Advertisement

ಬಸ್‌ ನಿಲ್ದಾಣ ಸ್ವಚ್ಛತೆಗೆ ಪುರಸಭೆ ಗಡುವು

02:12 PM Jun 18, 2022 | Team Udayavani |

ಆಳಂದ: ಪಟ್ಟಣದ ಕೇಂದ್ರ ಬಸ್‌ ನಿಲ್ದಾಣದಲ್ಲಿನ ಕೊಳಚೆ ನೀರು ತೆರವುಗೊಳಿಸಿ ಸ್ವಚ್ಛತೆ ಕೈಗೊಳ್ಳಬೇಕು ಎಂದು ಮುಖ್ಯಾಧಿಕಾರಿ ವಿಜಯಮಹಾಂತೇಶ ಹೂಗಾರ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಗಡುವು ನೀಡಿದರು.

Advertisement

ಬಸ್‌ ನಿಲ್ದಾಣದ ಆವರಣದಲ್ಲಿ ಕೊಳಚೆ ನೀರು ನಿಂತು ಗಬ್ಬೆದ್ದು ವಾಸನೆ ಹರಡಿದರೂ ಕೆಕೆಆರ್‌ ಟಿಸಿ ಘಟಕದ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ನೀಡಿದ ದೂರು ಆಧರಿಸಿ ಶುಕ್ರವಾರ ಬಸ್‌ ನಿಲ್ದಾಣಕ್ಕೆ ಹಠಾತ್‌ ಭೇಟಿ ನೀಡಿ, ಸಂಬಂಧಿತ ಅಧಿಕಾರಿಗಳೊಂದಿಗೆ ವಿಚಾರಣೆ ನಡೆಸಿ, ಗಡುವು ನೀಡಿದರು.

ಬಸ್‌ ನಿಲ್ದಾಣದಲ್ಲಿನ ಹೋಟೆಲ್‌, ಸುಲಭ ಶೌಚಾಲಯದ ಬಳಕೆ ನೀರು ವರ್ಷವಿಡಿ ನಿಂತಿರುತ್ತದೆ. ಬಸ್‌ಗಳು ನಿಲ್ಲಲು ಜಾಗವಿಲ್ಲ. ಸಾರ್ವಜನಿಕರು ಓಡಾಡದಂತ ಪರಿಸ್ಥಿತಿ ಇದೆ. ಮೊನ್ನೆಯಷ್ಟೇ ಪುರಸಭೆಯಿಂದ ಪಂಪ್‌ಸೆಟ್‌ ಮೂಲಕ 16 ಟ್ಯಾಂಕರ್‌ ಕೊಳಚೆ ನೀರು ಹೊರತೆಗೆದರೂ ಇನ್ನೂ ಕೊಳಚೆಯಿದೆ ಎಂದು ಸಿಡಿಮಿಡಿಗೊಂಡರು.

ಬಸ್‌ ನಿಲ್ದಾಣ ಆವರಣದೊಳಗಿನ ಸ್ವಚ್ಛತೆ ಕಾರ್ಯ ಪುರಸಭೆ ವ್ಯಾಪ್ತಿಗೆ ಬರುವುದಿಲ್ಲ. ಕೆಕೆಆರ್‌ಟಿಸಿ ವ್ಯಾಪ್ತಿಗೆ ಬರುತ್ತದೆ. ಈ ಕುರಿತು ಎರಡ್ಮೂರು ಬಾರಿ ಕೊಳಚೆ ನೀರು ವಿಲೇವಾರಿ ಮತ್ತು ಸ್ವಚ್ಛತೆಗೆ ನೋಟಿಸ್‌ ನೀಡಿದರೂ ಉತ್ತರ ಕೊಟ್ಟಿಲ್ಲ ಸ್ಥಳದಲ್ಲಿ ಯಾವುದೇ ಕ್ರಮ ಯಾಕೆ ಕೈಗೊಂಡಿಲ್ಲ ಎಂದು ಕೆಕೆಆರ್‌ಟಿಸಿ ಘಟಕದ ವ್ಯವಸ್ಥಾಪಕ ಜೆಟ್ಟೆಪ್ಪ ದೊಡ್ಡಮನಿ ಅವರಿಗೆ ಪ್ರಶ್ನಿಸಿದರು.

