Advertisement

ಮೂಲಭೂತ ಸೌಲಭ್ಯಗಳಿಗೆ ಆಗ್ರಹಿಸಿ ಪುರಸಭೆಗೆ ಮುತ್ತಿಗೆ

11:49 AM May 20, 2019 | pallavi |

ತೇರದಾಳ: ಅನೇಕ ವಾರ್ಡ್‌ಗಳಲ್ಲಿ ಕೊಳವೆಬಾವಿ ಕೊರೆಸುವುದು, ಬೀದಿದೀಪ ಅಳವಡಿಕೆ, ಪಟ್ಟಣ ಶುಚಿತ್ವಕ್ಕೆ ಆದ್ಯತೆ ನೀಡುವಂತೆ ಆಗ್ರಹಿಸಿ ತೇರದಾಳ ತಾಲೂಕು ಹೋರಾಟ ಸಮಿತಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಮುಖಂಡರು ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

Advertisement

ಪುರಸಭೆ ಮಾಜಿ ಅಧ್ಯಕ್ಷ, ಹೋರಾಟ ಸಮಿತಿ ಕಾರ್ಯದರ್ಶಿ ಬಸವರಾಜ ಬಾಳಿಕಾಯಿ ಮಾತನಾಡಿ, ಮೂಲಭೂತ ಸೌಲಭ್ಯಗಳ ಪೂರೈಕೆಗೆ ಪುರಸಭೆ ಕ್ರಮ ಕೈಗೊಳ್ಳಬೇಕೆಂದು ಹೋರಾಟ ಸಮಿತಿ ಪರವಾಗಿ ಲಿಖೀತವಾಗಿ ಮನವರಿಕೆ ಮಾಡಲಾಗಿತ್ತು. ಆದರೆ, ಪುರಸಭೆ ಗಮನ ಹರಿಸಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ದೇವರಾಜ ನಗರದ ಬಹುತೇಕ ಭಾಗಗಳಲ್ಲಿ ನೀರಿನ ಸಮಸ್ಯೆ ತೀವ್ರತರವಾಗಿದೆ. ಕೊಳವೆ ಬಾವಿ ಕೊರೆಯಿಸಿ ನೀರಿನ ಸಮಸ್ಯೆ ದೂರ ಮಾಡಬೇಕು. ಗಾಂಧಿ ಕ್ರೀಡಾಂಗಣ, ಸರಕಾರಿ ಆಸ್ಪತ್ರೆಯ ಹಳೆ ಕಟ್ಟಡದಲ್ಲಿ ಬಾಟಲಿ ಒಡೆಯುವುದು ಸೇರಿದಂತೆ ಅನೈತಿಕ ಚಟುವಟಿಕೆ ನಡೆಯುತ್ತಿವೆ. ಪೊಲೀಸ್‌ ಇಲಾಖೆಯ ಸಹಯೋಗದೊಂದಿಗೆ ಕ್ರಮ ಜರುಗಿಸಬೇಕಾಗಿದೆ. ಬೀದಿ ದೀಪಗಳಿಲ್ಲದೆ ಅನೇಕ ಕಡೆಗಳಲ್ಲಿ ತೊಂದರೆಯಾಗುತ್ತಿದೆ. ನೀರು, ಬೀದಿ ದೀಪ, ಚರಂಡಿ ಸೇರಿದಂತೆ ಶುಚಿತ್ವಕ್ಕೆ ಮಹತ್ವ ನೀಡಬೇಕೆಂದು ಆಗ್ರಹಿಸಿದರು.

ಬಳಿಕ ಮುಖ್ಯಾಧಿಕಾರಿ ಮಹಾವೀರ ಬೋರನ್ನವರ ಮಾತನಾಡಿ, ಅನೇಕ ಕೊಳವೆ ಬಾವಿ ದುರಸ್ತಿ ಮಾಡಿ, ಅಲ್ಲಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಹೊಸ ಕೊಳವೆ ಬಾವಿ ಕೊರೆಸುವ ಕುರಿತು ಕ್ರಮ ಕೈಗೊಳ್ಳಲಾಗುವುದು. ಬೀದಿದೀಪಗಳ ಕುರಿತು ಕೂಡಲೆ ವ್ಯವಸ್ಥೆ ಮಾಡಲಾಗುವುದು. ಕಡಿಮೆ ಸಿಬ್ಬಂದಿ ಇದ್ದರೂ ಸಹ ನಗರದ ಸ್ವಚ್ಛತೆಗೆ ಆದ್ಯತೆ ಕೊಡಲಾಗುತ್ತಿದೆ ಎಂದು ಹೇಳಿದರು.

ಹೋರಾಟ ಸಮಿತಿ ಅಧ್ಯಕ್ಷ ಭುಜಬಲಿ ಕೆಂಗಾಲಿ, ಪುರಸಭೆ ಸದಸ್ಯರಾದ ಸುರೇಶ ಕಬಾಡಗಿ, ಫಜಲ್ ಅತಾರಾವುತ್‌, ರುಸ್ತುಂ ನಿಪ್ಪಾಣಿ, ಮುಖಂಡರಾದ ಪ್ರಭು ಗಸ್ತಿ, ರಾಜೇಸಾಬ ನಗಾರ್ಜಿ, ಕಲ್ಲಪ್ಪ ಕಬಾಡಗಿ, ಮುರಿಗೆಪ್ಪ ಹನಗಂಡಿ, ಸುಲೇಮಾನ್‌ ಮುಕ್ಕೇರಿ, ಪ್ರಭು ಹೂಗಾರ, ಸಿದ್ಧಪ್ಪ ಉಳಗೊಂಡ, ಚಿಕ್ಕಪ್ಪ ಲೋಹಾರ್‌, ಇಕ್ಬಾಲ್ ಥರಥರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next