Advertisement

ಇಂದು ಪುರಸಭೆ ಚುನಾವಣಾ ಫ‌ಲಿತಾಂಶ

10:22 AM May 31, 2019 | Suhan S |

ಕೆ.ಆರ್‌.ಪೇಟೆ: ಪುರಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಸರಳ ಬಹುಮತಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವ ನಿರೀಕ್ಷೆ ಇರುವುದರಿಂದ ಮತ್ತೆ ಪುರಸಭಾ ಆಡಳಿತ ಕಾಂಗ್ರೆಸ್‌ ತೆಕ್ಕೆಗೆ ಬರುವ ಸಾಧ್ಯತೆಗಳೆ ಹೆಚ್ಚಾಗಿ ಕಂಡು ಬರುತ್ತಿವೆ.

Advertisement

ಚುನಾವಣೆ ದಿನಾಂಕ ಘೋಷಣೆ ಆದಂದಿ ನಿಂದಲೂ ಕಾಂಗ್ರೆಸ್‌ ಮುಖಂಡರ ಒಗ್ಗಟ್ಟು, ಜೆಡಿಎಸ್‌ ಬಂಡಾಯ, ಬಿಜೆಪಿಯವರ ನಿರ್ಲಕ್ಷ್ಯದಿಂದಾಗಿ ಕಾಂಗ್ರೆಸ್‌ ಕನಿಷ್ಠ 15 ಸ್ಥಾನ ಗೆಲ್ಲುವ ವಿಶ್ವಾಸದಲ್ಲಿದೆ.

ಕಳೆದ ಮೂರು ದಶಕಗಳಿಂದಲೂ ಪುರಸಭಾ ಆಡಳಿತವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವ ಕಾಂಗ್ರೆಸ್‌ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಯಾವುದೇ ಮುಲಾಜಿಗೆ ಒಳಗಾಗದೆ ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ನೀಡುವ ಜೊತೆಗೆ ಎಲ್ಲರೂ ಒಮ್ಮತದಿಂದ ಚುನಾವಣೆಯಲ್ಲಿ ಕೆಲಸ ಮಾಡುವ ಮೂಲಕ ಜನರ ಮನಸ್ಸನ್ನು ಒಲಿಸಿಕೊಂಡು ಮತ್ತೆ ಗೆಲುವಿನತ್ತ ಹೆಜ್ಜೆ ಹಾಕಿದೆ ಎಂಬು ಪಟ್ಟಣ ನಾಗರಿಕರಿಂದ ಕೇಳಿ ಬರುತ್ತಿದೆ.

ಕಳೆದ ಪುರಸಭಾ ಚುನಾವಣೆಯಲ್ಲಿ 13 ಸ್ಥಾನ ಗೆದ್ದಿದ್ದ ಕಾಂಗ್ರೆಸ್‌ ಈ ಚುನಾವಣೆಯಲ್ಲಿ ಕನಿಷ್ಠ 15ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಸಾಧ್ಯತೆಗಳಿವೆ. 23 ಸ್ಥಾನ ಗೆಲ್ಲುವ ಹುಮ್ಮಸ್ಸಿನಿಂದ ಚುನಾವಣೆ ಕೆಲಸ ಆರಂಭಿಸಿತು. ಆದರೆ, ಜೆಡಿಎಸ್‌ ಪಕ್ಷದ ಒಳಜಗಳ, ರಾಜಕೀಯ ತುಳಿತದಿಂದಾಗಿ ದಿನದಿಂದ ದಿನಕ್ಕೆ ತನ್ನ ವರ್ಚಸ್‌ ಕಳೆದುಕೊಂಡಿತು.

ಅಲ್ಲದೆ ಟಿಕೆಟ್ ಹಂಚಿಕೆಯಲ್ಲಿ ನಡೆದ ಗೊಂದಲ ದಿಂದಾಗಿಯೇ ಗೆಲ್ಲುವ ಸಾಧ್ಯತೆಗಳಿದ್ದ 5ಕ್ಕೂ ಹೆಚ್ಚು ಸ್ಥಾನಗಳನ್ನು ಜೆಡಿಎಸ್‌ ಕಳೆದುಕೊಂಡಂತಾಗಿದೆ.

