ವಾಡಿ: ಪಟ್ಟಣ ಪಂಚಾಯಿತಿಯಿಂದ ಪುರಸಭೆ ಯಾಗಿ ಮೇಲ್ದರ್ಜೆಗೇರಿದ ಸ್ಥಳೀಯ ಆಡಳಿತ ಸಂಸ್ಥೆಗೆ ಸೇರಿದ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ 20 ವರ್ಷದ ನಂತರ ಜಿಲ್ಲಾಡಳಿತದಿಂದ ಹೊಸ ಯಂತ್ರಗಳು ಪೂರೈಕೆಯಾಗಿದ್ದು, ಕಸ ಮತ್ತು ಘನತ್ಯಾಜ್ಯ ಸಂಸ್ಕರಣಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಗಾಜು, ಕಬ್ಬಿಣ, ಪ್ಲಾಸ್ಟಿಕ್ ಸೇರಿದಂತೆ ಹಸಿ ಕಸ ಮತ್ತು ಒಣ ಕಸ ವಿಂಗಡಿಸಿ ಘನೀಕರಣ ಮಾಡಲು ಸಿದ್ಧತೆಗಳು ನಡೆದಿವೆ.
ಚರಂಡಿ ಮತ್ತು ತಿಪ್ಪೆ ಕಸವನ್ನೇ ಗೊಬ್ಬರವನ್ನಾಗಿ ಪರಿವರ್ತಿಸುವ ಮೂಲಕ ಮರುಬಳಕೆಗೆ ಅಧಿ ಕಾರಿಗಳು ಮಹತ್ವದ ಯೋಜನೆ ರೂಪಿಸಿದ್ದಾರೆ. ಸಿಮೆಂಟ್ ನಗರಿ ವಾಡಿ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 23 ವಾರ್ಡ್‌ಗಳಿದ್ದು, ಪ್ರತಿದಿನ ಪೌರಕಾರ್ಮಿಕರು ಹತ್ತು ಟನ್ ಕಸ ಸಂಗ್ರಹಿಸಿ ಘನತ್ಯಾಜ್ಯ ಘಟಕದಲ್ಲಿ ವಿಲೇವಾರಿ ಮಾಡುತ್ತಾರೆ.
ಸುಮಾರು ಐದು ಎಕರೆ ವಿಸ್ತೀರ್ಣದ ಘನತ್ಯಾಜ್ಯ ಘಟಕದಲ್ಲೀಗ ಜಿಲ್ಲಾಡಳಿತ ಸುಮಾರು 55 ಲಕ್ಷ ರೂ. ವೆಚ್ಚದ ಕಸ ಸಂಸ್ಕರಣಾ ಯಂತ್ರಗಳನ್ನು ಸ್ಥಾಪಿಸಿದೆ. ಇತ್ತೀಚೆಗೆ ಪಟ್ಟಣಕ್ಕೆ ಭೇಟಿ ನೀಡಿದ್ದ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶಿವಶರಣಪ್ಪ ನಂದಗಿರಿ, ಇಇ ಶಿವಣಗೌಡ ಪೊಲೀಸ್ ಪಾಟೀಲ, ಎಇಇ ಮೋಹಿನ್ ಹುಸೇನ ಪುರಸಭೆ ಮುಖ್ಯಾ ಧಿಕಾರಿ ವಿಠಲ ಹಾದಿಮನಿ, ಕಿರಿಯ ಆರೋಗ್ಯ ನೈರ್ಮಲ್ಯ ನಿರ್ದೇಶಕ ಬಸವರಾಜ ಪೂಜಾರಿ ಸಮ್ಮುಖದಲ್ಲಿ ಕಸ ಸಂಸ್ಕರಣಾ ಯಂತ್ರಗಳನ್ನು ಅಳವಡಿಸಿ, ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡಿ ಯಂತ್ರಗಳ ಕಾರ್ಯ ಪರಿಶೀಲಿಸಿದ್ದಾರೆ.
