Advertisement
ಎರಡು ವರ್ಷದ ಅನಂತರ ನಡೆದ ಮೊದಲ ನಗರಸಭೆ ಸಾಮಾನ್ಯ ಸಭೆಯಲ್ಲಿ ಜನಪ್ರತಿನಿಧಿಗಳು ಇಂದ್ರಾಣಿ ಬಗ್ಗೆ ಧ್ವನಿ ಎತ್ತಿದ್ದರೂ, ಇಲ್ಲಿಯವರೆಗೆ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಸಮಸ್ಯೆಗೆ ಮುಕ್ತಿ ಸಿಗಲಿದೆ ಎನ್ನುವ ಆಸೆಯಲ್ಲಿದ್ದವರಿಗೆ ಮತ್ತೆ ನಿರಾಸೆಯಾಗಿದೆ.
Related Articles
Advertisement
ನಗರಸಭೆ ಏನು ಮಾಡುತ್ತಿತ್ತು? :
ಇದೀಗ ಹೆದ್ದಾರಿ ಕರಾವಳಿ ಫ್ಲೈ ಓವರ್‌ನಡಿ 32 ವರ್ಷಗಳ ಹಿಂದೆ ಹಾಕಲಾದ ಯುಜಿಡಿ ಪೈಪ್‌ಲೈನ್ ಒಡೆದು ಹೋಗಿದೆ. ಈ ಹಿಂದೆ ಕಾಮಗಾರಿ ಮಾಡಿದ ರಾ.ಹೆ. ಇಲಾಖೆಯು ಯುಜಿಡಿ ಮಾರ್ಗವನ್ನು ಬದಲಾಯಿಸಬೇಕಿತ್ತು. ಆ ಸಂದರ್ಭ ನಗರಸಭೆಯು ಪಟ್ಟು ಹಿಡಿದು ಕಾಮಗಾರಿಯನ್ನು ಸ್ಥಗಿತ ಗೊಳಿಸಿ ಯುಜಿಡಿ ಮಾರ್ಗವನ್ನು ಬದಲಾಯಿಸಬೇಕಿತ್ತು. ಆದರೆ ಅಂದಿನ ಅಧಿಕಾರಿಗಳು ಮೌನವಾಗಿದ್ದರು. ಏನನ್ನೂ ಹೇಳಲಿಲ್ಲ. ಹಾಗಾಗಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ತಮ್ಮ ಕೆಲಸವಾದರೆ ಸಾಕೆಂದು ಫ್ಲೈ ಓವರ್ ನಿರ್ಮಿಸಿದ್ದರು. ಈಗ ಕೊಳಚೆ ನೀರು ಇಂದ್ರಾಣಿ ಒಡಲು ಸೇರುವಂತಾಗಿದೆ ಎಂಬುದು ಸ್ಥಳೀಯರ ದೂರು.
ಶಾರದಾದಿಂದ ಇಂದ್ರಾಣಿಗೆ :
ಪ್ರಸ್ತುತ ಫ್ಲೈ ಓವರ್ ಅಗೆದು ಯುಜಿಡಿ ಪೈಪ್‌ಲೈನ್ ದುರಸ್ತಿ ಮಾಡಲು ಅಸಾಧ್ಯ. ಈ ಹಿನ್ನೆಲೆಯಲ್ಲಿ ಫ್ಲೈ ಓವರ್‌ಅಡಿಯ ಯುಜಿಡಿ ಪೈಪ್‌ಲೈನ್ ಸ್ಥಗಿತಗೊಳಿಸಲಾಗಿದೆ. ಇದರಿಂದ ಶಾರದಾ ವೆಟ್‌ವೆಲ್‌ನಿಂದ ಪಂಪ್ ಆಗಿ ನಿಟ್ಟೂರು ಎಸ್‌ಟಿಪಿಗೆ ಹೋಗಬೇಕಾದ ಕೊಳಚೆ ನೀರು ಇಂದ್ರಾಣಿಗೆ ಬಿಡಲಾಗುತ್ತಿದೆ. ಈ ಪೈಪ್‌ಲೈನ್ ಸ್ಥಗಿತಗೊಳಿಸಿ, ಹೊಸ ಮಾರ್ಗದ ಪೈಪ್‌ಲೈನ್ ಅಳವಡಿಸಿದರೆ ಮಾತ್ರ ಸಮಸ್ಯೆಗೆ ಪರಿಹಾರ ಎನ್ನುತ್ತಾರೆ ಅಧಿಕಾರಿಗಳು.
ಕೈಚೆಲ್ಲಿದ ರಾ.ಹೆ. ಇಲಾಖೆ! :
ಪ್ರಸ್ತುತ ಫ್ಲೈಒವರ್‌ನಡಿ ಯುಜಿಡಿ ದುರಸ್ತಿಗೆ ಸಂಬಂಧಿಸಿದಂತೆ ನಗರಸಭೆ ಅಧಿಕಾರಿಗಳು ರಾ.ಹೆ. ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರೂ ಹೆದ್ದಾರಿಯನ್ನು ಅಗೆಯಲು ಸಾಧ್ಯವಿಲ್ಲ ಎನ್ನುವುದಾಗಿ ರಾ.ಹೆ. ಅಧಿಕಾರಿಗಳು ತಿಳಿಸುತ್ತಿದ್ದಾರೆ. ಒಂದು ವೇಳೆ ಹೆದ್ದಾರಿಗೆ ಸಂಬಂಧಿಸಿದ ಯಾವುದೇ ಕಾಮಗಾರಿ ನೀವು ಕೈಗೆತ್ತಿಗೊಂಡರೆ ಕಾನೂನು ತೊಡಕು ಉಂಟಾಗುತ್ತದೆ ಎಂದು ಹೇಳಿ ಕೈ ಚೆಲ್ಲಿದ್ದಾರೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.
ಮೂರು ವರ್ಷದ ಹಿಂದೆ ರಾ.ಹೆ. ಇಲಾಖೆಯು ಫ್ಲೈ ಓವರ್ ಪಕ್ಕದಲ್ಲಿ ಡಮ್ಮಿ ಪೈಪ್‌ಲೈನ್ ಹಾಕಿದ್ದಾರೆ. ಪ್ರಸ್ತುತ ಅದರೊಳಗೆ ಹೊಸ ಪೈಪ್‌ಲೈನ್ ಹಾಕಬೇಕು. ಈಗಾಗಲೇ ಮಂಗಳೂರಿನಿಂದ ಪೈಪ್ ತರಿಸಲಾಗುತ್ತಿದೆ. ಪೈಪ್ ಬಂದ ತತ್‌ಕ್ಷಣ ತುರ್ತು ಟೆಂಡರ್ ಕರೆದು ಸಮರೋಪಾದಿಯಲ್ಲಿ ಕೆಲಸ ನಡೆಸಲಾಗುತ್ತದೆ. –ಮೋಹನ್ ರಾಜ್, ಎಇಇ, ನಗರಸಭೆ ಉಡುಪಿ