ಕೋಲಾರ: ಮಳೆಗಾಲದಲ್ಲಿ ಉಂಟಾಗಲಿರುವ ಹಾನಿಯನ್ನು ತಡೆಗಟ್ಟಲು ನಗರಸಭೆ ಮುಂಜಾಗ್ರತಾ ಕ್ರಮವಾಗಿ ನಗರದ 35 ವಾರ್ಡ್‌ಗಳ ಚರಂಡಿಗಳನ್ನು ಸಮಗ್ರವಾಗಿ ಸ್ವಚ್ಛಗೊಳಿಸಲು ಮುಂದಾಗಿದೆ.
ಇದರಿಂದ ಎಚ್ಚೆತ್ತುಕೊಂಡಿರುವ ಕೋಲಾರ ನಗರಸಭೆಯು ಮಳೆ ಹಾನಿ ತಡೆಯುವ ಮುಂಜಾಗ್ರತಾ ಕ್ರಮದ ಮೊದಲ ಭಾಗವಾಗಿ ನಗರದ ಚರಂಡಿ ಸಮಗ್ರವಾಗಿ ಸ್ವಚ್ಛಗೊಳಿಸಲು ಮುಂದಾಗಿದೆ. ಇದಕ್ಕಾಗಿ ಚುನಾವಣಾ ನೀತಿ ಸಂಹಿತಿ ಅಡ್ಡಿ ಬರುವ ಸಾಧ್ಯತೆಗಳಿದ್ದರೂ, ತುರ್ತು ಕಾರ್ಯದಡಿ ಕಾಮಗಾರಿ ಕೈಗೆತ್ತಿಕೊಳ್ಳುವ ಕುರಿತು ಡೀಸಿ ಜತೆ ಚರ್ಚಿಸಲು ನಗರಸಭೆ ಪೌರಾಯುಕ್ತ ಸತ್ಯನಾರಾಯಣ ನಿರ್ಧರಿಸಿದ್ದಾರೆ.
ಡೀಸಿಯಿಂದ ಅನುಮೋದನೆ ಬಂದ ತಕ್ಷಣದಿಂದಲೇ ನಗರಸಭೆ ನಿಧಿಯನ್ನು ಬಳಸಿಕೊಂಡು ಅವಕಾಶವಿದ್ದರೆ ಅಲ್ಪಾವಧಿ ಟೆಂಡರ್ ಕರೆದು ಅಥವಾ ಇಲ್ಲವೇ ಸಾರ್ವಜನಿಕರ ಹಿತಾಸಕ್ತಿಯಿಂದ ನೇರವಾಗಿ ಚರಂಡಿ ಸ್ವಚ್ಛತಾ ಕಾರ್ಯಕೈಗೆತ್ತಿಕೊಳ್ಳುವ ಕುರಿತು ನಗರಸಭೆ ಚಿಂತಿಸುತ್ತಿದೆ. ಇದರ ಹೊರತಾಗಿಯೂ ಕಳೆದ ವಾರ ಮಳೆ ಸುರಿದು ಹಾನಿಯಾದ ಪ್ರದೇಶಗಳು ಮತ್ತು ಇನ್ನಿತರೆಡೆ ದೂರುಗಳು ಬಂದ ಜಾಗಗಳಲ್ಲಿ ಚರಂಡಿ ಸ್ವಚ್ಛತೆ ನಗರಸಭೆಯಿಂದ ಕೈಗೆತ್ತಿಕೊಳ್ಳಲಾಗುತ್ತಿದೆ.
ಮರಗಳ ಕುರಿತು ಮಾಹಿತಿ ನೀಡಿ: ನಗರದ 35 ವಾರ್ಡ್‌ಗಳಲ್ಲಿ ಮಳೆ ಹಾನಿ ಪ್ರದೇಶಗಳಿದ್ದರೆ ಅಂತಹವುಗಳನ್ನು ಗುರುತಿಸಿ ನಗರಸಭೆಗೆ ಮಾಹಿತಿ ನೀಡಬಹುದು. ಚರಂಡಿ ತುಂಬಿಕೊಂಡಿರುವುದು, ಮರ ಬೀಳುವ ಸ್ಥಿತಿಯಲ್ಲಿದ್ದರೆ, ಮಳೆ ಬಂದ್ರೆ ಕುಸಿಯಬಹುದಾದ ಹಳೇ ಕಟ್ಟಡ, ನೀರು ನುಗ್ಗುವ ತಗ್ಗು ಪ್ರದೇಶ, ಮಳೆಯಿಂದಾಗುವ ಸಮಸ್ಯೆಗಳ ಕುರಿತಂತೆ ಸಾರ್ವಜನಿಕರು ನಗರಸಭೆಗೆ ಮಾಹಿತಿ ದೂರು ನೀಡಿದರೆ ತಕ್ಷಣ ಗಮನಹರಿಸಲು ತೀರ್ಮಾನಿಸಲಾಗಿದೆ.
