗೆ ನಾಮನಿರ್ದೇಶನಕ್ಕೆ 5 ಮಂದಿಯ ಹೆಸರುಗಳನ್ನು ನಗರಾಭಿವೃದ್ಧಿ ಸಚಿವಾಲಯಕ್ಕೆ ಶಿಫಾರಸು ಮಾಡಿದೆ. ಇದಕ್ಕೆ ವಾರದೊಳಗೆ ಸಚಿವಾಲಯದಿಂದ ಅನುಮೋದನೆ ಲಭಿಸಿ ಸದಸ್ಯರ ನೇಮಕ ಪ್ರಕಟಗೊಳ್ಳುವ ಸಾಧ್ಯತೆಗಳಿವೆ. ಮುಡಾಕ್ಕೆ ನಾಮನಿರ್ದೇಶನಗೊಳ್ಳುವ ಹೆಸರು ಗಳನ್ನು ಒಂದೆರಡು ದಿನದಲ್ಲಿ ಪಕ್ಷದ ವತಿಯಿಂದ ನಗರಾಭಿವೃದ್ಧಿ ಸಚಿವಾಲಯಕ್ಕೆ ಕಳುಹಿಸಿಕೊಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಮಹಾನಗರ ಪಾಲಿಕೆ ವ್ಯಾಪ್ತಿಗೆ ಮಂಗಳೂರು ನಗರ ದಕ್ಷಿಣ ವಿಧಾನಸಭೆ ಕ್ಷೇತ್ರದ ಎಲ್ಲ ವಾರ್ಡ್ ಗಳು, ಮಂಗಳೂರು ಉತ್ತರ ವಿಧಾನಸಭೆ ಕ್ಷೇತ್ರದ ಭಾಗಶಃ ಪ್ರದೇಶಗಳು ಬರುತ್ತವೆ. ಈ ಹಿನ್ನೆಲೆಯಲ್ಲಿ ಮಂಗಳೂರು ದಕ್ಷಿಣದಿಂದ ಮೂರು, ಉತ್ತರ ಕ್ಷೇತ್ರದಿಂದ ಇಬ್ಬರು ಸದಸ್ಯರಿಗೆ ಶಿಫಾರಸು ಪಟ್ಟಿ ಯಲ್ಲಿ ಪ್ರಾತಿನಿಧ್ಯ ನೀಡಲಾಗಿದೆ ಎನ್ನಲಾಗಿದೆ. ಪಾಲಿಕೆಯಲ್ಲಿ ಬಿಜೆಪಿ 44 ಸ್ಥಾನಗಳೊಂದಿಗೆ ಅಧಿಕಾರದಲ್ಲಿದೆ. ನಿಯಮಗಳ ಪ್ರಕಾರ ಒಟ್ಟು 5 ಸ್ಥಾನಗಳಿಗೆ ನಾಮನಿರ್ದೇಶನಕ್ಕೆ ಅವಕಾಶವಿದ್ದು, ಇದಕ್ಕೆ ಬಿಜೆಪಿಯೊಳಗೆ ಹಲವು ಮಂದಿ ಆಕಾಂಕ್ಷಿಗಳಿದ್ದ ಹಿನ್ನೆಲೆಯಲ್ಲಿ ತೀವ್ರ ಪೈಪೋಟಿ ಕಂಡುಬಂದಿತ್ತು. ಕಳೆದ ಬಾರಿ ಪಕ್ಷದ ಟಿಕೆಟ್ ವಂಚಿತರು, ಟಿಕೆಟ್ ನೀಡುವ ಆಶ್ವಾಸನೆಯೊಂದಿಗೆ ಕಳೆದ ಬಾರಿ ಬೇರೆ ಪಕ್ಷದಿಂದ ಬಿಜೆಪಿಗೆ ಬಂದಿದ್ದ ಸದಸ್ಯರು, ಹಲವಾರು ವರ್ಷಗಳಿಂದ ಯಾವುದೇ ಸ್ಥಾನ ದೊರಕದ ಪಕ್ಷದ ಹಿರಿಯ ಕಾರ್ಯಕರ್ತರು ಮುಂತಾದ ಮಾನದಂಡಗಳು ಸದಸ್ಯರ ಆಯ್ಕೆ ವೇಳೆ ಪರಿಗಣನೆಗೆ ಬಂದಿವೆ ಎಂದು ಮೂಲಗಳು ತಿಳಿಸಿವೆ.