Advertisement

ಈಗ ಕಳೆದ ಚುನಾವಣೆಯಲ್ಲಿ ಪಡೆದುಕೊಂಡಿದ್ದ 5 ಸ್ಥಾನ ಉಳಿಸಿಕೊಳ್ಳವ ಸಾಧ್ಯತೆಗಳಿವೆ. 5ರಿಂದ 7 ಸ್ಥಾನಗಳನಷ್ಟೇ ಗೆಲ್ಲುವ ಸಾಧ್ಯತೆಗಳಿರುವುದರಿಂದ ಪುರಸಭಾ ಆಡಳಿತ ಹಿಡಿಯಲು ಜೆಡಿಎಸ್‌ ಸಾಧ್ಯತೆ ಕಡಿಮೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಪುರಸಭೆಯಲ್ಲಿ ನಾಲ್ವರು ಸದಸ್ಯರನ್ನು ಹೊಂದಿದ್ದ ಬಿಜೆಪಿ ಪಕ್ಷ ಮುಖಂಡರ ನಿರ್ಲಕ್ಷ್ಯದಿಂದಾಗಿ ಕೇವಲ 1ರಿಂದ 2 ಸ್ಥಾನ ಮಾತ್ರ ಗೆಲ್ಲುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಎರಡರಿಂದ ಮೂರು ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆ ಬಿಜೆಪಿಗೂ ಇದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಬಂಡಾಯ ಅಥವಾ ಸ್ವತಂತ್ರ ಅಭ್ಯರ್ಥಿಗಳ ಪೈಕಿ ಒಬ್ಬರು ಗೆಲ್ಲುವ ನಿರೀಕ್ಷೆ ಇದೆ. ಒಟ್ಟಾರೆ ಕಾಂಗ್ರೆಸ್‌ ಪಕ್ಷ ಮತ್ತೆ ಪಟ್ಟಕ್ಕೇರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಕಾಂಗ್ರೆಸ್‌ ನಾಯಕರಿಗೆ ಪುರಸಭೆಯ ಕನಿಷ್ಠ 15 ಸ್ಥಾನ ಗೆಲ್ಲುವ ಅಚಲ ವಿಶ್ವಾಸ

ಮೂರು ದಶಕಗಳಿಂದ ಕಾಂಗ್ರೆಸ್‌ ಹಿಡಿತದಲ್ಲಿರುವ ಪುರಸಭೆಗೆ ಜೆಡಿಎಸ್‌ ಲಗ್ಗೆ ಇಡಲು ಕೆಲ ತೊಡಕುಗಳು ಅಡ್ಡಿ

ಜೆಡಿಎಸ್‌ ಒಳ ಜಗಳ, ಗೆಲ್ಲುವ ಸಾಧ್ಯತೆ ಇದ್ದ ವಾರ್ಡ್‌ಗಳಲ್ಲಿ ಟಿಕೆಟ್ ನೀಡದೆ ಟಿಕೆಟ್ ವಂಚನೆಯಿಂದ ಬಂಡಾವೆದ್ದ ನಾಯಕರು

ಬಿಜೆಪಿ ನಾಯಕರ ನಿರ್ಲಕ್ಷ್ಯದಿಂದ ಪುರಸಭೆಯಲ್ಲಿದ್ದ 4 ಸ್ಥಾನ, ಒಂದು ಅಥವಾ 2ಕ್ಕಿಳಿಯುವ ಸಾಧ್ಯತೆಗಳೇ ಅಧಿಕ

ಕೆ.ಆರ್‌.ಪೇಟೆ: ಪುರಸಭಾ ವ್ಯಾಪ್ತಿಯಲ್ಲಿ ಮೇ 29ರಂದು ನಡೆದ ಚುನಾವಣೆಯ ಮತ ಎಣಿಕೆ ನಡೆಸಲು ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ತಹಶೀಲ್ದಾರ್‌ ಎಂ.ಶಿವಮೂರ್ತಿ ತಿಳಿಸಿದ್ದಾರೆ.

ಪಟ್ಟಣದ ಚನ್ನರಾಯಪಟ್ಟಣ-ಮೈಸೂರು ಮುಖ್ಯರಸ್ತೆಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ಮೊದಲನೇ ಅಂತಸ್ತಿನ ಕೊಠಡಿಯಲ್ಲಿ ಮತ ಎಣಿಕೆಗೆ ಸಿದ್ಧತೆ ಮಾಡಲಾಗಿದೆ. ಬೆಳಿಗ್ಗೆ ಎಂಟು ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಒಂದೇ ಕೊಠಡಿಯಲ್ಲಿ ಆರು ಪ್ರತ್ಯೇಕ ಟೇಬಲ್ಗಳಲ್ಲಿ ನಾಲ್ಕು ಹಂತದಲ್ಲಿ ಮತ ಎಣಿಕೆ ನಡೆಸಲಾಗುತ್ತದೆ. ಎಲ್ಲ ಮತ ಕೇಂದ್ರಗಳಲ್ಲಿಯೂ ಇವಿಎಂ ಮತ ಯಂತ್ರಗಳನ್ನು ಬಳಸಿರುವುದರಿಂದ 12 ಗಂಟೆಗೆಲ್ಲಾ ಸಂಪೂರ್ಣ ಫ‌ಲಿತಾಂಶ ಹೊರಬೀಳಲಿದೆ.

