Advertisement

ಪ್ಲಾಸ್ಟಿಕ್‌ ಪುನರ್ಬಳಕೆಗೂ ನಗರಸಭೆ ಅಸಡ್ಡೆ!

05:56 PM Jul 31, 2018 | Team Udayavani |

ರಾಯಚೂರು: ನಗರಸಭೆ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡುವುದಿಲ್ಲ ಎಂಬುದಷ್ಟೇ ಅಲ್ಲ; ಮಾಡಿದಷ್ಟನ್ನೂ ಸರಿಯಾಗಿ ಪುನರ್‌ ಬಳಕೆ ಮಾಡುತ್ತಿಲ್ಲ ಎಂಬುದು ಅಷ್ಟೇ ಸತ್ಯ. ತ್ಯಾಜ್ಯದಿಂದ ಪ್ಲಾಸ್ಟಿಕ್‌ ಬೇರ್ಪಡಿಸಿ ಮರು ಬಳಕೆ ಮಾಡುವ ಯಂತ್ರ ಕಳೆದ ಒಂದೂವರೇ ವರ್ಷದಿಂದ ನಿರುಪಯುಕ್ತವಾಗಿರುವುದೇ ಇದಕ್ಕೆ ನಿದರ್ಶನ. ನಗರದಲ್ಲಿ ನಿತ್ಯ 100 ಟನ್‌ಗೂ ಅಧಿಕ ತ್ಯಾಜ್ಯ ಸಂಗ್ರಹವಾಗುತ್ತಿದೆ. ಅದರಲ್ಲಿ ಕನಿಷ್ಠ 30 ರಿಂದ 40 ಟನ್‌ ವಿಲೇವಾರಿ ಆಗದೆ ಉಳಿಯುತ್ತಿದೆ.

Advertisement

ಆದರೆ, ವಿಲೇವಾರಿ ಆಗಿರುವ ತ್ಯಾಜ್ಯ ಮಾತ್ರ ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ಅದರಲ್ಲೂ ಪ್ಲಾಸ್ಟಿಕ್‌ ಮರು ಬಳಕೆಯಂತೂ ನಿಂತೇ ಹೋಗಿದೆ. ನಗರದಲ್ಲಿ ಸಂಗ್ರಹಗೊಂಡ ತ್ಯಾಜ್ಯವನ್ನೆಲ್ಲ ನಗರಸಭೆ ಯಕ್ಲಾಸಪುರ ಬಳಿ ನಿರ್ಮಿಸಿರುವ ತ್ಯಾಜ್ಯ ಸಂಗ್ರಹಣ ಘಟಕಕ್ಕೆ ಸಾಗಿಸುತ್ತದೆ. ಅದರಲ್ಲಿ ಪ್ಲಾಸ್ಟಿಕ್‌ ಮತ್ತು ಮಣ್ಣು ಬೇರ್ಪಡಿಸಲಾಗುತ್ತದೆ. ಪ್ಲಾಸ್ಟಿಕ್‌ ಸಂಸ್ಕರಣೆ ಮಾಡಿ ಮರುಬಳಕೆಗೆ ಮುಂದಾದರೆ, ಮಣ್ಣಿನಿಂದ ಕಾಂಪೋಸ್ಟ್‌ ಗೊಬ್ಬರ ತಯಾರಿಸಬಹುದು.
 