Advertisement
ಕಳೆದ ವಾರ ಸುರಿದ ಭರ್ಜರಿ ಮಳೆಯಿಂದಾಗಿ ನಗರದಲ್ಲಿ 30ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, ಮರಗಳು ಉರುಳಿ ಬಿದ್ದಿದ್ದವು. ಚರಂಡಿಗಳಲ್ಲಿ ಕಸ, ಪ್ಲಾಸ್ಟಿಕ್ ತ್ಯಾಜ್ಯ ತುಂಬಿಕೊಂಡು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು. ಪ್ರಾಣ ಹಾನಿ ಸಂಭವಿಸಿಲ್ಲವಾದರೂ, ನಿವಾಸಿಗಳು ಇಡೀ ರಾತ್ರಿ ಕಿರಿಕಿರಿ ಅನುಭವಿಸಿದ್ದರು.
Related Articles
Advertisement
ಮರಗಳ ತೆರವಿಗೆ ಮೊರೆ: ನಗರದಲ್ಲಿ ಕಳೆದ ವಾರ ಸುರಿದ ಮಳೆಗೆ 50ಕ್ಕೂ ಹೆಚ್ಚು ಮರಗಳು ಬಿದ್ದಿದ್ದವು. ಇವುಗಳಲ್ಲಿ ಬಹುತೇಕ ವಿದ್ಯುತ್ ಕಂಬಗಳ ಮೇಲೆ ಬಿದ್ದಿದ್ದರಿಂದ ಅವುಗಳಿಗೂ ಹಾನಿಯಾಗಿತ್ತು. 24 ಗಂಟೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುವಂತಾಗಿತ್ತು. ಈ ರೀತಿಯ ಸಮಸ್ಯೆಗಳು ಮಂದೆ ಆಗದಂತೆ ಎಚ್ಚರವಹಿಸಲು, ನಾಗರಿಕರು ತಮ್ಮ ಸುತ್ತಮುತ್ತಲ ಪ್ರದೇಶಗಳಲ್ಲಿರುವ ಶಿಥಿಲ ಮರಗಳ ಬಗ್ಗೆ ಮಾಹಿತಿ ನೀಡಿದ್ರೆ ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಸೂಚಿಸಲಾಗಿದೆ.
ಪ್ಲಾಸ್ಟಿಕ್, ಮಾಂಸದಿಂದ ಚರಂಡಿ ಬ್ಲಾಕ್: ನಗರದಲ್ಲಿ ಕಳೆದ ವಾರ ಮಳೆ ನೀರು ರಸ್ತೆ ಮೇಲೆ ಹಾಗೂ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಲು ಪ್ಲಾಸ್ಟಿಕ್ ತ್ಯಾಜ್ಯ, ಮಾಂಸ, ಮೂಳೆ ಹಾಗೂ ವಸತಿ ಗೃಹಗಳಿಂದ ಹೇರಳ ಪ್ರಮಾಣದಲ್ಲಿ ಒಳಚರಂಡಿ ಸೇರುತ್ತಿರುವ ನಿರೋಧ್ ಬುಡ್ಡೆಗಳೇ ಕಾರಣ ಎಂದು ಪೌರಾಯುಕ್ತ ಸತ್ಯನಾರಾಯಣ ವಿವರಿಸುತ್ತಾರೆ.
ಸಾಮಾನ್ಯ ಕಸ ಚರಂಡಿಯಲ್ಲಿ ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತದೆ. ಆದರೆ, ಮಾಂಸ, ಮೂಳೆ ತ್ಯಾಜ್ಯವು ನೀರು ಸರಾಗವಾಗಿ ಹರಿಯಲು ಬಿಡುತ್ತಿಲ್ಲ. ಅದರಲ್ಲೂ ಬಸ್ ನಿಲ್ದಾಣ ಸುತ್ತಮುತ್ತಲು ವಸತಿ ಗೃಹಗಳಿಂದ ಒಳಚರಂಡಿ ಸೇರುತ್ತಿರುವ ನಿರೋಧ್ ಬುಡ್ಡೆಗಳು ಚರಂಡಿಗಳನ್ನು ಬ್ಲಾಕ್ ಮಾಡಿಸುತ್ತಿವೆ. ಬಸ್ ನಿಲ್ದಾಣದ ಚರಂಡಿಯಿಂದ ನಿರೋಧ್ ತ್ಯಾಜ್ಯ ಒಂದು ಮಂಕರಿಯಷ್ಟು ಹೊರಕ್ಕೆ ತೆಗೆಯಲಾಯಿತೆಂದು ನಗರಸಭೆ ಸಿಬ್ಬಂದಿ ವಿವರಿಸುತ್ತಾರೆ.
ಸಾರ್ವಜನಿಕರ ಪಾತ್ರ: ಮಳೆ ಹಾನಿಯಾದಾಗ ನಗರ ಸಭೆ ಶಪಿಸುತ್ತಾ ಕಿರಿಕಿರಿ ಅನುಭವಿಸುವುದು ಬಿಟ್ಟು, ಆದಷ್ಟು ತಮ್ಮ ಮನೆಗಳ ಸುತ್ತಮುತ್ತಲ ಚರಂಡಿ ನೀರು ಸರಾಗವಾಗಿ ಹರಿಯುತ್ತದೆಯೇ ಇಲ್ಲವೇ ಎನ್ನುವುದ ರತ್ತ ಗಮನಹರಿಸಬೇಕು. ವ್ಯಾಪಾರಿಗಳು ಮತ್ತು ನಾಗ ರಿಕರು ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸಬೇಕು, ಮಾಂಸ ವ್ಯಾಪಾರಿಗಳು ತಮ್ಮಲ್ಲಿ ಉತ್ಪತ್ತಿಯಾಗುವ ಮಾಂಸ, ಮೂಳೆ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಗರದ ಹೊರ ಭಾಗದಲ್ಲಿ ವಿಲೇವಾರಿ ಮಾಡಲು ಮುಂದಾಗದಿದ್ದರೆ ಅಪಾಯ ಕಟ್ಟಿಟ್ಟದ್ದು ಎಂದು ನಗರಸಭೆ ಎಚ್ಚರಿಸುತ್ತಿದೆ.
ಗ್ರಾಮಾಂತರದಲ್ಲೂ ಮುನ್ನಚ್ಚರಿಕೆ ಕ್ರಮ:
ಮಳೆ ಹಾನಿ ಕೇವಲ ನಗರಕಷ್ಟೇ ಅಲ್ಲ, ಹಳ್ಳಿಗಳಲ್ಲಿಯೂ ಸಂಭವಿಸಿದೆ. ಯಾವುದೇ ಕಾರಣಕ್ಕೂ ಮಳೆ ಹಾನಿಯಿಂದ ಸರ್ಕಾರಿ, ಖಾಸಗಿ ಆಸ್ತಿಗೆ, ಪ್ರಾಣಹಾನಿಯಂತ ಘಟನೆಗಳು ನಡೆಯದಂತೆ ಆಯಾ ಗ್ರಾಪಂ ವ್ಯಾಪ್ತಿಯಲ್ಲಿಯೇ ಅನುದಾನ ಬಳಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಬೆಳೆ ಹಾನಿ: ಬೆಳೆ ಹಾನಿ ತಡೆಗಟ್ಟಲು ಸಾಧ್ಯವಿಲ್ಲವಾದರೂ, ಹಾನಿ ಸಮೀಕ್ಷೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಷ್ಟ ಹೊಂದಿರುವ ರೈತರಿಗೆ ಪರಿಹಾರ ಕೊಡಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಕಳೆದ ವರ್ಷ ಮಳೆಯಿಲ್ಲದೆ ಜಿಲ್ಲೆಯಲ್ಲಿ ಬರ ಆವರಿಸಿದೆ. ಈ ಬಾರಿ ಕೊಂಚ ಸಮಾಧಾನಕರವಾಗಿ ಮಳೆ ಸುರಿಯುತ್ತಿದೆ. ಆದರೂ, ಮಳೆ ಹಾನಿ ಆಗದಂತೆ ಎಚ್ಚರವಹಿಸುವಂತೆ ಜಿಲ್ಲಾಡಳಿತ, ತಾಲೂಕು ಆಡಳಿತ ಚುರುಕುಗೊಳಿಸುವಲ್ಲಿ ಇತ್ತೀಚಿಗೆ ಸುರಿದ ಮಳೆ ಸಫಲವಾಗಿದೆ.
● ಕೆ.ಎಸ್.ಗಣೇಶ್