ಪುರಸಭಾ ಚುನಾವಣಾ ಕಾರ್ಯದಲ್ಲಿ ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಮೂವರು ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳ ಜೊತೆಗೆ ಆರು ಎಣಿಕೆ ಟೇಬಲ್ಗಳಿಗೂ ತಲಾ ಒಬ್ಬರು ಎಣಿಕಾಧಿಕಾರಿ, ಸಹಾಯಕರಾಗಿ 12 ಸಿಬ್ಬಂದಿಯನ್ನ ನೇಮಿಸಲಾಗಿದೆ. ಇವರ ಜೊತೆಯಲ್ಲಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಎಣಿಕೆ ಕಾರ್ಯವನ್ನು ನಡೆಸುತ್ತಾರೆ. ಪೊಲೀಸ್‌, ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ರಕ್ಷಣಾ ಕಾರ್ಯನಿರ್ವಹಣೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ಪುರಸಭೆ ಮತ ಎಣಿಕೆಗೆ ಸಕಲ ಸಿದ್ಧತೆ:

ಬುಧವಾರ ನಡೆದ ಪುರಸಭಾ ಚುನಾವಣೆ ಮತ ಎಣಿಕೆ ಶುಕ್ರವಾರ ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು, ಅಂದೇ ಫ‌ಲಿತಾಂಶ ಹೊರ ಬೀಳಲಿದೆ ಎಂದು ಚುನಾವಣಾಧಿಕಾರಿ, ತಹಶೀಲ್ದಾರ್‌ ನಾಗಪ್ರಶಾಂತ್‌ ತಿಳಿಸಿದರು. ಶ್ರೀರಂಗಪಟ್ಟಣ ಪುರಸಭೆಯಲ್ಲಿ 23 ವಾರ್ಡ್‌ಗಳಿಂದ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಹಾಗೂ ಬಿಎಸ್‌ಪಿ, ಪಕ್ಷೇತರರು ಸೇರಿ ಒಟ್ಟು 78 ಮಂದಿ ಸ್ಪರ್ಧೆಯಲ್ಲಿದ್ದರು. ಚುನಾವಣೆಯ ನಂತರ ಇವಿಎಂ ಮತಯಂತ್ರಗಳು ಪದವಿ ಪೂರ್ವ ಕಾಲೇಜಿನ ಸ್ಟ್ರಾಂಗ್‌ ರೂಮಿನಲ್ಲಿ ಭದ್ರವಾಗಿದ್ದು, ಅವುಗಳ ಎಣಿಕೆ ಕಾರ್ಯಕ್ರಮ 31ರಂದು ಗುರುವಾರ ಬೆಳಿಗ್ಗೆ 8ಗಂಟೆಯಿಂದ ಪ್ರಾರಂಭಿಸಲಾಗುತ್ತದೆ. ಮತ ಎಣಿಕೆ ಕಾರ್ಯದಲ್ಲಿ ಮೂವರು ಚುನಾವಣಾಧಿಕಾರಿಗಳಿದ್ದು, ಎರಡು ಟೇಬಲ್ ಹಾಕಲಾಗಿದೆ. 3 ಕೊಠಡಿಗಳಲ್ಲಿ ಒಟ್ಟು 6 ಟೇಬಲ್ ನಲ್ಲಿ ಮತ ಎಣಿಕೆ ನಡೆಸಲಾಗುತ್ತದೆ. ಒಂದು ಬಾರಿ 4 ವಾರ್ಡ್‌ಗಳ ಮತಯಂತ್ರ ಬಳಸಿಕೊಂಡು ಎಣಿಸಲಾಗುತ್ತದೆ. ಒಟ್ಟು 50 ಮಂದಿ ಎಣಿಕೆ ಸಿಬ್ಬಂದಿಗಳಿದ್ದು, ಡಿವೈಎಸ್ಪಿ ಒಬ್ಬರು, ಸಿಪಿಐ ಒಬ್ಬರು, 4 ಸಬ್‌ಇನ್ಪೆಕ್ಟರ್‌, 100 ಮಂದಿ ಹಾಗೂ ಎರಡು ಡಿಆರ್‌ಒ ತುಕಡಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ತಹಶೀಲ್ದಾರ್‌ ನಾಗಪ್ರಶಾಂತ್‌ ತಿಳಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next