ಕಾಂಪೋಸ್ಟ್‌ ಗೊಬ್ಬರಕ್ಕೂ ಎಲ್ಲಿಲ್ಲದ ಬೇಡಿಕೆ ಇದೆ. ಆದರೆ, ನಗರಸಭೆ ಸದ್ಯ ಕಾಂಪೋಸ್ಟ್‌ ಗೊಬ್ಬರ ತಯಾರಿಕೆಗೆ ಮಾತ್ರ ಒತ್ತು ನೀಡಿದ್ದು, ಪ್ಲಾಸ್ಟಿಕ್‌ ಮರುಬಳಕೆಯನ್ನು ಕೈ ಚೆಲ್ಲಿ ಕುಳಿತಿದೆ. ಕ್ಯಾಶುಟೆಕ್‌ ನಿಂದ ಚಾಲನೆ: ಅಂದಾಜು 20 ಲಕ್ಷಕ್ಕಿಂತ ಅಧಿಕ ವೆಚ್ಚದಲ್ಲಿ ಪ್ಲಾಸ್ಟಿಕ್‌ ಸಂಸ್ಕರಣ ಯಂತ್ರ, ನಾರು ತಯಾರಿಕೆ ಯಂತ್ರಗಳನ್ನು ಅಳವಡಿಸಲಾಗಿತ್ತು. ಆ
ಜವಾಬ್ದಾರಿಯನ್ನು ಕ್ಯಾಶುಟೆಕ್‌ ಸಂಸ್ಥೆಗೆ ವಹಿಸಲಾಗಿತ್ತು. ಒಡಂಬಡಿಕೆಯಂತೆ ಕೆಲ ಕಾಲ ಕ್ಯಾಶುಟೆಕ್‌ ಈ ಕೆಲಸವನ್ನು ಸರಿಯಾಗಿ ನಿಭಾಯಿಸಿದೆ. ಕಳೆದ 2016ರ ಡಿಸೆಂಬರ್‌ನಲ್ಲಿ ಅವಧಿ ಮುಗಿದ ಕಾರಣ ನಗರಸಭೆಗೆ ಜವಾಬ್ದಾರಿ ಹಸ್ತಾಂತರಿಸಲಾಯಿತು. ಅಲ್ಲಿಂದ ಈವರೆಗೆ ಯಂತ್ರಗಳು ನಿರುಪಯುಕ್ತವಾಗಿವೆ.

ಪ್ಲಾಸ್ಟಿಕ್‌ಗೆ ಭಾರಿ ಬೇಡಿಕೆ: ತ್ಯಾಜ್ಯದಿಂದ ವಿಂಗಡಿಸುವ ಪ್ಲಾಸ್ಟಿಕ್‌ಗೆ ಸಾಕಷ್ಟು ಬೇಡಿಕೆಯಿದೆ. ಅದರಲ್ಲೂ ನಾನಾ ಬಗೆಯ ಪ್ಲಾಸ್ಟಿಕ್‌ಗಳಿದ್ದು, ಎಲ್ಲವನ್ನು ಪ್ರತ್ಯೇಕಿಸಿ ಸಂಸ್ಕರಣೆ ಮಾಡಬೇಕಿದೆ. ನಿತ್ಯ 10ರಿಂದ 15 ಟನ್‌ ಗಳವರೆಗೂ ಪ್ಲಾಸ್ಟಿಕ್‌ ಸಂಸ್ಕರಣೆಗೊಳ್ಳುತ್ತಿತ್ತು.  ಕ್ವಿಂಟಲ್‌ಗೆ 2-3 ಸಾವಿರದವರೆಗೂ ಬೆಲೆ ಸಿಗುತ್ತದೆ. ಮಾಲೆಂಗಾವ್‌, ಹೈದರಾಬಾದ್‌, ಮುಂಬಯಿನಂಥ ನಗರಗಳಿಗೆ ರಫ್ತಾಗುತ್ತಿತ್ತು. ಆದರೆ, ಈಗ ತ್ಯಾಜ್ಯ ಸಂಸ್ಕರಣೆ ನಿಂತು ಹೋದ ಕಾರಣ ನಗರಸಭೆಗೆ ನಿತ್ಯ ಸಾವಿರಾರು ರೂ. ನಷ್ಟವಾಗುತ್ತಿದೆ.

