Advertisement

ಕೊಳವೆಬಾವಿ ಜಲಮರುಪೂರಣ ವ್ಯವಸ್ಥೆಗೆ ನಗರಸಭೆಯಲ್ಲಿ ಅನುದಾನವಿಲ್ಲ!

12:51 AM May 13, 2019 | Sriram |

ನಗರ : ಅರುವತ್ತು ಸಾವಿರಕ್ಕೂ ಮಿಕ್ಕಿ ಜನಸಂಖ್ಯೆ ಇರುವ ನಗರಸಭಾ ವ್ಯಾಪ್ತಿಯ 155 ಕೊಳವೆಬಾವಿಗಳಿಗೆ ಜಲಮರುಪೂರಣಕ್ಕೆ ಪುತ್ತೂರು ನಗರಸಭೆ ಯಾವುದೇ ಘಟಕ ನಿರ್ಮಿಸಿಲ್ಲ!

Advertisement

2017ರಲ್ಲಿ ಅಂತರ್ಜಲ ಕುಸಿತ ಹಾಗೂ ಅಂತರ್ಜಲಕ್ಕೆ ನೀರಿಂಗುವ ಪ್ರಮಾಣ ಕಡಿಮೆಯಾದ ಪರಿಣಾಮ ಪುತ್ತೂರು ತಾಲೂಕಿನಾದ್ಯಂತ ಖಾಸಗಿ ಹೊಸ ಬೋರ್‌ವೆಲ್ ಕೊರೆಯುವುದು ನಿಷೇಧಿಸುವಂತೆ ಸರಕಾರ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಜಿ.ಪಂ. ಸಹಯೋಗದಲ್ಲಿ ಖಾಸಗಿ ಕೊಳವೆಬಾವಿಗಳಿಗೆ ಜಲಮರುಪೂರಣ ಘಟಕ ನಿರ್ಮಾಣ ಮಾಡುವ ಕುರಿತು ಅನೇಕ ಜಾಗೃತಿ, ಮಾಹಿತಿ ಕಾರ್ಯಾಗಾರ ಕೈಗೊಂಡಿದೆ.

ಇದರ ಜತೆಗೆ ಗ್ರಾ.ಪಂಗಳ ನೀರು ಸರಬರಾಜು ಕೊಳವೆಬಾವಿಗಳಿಗೂ ಜಲಮರುಪೂರಣ ಘಟಕ ನಿರ್ಮಾಣಕ್ಕೆ ಅನುದಾನವನ್ನೂ ನೀಡಿತ್ತು. ಆದರೆ ಪುತ್ತೂರು ನಗರಸಭೆ ತನ್ನ ಅಧೀನದ 155 ಕೊಳವೆಬಾವಿಗಳಿಗೆ ಜಲಮರುಪೂರಣಕ್ಕೆ ಅನುದಾನ ಕೊರತೆಯ ನೆಪವೊಡ್ಡಿ ಈ ಕಾರ್ಯದಿಂದ ಹಿಂದೆ ಸರಿದಿದೆ.

ನೀರಿನ ಮೂಲ
ನಗರಕ್ಕೆ ಪ್ರತಿದಿನ ಬೇಕಾದ ನೀರಿನ ಪ್ರಮಾಣ 7.5 ಎಂಎಲ್ಡಿ. ಅದರಲ್ಲಿ 6.5 ಎಂಎಲ್ಡಿ ನೀರು ನೆಕ್ಕಿಲಾಡಿಯಿಂದ, 1 ಎಂಎಲ್ಡಿ ಕೊಳವೆ ಬಾವಿಗಳಿಂದ ಸಿಗುತ್ತಿದೆ. ನೆಕ್ಕಿಲಾಡಿ ಬಳಿ ಕುಮಾರಾಧಾರಾ ನದಿಗೆ ಅಳವಡಿಸಿದ ಡ್ಯಾಂನಿಂದ ಕುಡ್ಸೆಂಪ್‌ ಯೋಜನೆ ಮೂಲಕ ಸೀಟಿಗುಡ್ಡೆ ಮತ್ತು ಚಿಕ್ಕಮುಟ್ನೂರು ಗ್ರಾಮದಲ್ಲಿ ನಿರ್ಮಿಸಿದ ಟ್ಯಾಂಕಿಗೆ ನೀರು ಹಾಯಿಸಿ ನಗರಕ್ಕೆ ಪೂರೈಸಲಾಗುತ್ತದೆ. ಇದನ್ನು ಹೊರತು ಪಡಿಸಿ ಕೊಳವೆ ಬಾವಿಗಳೇ ಜಲಮೂಲ.

