Advertisement

Mundkur ರಾಮದಾಸ್‌ ಕಾಮತ್‌ ಪ್ರಕರಣ: ಅನುಮಾನ ಹಿನ್ನೆಲೆ; ಎಸಿಪಿ ನೇತೃತ್ವದಲ್ಲಿ ತನಿಖೆ

12:27 AM Oct 08, 2023 | Team Udayavani |

ಮಂಗಳೂರು: ಉದ್ಯಮಿ ಮುಂಡ್ಕೂರು ರಾಮದಾಸ್‌ ಕಾಮತ್‌ (75) ಅವರ ಆತ್ಮಹತ್ಯೆ ಪ್ರಕರಣದ ತನಿಖೆ ಎಸಿಪಿ ನೇತೃತ್ವದಲ್ಲಿ ನಡೆಯುತ್ತಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ತಿಳಿಸಿದ್ದಾರೆ.

Advertisement

ಸೆ.17ರಂದು ರಥಬೀದಿಯ ಫ್ಲ್ಯಾಟ್‌ನಲ್ಲಿ ರಾಮದಾಸ್‌ ಕಾಮತ್‌ ಅವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಘಟನೆಯ ಮೂರು ದಿನಗಳ ಅನಂತರ ಆತ್ಮಹತ್ಯೆಯ ಕಾರಣದ ಕುರಿತಾಗಿ ಅನುಮಾನ ವ್ಯಕ್ತಪಡಿಸಿ ಮಾಹಿತಿಗಳು ಬಂದವು. ಈ ಹಿನ್ನೆಲೆಯಲ್ಲಿ ಕೂಡಲೇ ಕೇಂದ್ರ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ತನಿಖೆಗೆ ಆದೇ ಶಿಸಲಾಗಿದೆ.

ತನಿಖೆಗೆ ಪತ್ರ
ಕಾಮತ್‌ ಅವರ ಆತ್ಮಹತ್ಯೆ ಪ್ರಕರಣದ ಬಗ್ಗೆ ಅನುಮಾನಗಳಿವೆ. ಅವರಿಗೆ ಯಾವುದೇ ಸಮಸ್ಯೆ ಇರಲಿಲ್ಲ. ನಾನು ಅವರ ಬಗ್ಗೆ ತಿಳಿದಿದ್ದೇನೆ. ಅವರು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನಂಬಲು ಸಾಧ್ಯವಿಲ್ಲ ಎಂದು ಉದ್ಯಮಿ ಬಿ.ಆರ್‌.ಶೆಟ್ಟಿ ಅವರು ವಕೀಲರ ಮೂಲಕ ಮಂಗಳೂರು ಪೊಲೀಸ್‌ ಆಯುಕ್ತರು ಹಾಗೂ ರಾಜ್ಯ ಸರಕಾರಕ್ಕೆ ಶುಕ್ರವಾರ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್‌ ಆಯುಕ್ತರು, “ಪತ್ರ ಶುಕ್ರವಾರ ನಮಗೆ ತಲುಪಿದೆ. ಆದರೆ ಅದಕ್ಕೂ ಮೊದಲೇ ಎಸಿಪಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ. ತನಿಖೆ ನಡೆಯುತ್ತಿದೆ’ ಎಂದು ತಿಳಿಸಿದ್ದಾರೆ.

ದೂರು ನೀಡಿಲ್ಲ
ಕಾಮತ್‌ ಅವರ ಸಾವಿನ ಬಗ್ಗೆ ಅವರ ಕುಟುಂಬಸ್ಥರು ಯಾವುದೇ ಸಂದೇಹ ವ್ಯಕ್ತಪಡಿಸಿ ದೂರು ನೀಡಿಲ್ಲ. ಆದಾಗ್ಯೂ ಯಾವುದೇ ಅನುಮಾನಗಳಿಗೆ ಆಸ್ಪದವಾಗಬಾರದೆಂಬ ಉದ್ದೇಶದಿಂದ ಎಸಿಪಿ ನೇತೃತ್ವದಲ್ಲಿಯೇ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಬ್ಬರೇ ಇದ್ದಾಗ ಕೃತ್ಯ
ರಾಮದಾಸ್‌ ಕಾಮತ್‌ ಅವರು ಪತ್ನಿಯನ್ನು ಮುಂಡ್ಕೂರಿಗೆ ಬಿಟ್ಟು ಬಂದಿದ್ದರು. ಮರುದಿನ ತಾನು ಕೂಡ ಮುಂಡ್ಕೂರಿಗೆ ಬರುವುದಾಗಿ ಹೇಳಿದ್ದರು. ಆದರೆ ಹೋಗಿರಲಿಲ್ಲ. ಪತ್ನಿ ಕರೆ ಮಾಡಿದಾಗ ಸ್ವೀಕರಿಸಲಿಲ್ಲ. ಆಗ ಪತ್ನಿ ಮಂಗಳೂರಿನಲ್ಲಿರುವ ತನ್ನ ತಂಗಿಯ ಮಕ್ಕಳಿಗೆ ತಿಳಿಸಿದರು. ಅವರು ಬಂದು ನೋಡಿದಾಗ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next