ಮತ್ತೆ ಕ್ಯಾಶುಟೆಕ್‌ಗೆ ನಿರ್ವಹಣೆ ಲಕ್ಷಾಂತರ ರೂ. ಮೌಲ್ಯದ ಯಂತ್ರಗಳು ಬಳಕೆ ಇಲ್ಲದ ಕಾರಣ ತುಕ್ಕು ಹಿಡಿಯುತ್ತಿವೆ. ಅದರ ಜತೆಗೆ ತೆಂಗಿನ ಹಗ್ಗಗಳ ತಯಾರಿಕೆ ಯಂತ್ರವೂ ನಿರುಪಯುಕ್ತವಾಗಿದೆ. ಹೀಗೇ ಬಿಟ್ಟರೆ ಯಂತ್ರಗಳು ಹಾಳಾಗುತ್ತವೆ ಎಂಬ ಕಾರಣಕ್ಕೆ ಪ್ಲಾಸ್ಟಿಕ್‌ ಸಂಸ್ಕರಣೆ ಹೊಣೆಯನ್ನು ಜಿಲ್ಲಾಡಳಿತ ಪುನಃ ಕ್ಯಾಶುಟೆಕ್‌ ಸಂಸ್ಥೆಗೆ ವಹಿಸಿದೆ.

ಕಾರಣಾಂತರಗಳಿಂದ ಪ್ಲಾಸ್ಟಿಕ್‌ ಸಂಸ್ಕರಣೆ ಘಟಕ ಸ್ಥಗಿತಗೊಂಡಿತ್ತು. ಪ್ಲಾಸ್ಟಿಕ್‌ ಪ್ರತ್ಯೇಕಿಸಿ ನೀಡುವುದು ನಗರಸಭೆ ಹೊಣೆಯಾದ್ದರಿಂದ ಸಿಬ್ಬಂದಿ ಕೊರತೆ ಎದುರಾಗಿತ್ತು. ಈಗ ಸಮಸ್ಯೆ ನಿವಾರಣೆಗೆಯಾಗಿದೆ. ಡಿಪಿಆರ್‌ ಸಿದ್ಧಗೊಂಡಿದ್ದು, ಒಪ್ಪಿಗೆಗಾಗಿ ಕಳುಹಿಸಲಾಗಿದೆ. ತಿಂಗಳೊಳಗೆ ಪುನಃ ಕಾರ್ಯಾ ಆರಂಭಿಸಲಾಗುವುದು. 
 ರಮೇಶ ನಾಯಕ, ನಗರಸಭೆ ಪೌರಾಯುಕ್ತ

Advertisement

ತ್ಯಾಜ್ಯದಿಂದ ಪ್ಲಾಸ್ಟಿಕ್‌ ಬೇರ್ಪಡಿಸಿ ಕಾಂಪೋಸ್ಟ್‌ ಗೊಬ್ಬರ ತಯಾರಿಸಲಾಗುತ್ತಿದೆ. ಹಿಂದೆ ಪ್ಲಾಸ್ಟಿಕ್‌ ಸಂಸ್ಕರಿಸಿ ಬೇರೆಡೆ ರಫ್ತು ಮಾಡಲಾಗುತ್ತಿತ್ತು. ನಮ್ಮ ಒಪ್ಪಂದದಂತೆ 2016ರ ಡಿಸೆಂಬರ್‌ನಲ್ಲಿಯೇ ನಗರಸಭೆಗೆ ಜವಾಬ್ದಾರಿ ಹಸ್ತಾಂತರಿಸಲಾಗಿದೆ. ಆದರೆ, ಅವರು ಸರಿಯಾಗಿ ನಿಭಾಯಿಸದ ಕಾರಣ ಯಂತ್ರಗಳು ಹಾಳಾಗುತ್ತಿವೆ. ಸಂಸ್ಕರಿತ ಪ್ಲಾಸ್ಟಿಕ್‌ಗೆ ಎಲ್ಲಿಲ್ಲದ ಬೇಡಿಕೆಯಿದೆ. ಯಂತ್ರಗಳ ದುರಸ್ತಿ ಕಾರ್ಯ ಕೈಗೊಂಡು ಆಗಸ್ಟ್‌ ಅಂತ್ಯಕ್ಕೆ ಕಾರ್ಯಾರಂಭಿಸುವ ಉದ್ದೇಶವಿದೆ. 
 ಶರಣಬಸಪ್ಪ ಪಟ್ಟೇದ, ಕ್ಯಾಶುಟೆಕ್‌ ಅಧಿಕಾರಿ

ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next