ಜಿಲ್ಲಾಡಳಿತ ಈ ಯಂತ್ರಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಒದಗಿಸುವ ಮೂಲಕ ಪುರಸಭೆಗೆ ಹಸ್ತಾಂತರಿಸಲಿದ್ದು, ಕಸವನ್ನು ರಸ ಮಾಡುವ ದಿನಗಳು ಹತ್ತಿರವಾಗುತ್ತಿವೆ. ಪ್ರಸಕ್ತ ಕಟ್ಟಣದ ವಿವಿಧ ಬಡಾವಣೆಗಳಲ್ಲಿ ಮನೆ-ಮನೆಯಿಂದ ಕಸ ಸಂಗ್ರಹಕ್ಕೆ ಹೊಸ ವಾಹನಗಳು ಬಳಕೆಯಾಗುತ್ತಿವೆ. 40ಕ್ಕೂ ಹೆಚ್ಚು ಪೌರಕಾರ್ಮಿಕರು ನಗರದ ಸ್ವತ್ಛತೆಗೆ ಶ್ರಮಿಸುತ್ತಿದ್ದಾರೆ.
ಚರಂಡಿಗಳ ಹೂಳೆತ್ತುವ ಕಾಯಕದಿಂದ ಸಂಗ್ರಹವಾಗುತ್ತಿರುವ ಘನತ್ಯಾಜ್ಯವನ್ನು ಎಸ್ ಡಬ್ಯು ಎಂ ಘಟಕಕ್ಕೆ ಸಾಗಿಸಲಾಗುತ್ತಿದೆ. ಘಟಕದಲ್ಲಿ ರಾತ್ರಿ -ಹಗಲು ಸಿಬ್ಬಂದಿ ಕಾವಲು ಸೇವೆಯಲ್ಲಿದ್ದಾರೆ. ಘಟಕದಲ್ಲಿ ಕಸದ ಜತೆಗೆ ಬಳಕೆಯಾಗದ ಕೋಟ್ಯಂತರ ರೂ. ಮೌಲ್ಯದ ಹಲವು ಯಂತ್ರೋಪಕರಣಗಳು ಮಳೆ-ಗಾಳಿಗೆ ತುಕ್ಕು ಹಿಡಿದು ಹಾಳಾಗುತ್ತಿವೆ. ಆಟೋ, ಟಿಪ್ಪರ್ ಗಳು, ಕಸದ ತೊಟ್ಟಿ ವಿಲೇವಾರಿ ವಾಹನ, ತ್ರಿಚಕ್ರ ವಾಹನಗಳು, ಶೌಚ ಗುಂಡಿಯ ಮಲ ವಿಲೇವಾರಿ ವಾಹನ ಕೆಟ್ಟು ನಿಂತಿವೆ.
ಈ ಮೊದಲು ಸುಮಾರು ಹತ್ತು ಲಕ್ಷ ರೂ. ಖರ್ಚು ಮಾಡಿ ಖರೀದಿಸಲಾಗಿದ್ದ ಕಸ ಸಂಸ್ಕರಣ ಯಂತ್ರ ಒಮ್ಮೆಯೂ ಬಳಕೆಯಾಗದೆ ಮೂಲೆ ಸೇರಿದೆ. ಸದ್ಯ 55 ಲಕ್ಷ ರೂ. ವೆಚ್ಚದಡಿ ಖರೀದಿಸಲಾದ ಹೊಸ ಯಂತ್ರಗಳನ್ನಾದರೂ ಪುರಸಭೆ ಆಡಳಿತ ಸಮರ್ಪಕವಾಗಿ ಉಪಯೋಗ ಮಾಡಿಕೊಳ್ಳುತ್ತದೋ ಇಲ್ಲವೋ ಎಂದು ಕಾಯ್ದು ನೋಡಬೇಕಿದೆ.