ಎಂಟು ವಲಯಗಳು
ನಗರದಲ್ಲಿ 9265 ಮನೆ, 820 ಗೃಹೇತರ 193 ವಾಣಿಜ್ಯ ಆಧಾರಿತ ನಳ್ಳಿ ಸಂಪರ್ಕಗಳು ಇವೆ. ಈ 3 ವಿಭಾಗಕ್ಕೂ ಲೀಟರ್‌ ನೀರಿಗೆ ಬೇರೆ ಬೇರೆ ದರ ಇದೆ. ಇದಕ್ಕೆ ನೀರು ಪೂರೈಕೆಗೆ 8 ವಲಯಗಳಿವೆ.

Advertisement

ಚಿಕ್ಕಮುಟ್ನೂರು (15 ಲಕ್ಷ ಲೀ.), ಪಟ್ನೂರು (25 ಸಾವಿರ ಲೀ), ಕರ್ಮಲ (25 ಸಾವಿರ ಲೀ), ಸೀಟಿಗುಡ್ಡೆ (9 ಲಕ್ಷ ಲೀ.), ಕಬಕ ಲಿಂಗದಗುಡ್ಡೆ (25 ಸಾ.ಲೀ), ಬಲ್ನಾಡು (1 ಲಕ್ಷ ಲೀ.), ಬೀರಮಲೆ (5 ಲಕ್ಷ ಲೀ.) ಬಲ್ನಾಡು (10 ಸಾವಿರ ಲೀ) ನೀರು ಪೂರೈಕೆ ಆಗುತ್ತದೆ. ಜಲಮೂಲಗಳ ಪೈಕಿ ನಗರಕ್ಕೆ ಬಹು ಪಾಲು ನೀರೊದಗಿಸುವುದು ನೆಕ್ಕಿಲಾಡಿ ಡ್ಯಾಂ.

2017ರಲ್ಲಿ ಮಂಗಳೂರಿಗೆ ನೀರು ಸರಬರಾಜು ಜವಾಬ್ದಾರಿ ಇದ್ದ ಹಾಗೂ ನೆಕ್ಕಿಲಾಡಿಯಲ್ಲಿ ನೀರಿನ ಮಟ್ಟ ಕುಸಿದ ಪರಿಣಾಮ ನಗರದಲ್ಲಿ ಜಲಕ್ಷಾಮದ ಆತಂಕ ಸೃಷ್ಟಿಯಾಗಿತ್ತು. ಕೊನೆಯ ಕ್ಷಣದಲ್ಲಿ ಪುತ್ತೂರು ನಗರಕ್ಕೆ ಕುಡಿಯುವ ನೀರೊದಗಿಸಿದ್ದೇ ನಗರಸಭಾ ವ್ಯಾಪ್ತಿಯ ಬೋರ್‌ವೆಲ್ಗಳು. ಆದರೆ ಈ ಬೋರ್‌ವೆಲ್ಗಳಲ್ಲಿ ಪ್ರಸ್ತುತ ನೀರು ಕಡಿಮೆ ಯಾಗುತ್ತಿದ್ದು, ಕೊಳವೆಬಾವಿಗಳಿಗೆ ಜಲ ಮರುಪೂರಣ ಘಟಕ ನಿರ್ಮಿಸದೇ ಇದ್ದಲ್ಲಿ ಬಹುತೇಕ ಕೊಳವೆಬಾವಿಗಳಲ್ಲಿ ನೀರು ಖಾಲಿಯಾಗುವ ಆತಂಕ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next