ಕೊಳಚೆ ನೀರು ನಿಲ್ದಾಣದ ಹೊರಗೆ ಬರುವಂತೆ ಮಾಡಿದರೆ ಹೊರಗೆ ಬಂದ ನೀರನ್ನು ಸಾಗಿಸುವ ಜವಾಬ್ದಾರಿ ಪುರಸಭೆಯದ್ದು, ಬೇರೊಬ್ಬರ ಮೇಲೆ ಬೊಟ್ಟು ತೋರಿಸಿ ಜವಾಬ್ದಾರಿ ಹೊರಿಸಿದರೆ ಹೇಗೆ? ಆವರಣವೆಲ್ಲ ಶೌಚಾಲಯದ ಟ್ಯಾಂಕ್‌ ನೀರು ಮತ್ತು ಹೋಟೆಲ್‌ನ ಮಲೀನ ನೀರು ಚರಂಡಿಗೆ ಬರುವ ಬದಲು ಆವರಣದಲ್ಲೇ ನಿಂತಿದೆ. ನೀರು ಹೊರಗೆ ಹೋಗುವಂತೆ ಮಾಡಬೇಕು. ಇದಕ್ಕೆ ಅಗತ್ಯವಿರುವ ಸಣ್ಣಪುಟ್ಟ ಕಾಮಗಾರಿ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

Advertisement

ಹಾಜರಿದ್ದ ಘಟಕದ ವ್ಯವಸ್ಥಾಪಕ ಜೆಟ್ಟೆಪ್ಪ ಅವರು, ನಿಲ್ದಾಣ ತೆಗ್ಗಿನಲ್ಲಾಗಿದ್ದು, ರಸ್ತೆ ಮತ್ತು ಹೊರಗಿನ ಪ್ರದೇಶ ಎತ್ತರವಾಗಿದೆ. ಹೀಗಾಗಿ ನೀರು ಹೊರಕ್ಕೆ ಹೋಗುತ್ತಿಲ್ಲ ಎಂದಾಗ ಮುಖ್ಯಾಧಿಕಾರಿಗಳು ಅಗತ್ಯ ಕಾಮಗಾರಿ ಮಾಡಿ ನೀರು ಹೊರಹಾಕಬೇಕು ಎಂದರು.

ಆನಂತರ ಸ್ಥಳದಲ್ಲೇ ಮೊಬೈಲ್‌ ಮೂಲಕ ಸಮಸ್ಯೆ ನಿವಾರಿಸುವಂತೆ ಮುಖ್ಯಾಕಾರಿಗಳು ಕೆಕೆಆರ್‌ ಟಿಸಿ ಎಂಡಿಯನ್ನು ಸಂಪರ್ಕಿಸಿದರು. ಇದೇ ವೇಳೆ ಹೋಟೆಲ್‌ ಮತ್ತು ಶೌಚಾಲಯ ಪ್ರದೇಶವನ್ನು ವೀಕ್ಷಿಸಿ ಕೆಕೆಆರ್‌ಟಿಸಿ ಅಧಿಕಾರಿಗಳಿಗೆ ತೋರಿಸಿದ ಮುಖ್ಯಾಧಿಕಾರಿಗಳು ಹೋಟೆಲ್‌ ಮತ್ತು ಶೌಚಾಲಯ ನೀರು ನಿತ್ಯ ಆವರಣದಲ್ಲೇ ಬರುತ್ತಿದೆ. ಈ ನೀರು ನಿಲ್ಲದಂತೆ ನೋಡಿಕೊಳ್ಳಿ, ಇಲ್ಲವಾದಲ್ಲಿ ನಿಲ್ದಾಣದಲ್ಲಿ ಸದಾ ಕೊಳಚೆ ನೀರು ನಿಂತು ಕೆರೆಯಂತಾಗಿ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂದರು.

ಆವರಣದಲ್ಲಿನ ಕೊಳವೆ ಬಾವಿಗೆ ನೀರು ಆವರಿಸಿಕೊಂಡಿವೆ. ಇದೇ ನೀರು ಹೋಟೆಲ್‌ ಗೆ ಬಳಸಲಾಗುತ್ತಿದೆ. ಇದರಿಂದ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಮುಂಜಾಗ್ರತೆ ವಹಿಸಿ ಎಂದರು.

ಬಸ್‌ ನಿಲ್ದಾಣದ ನಿಯಂತ್ರಕ ವಿಜಯಕುಮಾರ ಕಿಣ್ಣಿಸುಲ್ತಾನ, ಪುರಸಭೆ ವ್ಯವಸ್ಥಾಪಕ ಶಂಭುಲಿಂಗ ಕನ್ನೆ, ಪರಿಸರ ಅಭಿಯಂತರ ರವಿಕಾಂತ ಮಿಸ್ಕಿನ್‌, ಎಸ್‌ಐ ರಾಘವೇಂದ್ರ, ಸಿಬ್ಬಂದಿ ಮೋಮಿನ್‌ ಹಾಗೂ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next