ಹುಮನಾಬಾದ: ಹಳ್ಳಿಖೇಡ(ಬಿ) ಪುರಸಭೆಯ 23ವಾರ್ಡ್‌ಗಳಿಗೆ ಆ.31ರಂದು ನಡೆಯುವ ಚುನಾವಣೆಗೆ ತಾಲೂಕು ಆಡಳಿತ ಸಂಪೂರ್ಣ ಸಜ್ಜಾಗಿದೆ. ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಸಾರಿಗೆ ಸಂಸ್ಥೆ ಬಸ್, ಕ್ರೂಸರ್ ಮೊದಲಾದ ವಾಹನಗಳಲ್ಲಿ ಆಡಳಿತ ಗುರುವಾರ ಬೆಳಗ್ಗೆ ಮತದಾನ ನಡೆಯಲಿರುವ ಹಳ್ಳಿಖೇಡ(ಬಿ) ಪಟ್ಟಣದ ಸರ್ಕಾರಿ ಪ್ರೌಢಶಾಲೆಗೆ ಕಳಿಸಿದೆ. ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜಿಸಲಾದ ತಮ್ಮ ತಮ್ಮ ಮತಗಟ್ಟೆಗಳಿಗೆ, ಮತದಾನಕ್ಕೆ ಅಗತ್ಯವಿರುವ ಸಕಲ ಸಾಮಗ್ರಿ ಸಮೇತ ಸಂಜೆ 4ಗಂಟೆಯೊಳಗೆ ತೆರಳಿ ಮತದಾನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿರುವುದು ಕಂಡುಬಂತು.
ಎಸಿ ಅಂತಿಮ ಪರಿಶೀಲನೆ: ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾಧಿಕಾರಿ ಎಚ್. ಆರ್.ಮಹಾದೇವ್ ಅವರು ಪರಿಶೀಲನೆ ನಡೆಸಿದ ಬೆನ್ನಲ್ಲೆ ಅವರ ಆದೇಶದನ್ವಯ ಬಸವಕಲ್ಯಾಣ ಉಪವಿಭಾಗಾಧಿಕಾರಿ ಶರಣಬಸಪ್ಪ ಕೊಟ್ಯಪ್ಪಗೋಳ್ ಅವರು ರಿಟೆನಿಂಗ್ ಅಧಿಕಾರಿಗಳು ಒಳಗೊಂಡಂತೆ ಚುನಾವಣಾ ವಿಭಾಗದ ಸಿಬ್ಬಂದಿಯ ಸಮೇತ ಗುರುವಾರ ತೆರಳಿ ಮತಗಟ್ಟೆ ಕೇಂದ್ರಗಳಲ್ಲಿ ಫ್ಯಾನ್, ವಿದ್ಯುತ್ ದೀಪ, ಕುಡಿಯುವ ನೀರು, ಶೌಚಾಲಯ ಇತರೆ
ವ್ಯವಸ್ಥೆಗಳ ಕುರಿತು ಪರಿಶೀಲಿಸಿದರು. ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿ, ಪೊಲೀಸರನ್ನು ಒಳಗೊಂಡಂತೆ ಚುನಾವಣೆ ಸೇವೆಯಲ್ಲಿರುವ ಸಿಬ್ಬಂದಿಗೆ ಯಾವುದೇ ತೊಂದರೆಯಾಗದಂತೆ ಮುಂಜಾಗೃತಾ ಕ್ರಮ ಕೈಗೊಂಡು, ಶಾಂತಿಯುತ ಚುನಾವಣೆ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಯಾವ ವಾರ್ಡ್, ಮತಗಟ್ಟೆ ಎಲ್ಲಿ?: 1-ಹನುಮಾನ ಮಂದಿರ ಹತ್ತಿರದ ಅಂಗನವಾಡಿ ಕೇಂದ್ರ, 2-ಪಾಗಾ ಗಲ್ಲಿ ಅಂಗನವಾಡಿ ಕೇಂದ್ರ, 3-ಸರ್ಕಾರಿ ಪ್ರೌಢಶಾಲೆ ಶಾಲೆಯ ಎಡ ಭಾಗದ ಕಟ್ಟಡ, 4-ಸರ್ಕಾರಿ ಪ್ರೌಢಶಾಲೆ ಬಲಭಾಗದ ಕಟ್ಟಡ, 5-ಸರ್ಕಾರಿ ಪ್ರೌಢಶಾಲೆಯ ಮಧ್ಯಭಾಗದ ಕಟ್ಟಡ, 6-ಸರ್ಕಾರಿ ಪ್ರೌಢ ಶಾಲೆಯ ಕೆಇಬಿ ಕಟ್ಟಡ ಪಕ್ಕದ ಕೊಠಡಿ, 7-ಕಿಂಡಿ ಬಾಹೇರ್ ಸಮೀಪದ ಅಂಗನವಾಡಿ ಕೇಂದ್ರ, 8-ವಡ್ಡರ ಗಲ್ಲಿ ಹತ್ತಿರದ ಅಂಗನವಾಡಿ ಕೇಂದ್ರ, 9-ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಎಡ ಭಾಗದ ಕಟ್ಟಡ, 10- ಮರಗೆಮ್ಮ ದೇವಸ್ಥಾನ ಪಕ್ಕದ ಅಂಗನವಾಡಿ ಕಟ್ಟಡ, 11-ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಡ ಭಾಗದ ಹೊಸ ಕಟ್ಟಡ, 12-ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಕಟ್ಟಡ ಬಲಭಾಗದ ಕೋಣೆ, 13- ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಬಲ ಭಾಗದ ಕಟ್ಟಡ, 14-ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಎಡ ಭಾಗದ ಕಟ್ಟಡ, 15- ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಬಲಭಾಗದ ಕಟ್ಟಡ, 16-ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮಧ್ಯಭಾಗದ ಕಟ್ಟಡ, 17-ತಕ್ಯಾಗಲ್ಲಿ ಮುರಾದನಗರ ಅಂಗನವಾಡಿ ಕೇಂದ್ರ ಕಟ್ಟಡ, 18-ಪಶು ವೈದ್ಯಕೀಯ ಆಸ್ಪತ್ರೆ ಕಟ್ಟಡ, 19- ಪುರಸಭೆ ಕಾರ್ಯಾಲಯದ ಪಕ್ಕದ ಗ್ರಂಥಾಲಯ ಕಟ್ಟಡ, 20-ಪುರಸಭೆ ಕಾರ್ಯಾಲಯ ಕಟ್ಟಡ, 21-ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಎಐಪಿ ಕಟ್ಟಡ, 22-ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಎಡ ಭಾಗದ ಕಟ್ಟಡ, 23-ಬಿಸ್.ಎಸ್.ಕೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ.
ಸೂಕ್ಷ್ಮ 2,7,11,18,23. ಅತೀ ಸೂಕ್ಷ್ಮ: 1,3,12,17,19 ಹಾಗೂ 13 ಸಾಧಾರಣ ಮತಗಟ್ಟೆಗಳೆಂದು ಗುರುತಿಸಲಾಗಿದೆ. ರಿಟೇನಿಂಗ್ ಅಧಿಕಾರಿಗಳಾದ ಡಾ| ಶಂಕರ ಪಟವಾರಿ, ಶಂಭುಲಿಂಗ ಹಿರೇಮಠ, ಶಿವರಾಚಪ್ಪ
ವಾಲಿ, ಸಿಪಿಐ ಜೆ.ಎಸ್. ನ್ಯಾಮಗೌಡರ್, ಪಿಎಸ್ ಐಗಳಾದ ಖಾಜಾ ಹುಸೇನಿ, ಎ.ಟಿ. ಸಂತೋಷ ಸೇರಿದಂತೆ ಹುಮನಾಬಾದ್ ಉಪವಿಭಾಗ ವ್ಯಾಪ್ತಿಯ ಪ್ರಮುಖ ಅಧಿಕಾರಿ ಹಾಗೂ ಸಿಬ್ಬಂದಿ ಇದ್ದರು.