ಮುಡಾಕ್ಕೆ ಆಯ್ಕೆ ಕಸರತ್ತು : ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಒಟ್ಟು 6 ಸದಸ್ಯರನ್ನು ನಾಮ ನಿರ್ದೇಶನ ಮಾಡಲಾಗುತ್ತದೆ. ಪ್ರಾಧಿಕಾರದ ವ್ಯಾಪ್ತಿಗೆ ಮಂಗಳೂರು, ಮಂಗಳೂರು ನಗರ ದಕ್ಷಿಣ, ಮಂಗಳೂರು ನಗರ ಉತ್ತರ, ಮೂಲ್ಕಿ – ಮೂಡುಬಿದಿರೆ ವಿಧಾನಸಭೆ ಕ್ಷೇತ್ರಗಳ ಪ್ರದೇಶಗಳು ಒಳಗೊಳ್ಳುತ್ತವೆ. 6 ಸ್ಥಾನ ಗಳಿಗೆ ಈಗಾಗಲೇ ಬಿಜೆಪಿ ಕೋರ್ ಕಮಿಟಿ ಸಭೆ ಸೇರಿ ಸದಸ್ಯರನ್ನು ಆಯ್ಕೆ ಮಾಡಿದೆ. ಆದರೆ ಪಾಲಿಕೆಯಂತೆ ಇಲ್ಲೂ ಹಲವು ಮಂದಿ ಆಕಾಂಕ್ಷಿಗಳಿದ್ದ ಕಾರಣದಿಂದಾಗಿ ಪಟ್ಟಿಯನ್ನು ಅಂತಿಮಗೊಳಿಸಲು ತೊಡಕಾಗಿದೆ. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಟಿಕೆಟ್ ವಂಚಿತರಾದ ಕೆಲವು ಆಕಾಂಕ್ಷಿಗಳು ಮುಡಾ ನಾಮನಿರ್ದೇಶನ ಸ್ಥಾನಕ್ಕಾಗಿ ಲಾಬಿ ಮುಂದುವರಿಸಿದ್ದಾರೆ ಎನ್ನಲಾಗಿದೆ. ಪಟ್ಟಿ ಯನ್ನು ಶೀಘ್ರ ಅಂತಿಮಗೊಳಿಸಿ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿ ಕೊಡುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆದಿವೆ ಎನ್ನಲಾಗಿದೆ.
ಮಂಗಳೂರು ಮಹಾನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಾಮನಿರ್ದೇಶನ ಸದಸ್ಯರ ಆಯ್ಕೆ ಕುರಿತಂತೆ ಪಕ್ಷದ ವತಿಯಿಂದ ಪ್ರಕ್ರಿಯೆಗಳು ನಡೆದಿವೆ. ನಾಮನಿರ್ದೇಶನ ಸ್ಥಾನಗಳಿಗೆ ಪಕ್ಷದ ವತಿಯಿಂದ ಶಿಫಾರಸು ಮಾಡುವ ಸದಸ್ಯರ ಹೆಸರುಗಳು ನಗರಾಭಿವೃದ್ಧಿ ಇಲಾಖೆಯಿಂದ ಅನುಮೋದನೆ ಪಡೆದು ಶೀಘ್ರದಲ್ಲೇ ಪ್ರಕಟವಾಗಲಿದೆ.
-ಸುದರ್ಶನ್ ಮೂಡುಬಿದಿರೆ, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷರು