Advertisement

ಆಮಿಷಕ್ಕೆ ಒಳಗಾಗಿರುವ ಪುರಸಭೆ ಅಧ್ಯಕ್ಷ: ಆರೋಪ 

12:39 PM Jul 05, 2017 | Team Udayavani |

ಪಿರಿಯಾಪಟ್ಟಣ: ಕೋಳಿ ಮಾಂಸ ಮಾರಾಟ ಅಂಗಡಿಗಳ ಹರಾಜಿನಲ್ಲಿ ಅಧ್ಯಕ್ಷ  ವೇಣುಗೋಪಾಲ್‌ ಆಮಿಷಕ್ಕೆ ಒಳಗಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಪಿ.ಡಿ.ತ್ರಿನೇಶ್‌ ಆರೋಪ ಮಾಡಿದ ಘಟನೆ ನಡೆಯಿತು.

Advertisement

ಪಟ್ಟಣದ ಪುರಸಭಾ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತ ಮತ್ತು ಪ್ರತಿ ಪಕ್ಷದ ಸದಸ್ಯರ ನಡುವೆ ವಾಗ್ಧಾಳಿ ನಡೆಯಿತು. ಕಳೆದ ಹಲವು ತಿಂಗಳುಗಳ ಹಿಂದೆ ಪುರಸಭೆ ವ್ಯಾಪ್ತಿಗೆ ಸೇರಿದ್ದ ಮಾಂಸದಂಗಡಿಗಳನ್ನು ಹರಾಜು ಮಾಡಲಾಗಿದ್ದು ಜಾಗದ ಗೊಂದಲದಿಂದ 2-3 ಬಾರಿ ಹರಾಜಿನ ಪ್ರಕ್ರಿಯೆ ನಡೆದರೂ ಸಹ ಅಂಗಡಿಗಳನ್ನು ಪಡೆಯಲು ಸರಿಯಾದ ರೀತಿಯಲ್ಲಿ ಯಾರು ಮುಂದಾಗದ ಕಾರಣ ಕಡಿಮೆ ಮೊತ್ತದಲ್ಲಿ ಹರಾಜು ನಿಗದಿ ಪಡಿಸಲಾಗಿತ್ತು.

ಕಳೆದ 3 ತಿಂಗಳ ಹಿಂದೆ ಜಾಗದ ಸಮಸ್ಯೆ ಪರಿಹಾರವಾಗಿದ್ದು ಜಾಗವು ಪುರಸಭೆಯ ಆಡಳಿತ ವ್ಯಾಪ್ತಿಯಲ್ಲಿ ಇರುವುದರಿಂದ ಸರ್ಕಾರದ ನಿಯಮದ ಪ್ರಕಾರ ಅಂಗಡಿಗಳನ್ನು ಮರು ಹರಾಜು ಪ್ರಕ್ರಿಯೆ ಮೂಲಕ ನೀಡಿದ್ದರೆ ಪುರಸಭೆಯ ಬೊಕ್ಕಸಕ್ಕೆ ಅನುಕೂಲವಾಗುತ್ತಿದ್ದು ಈಗ ಕಳೆದ 3 ತಿಂಗಳಿನಿಂದ ಹಾಗೆ ಉಳಿದಿರುವ ಪರಿಣಾಮ ಪುರಸಭೆಗೆ ನಷ್ಟವಾಗಿದೆ ಎಂದು ಆರೋಪಿಸಿದರು.

ಪುರಸಭೆ ವ್ಯಾಪ್ತಿಯಲ್ಲಿ ಹಲವಾರು ಸಮಸ್ಯೆಗಳು ಎದುರಾಗಿದ್ದರೂ ಯಾವುದೇ ತುರ್ತು ಸಭೆ ಕರೆಯದೆ ನಿರ್ಣಯ ತೆಗೆದುಕೊಳ್ಳದೆ ಹಲವಾರು ಅಭಿವೃದ್ಧಿ ಕಾರ್ಯ ಬಾಕಿ ಉಳಿದಿದೆ. ಇದರಿಂದ ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಪ್ರತಿ ಪಕ್ಷದ ಸದಸ್ಯರಾದ ಸುರೇಶ್‌, ಎ.ಕೆ.ಅಶೋಕ್‌, ಪಿ.ಮಹದೇವ್‌, ಸೇರಿದಂತೆ ಹಲವಾರರು ಅಧ್ಯಕ್ಷ ವೇಣುಗೋಪಾಲ್‌ ರವರಿಗೆ ತರಾಟೆಗೆ ತೆಗೆದುಕೊಂಡರು.

ಸಂಬಂಧಪಟ್ಟ ವಾರ್ಡ್‌ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳದೆ ಅಧ್ಯಕ್ಷರು ಸರ್ವಾಧಿಕಾರದಿಂದ ಕೆಲಸ ನಿರ್ವಹಿಸುತ್ತಿದ್ದು, ಇದಕ್ಕೆ ಅಧಿಕಾರಿಗಳೂ ಸಹ ಪಾಲುದಾರರಾಗಿದ್ದಾರೆ, ಆಯಾಯ ವಾರ್ಡಿನ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗೆ ಮುಂದಾಗಬೇಕೆಂದು ಸೂಚಿಸಿದರು. ಪುರಸಭೆ ಮುಖ್ಯಾಧಿಕಾರಿ ಡಿ.ಪುಟ್ಟರಾಜು ಪ್ರತಿಕ್ರಿಯಿಸಿ ಸಭೆಯ ನಡವಳಿಕೆಯ ಪ್ರಕಾರ ನಡೆದುಕೊಳ್ಳುತ್ತಿದ್ದು ಹಿರಿಯ ಅಧಿಕಾರಿಗಳ ಆದೇಶದಡಿಯಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದೇನೆ,

Advertisement

ಕೆಲಸ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಸಭೆಯಲ್ಲಿ ಕೋರಿದರು. ಹಳೆಯ ಪಪಂ ವ್ಯಾಪ್ತಿಯಲ್ಲಿನ ಬಡಾವಣೆಗಳಿಗೆ ಅಭಿವೃದ್ಧಿ ಕುಂಟಿತವಾಗಿದ್ದು ಪುರಸಭೆ ಆದ ನಂತರ ಸೇರಿಕೊಂಡ ಗ್ರಾಪಂ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಬಡಾವಣೆಗಳಿಗೆ ಅಗತ್ಯ ಸೌಲಭ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ. ಇದರ ಬಗ್ಗೆ ಅನುಮಾನವಾಗಿದೆ ಎಂದು ತಿಳಿಸಿದರು.

ಸರ್ಕಾರದಿಂದ ಬಂದ ವಿವಿಧ ಯೋಜನೆಗಳ ಅನುದಾನದ ಅಡಿಯಲ್ಲಿ ಆದ್ಯತೆ ಮೇರೆಗೆ ಕುಡಿಯುವ ನೀರು ಸ್ಮಶಾನ ಅಭಿವೃದ್ಧಿ, ಚರಂಡಿಗಳ ನಿರ್ಮಾಣ ಮತ್ತು ಸಂತೆ ಮಾಂಸದಂಗಡಿಗಳ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು ವಿನಾ ಕಾರಣ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿ ಪಡಿಸಲಾಗುತ್ತಿದೆ. ಎಲ್ಲರೂ ಸಹಕಾರ ನೀಡಬೇಕು ಎಂದು ಅಧ್ಯಕ್ಷ ವೇಣುಗೋಪಾಲ್‌ ಮನವಿ ಮಾಡಿದರು. ಸಭೆಯ ಮುನ್ನ ಮಾಜಿ ಸದಸ್ಯ ಎಚ್‌.ಎಂ.ಚೆನ್ನಯ್ಯ ನಿಧನವಾದ ಹಿನ್ನೆಲೆ ಮೌನ ಆಚರಿಸಲಾಯಿತು.

ಪುರಸಭೆಗೆ ನೂತನವಾಗಿ ಅಧಿಕಾರ ವಹಿಸಿಕೊಂಡ ನೌಕರರಾದ ಮಧು, ಸಂದೀಪ್‌, ಪ್ರಸನ್ನ, ಕುಮಾರ್‌ರನ್ನು ಪರಿಚಯಿಸಲಾಯಿತು. ಉಪಾಧ್ಯಕ್ಷೆ ರತ್ನಶಿವಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷೆ ತನುಜಾ ರಮೇಶ್‌, ಸದಸ್ಯರಾದ ರಮೇಶ್‌, ಮಂಜುನಾಥ್‌ ಸಿಂಗ್‌, ರುದ್ರಮ್ಮ, ಪಿ.ವಿ.ನಂಜುಂಡ ಸ್ವಾಮಿ, ಮಂಜುನಾಥ್‌, ಪಿ.ಎನ್‌.ಮಹದೇವ್‌, ಅಂಜು, ಪುಟ್ಟಯ್ಯ, ಸುವರ್ಣಮ್ಮ, ನಾಗರತ್ನಮ್ಮ, ಸೌಭಾಗ್ಯ, ವ್ಯವಸ್ಥಾಪಕ ರೇವಣ್ಣ ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next