Advertisement

ಮುಂಡ್ಕೂರು-ನಿರಂತರ ನೀರು ಪೂರೈಕೆ: ಮಳೆ ಬರುವವರೆಗೆ ನೀರಿಗೆ ಬರವಿಲ್ಲ

03:09 PM Apr 01, 2024 | Team Udayavani |

ಬೆಳ್ಮಣ್‌: ಎಲ್ಲೆಡೆ ನದಿ , ಹಳ್ಳ ,ಕೊಳ್ಳಗಳು ಬತ್ತಿ ಬರಡಾಗಿ ನೀರಿಗಾಗಿ ಹಾಹಾಕಾರವಿದ್ದರೂ ಮುಂಡ್ಕೂರಿನ ಶಾಂಭವಿ ನದಿಯಲ್ಲಿ ನೀರು ಇನ್ನೂ ಸಾಕಷ್ಟಿದ್ದು ಈ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಜನರ ಜಲಕ್ಷಾಮವನ್ನು ದೂರ ಮಾಡಿದೆ.

Advertisement

ಇಲ್ಲಿನ ಸಂಕಲಕರಿಯ ಶಾಂಭವಿ ಅಣೆಕಟ್ಟು ಹಾಗೂ ಪಲಿಮಾರುವಿನ ಆಣೆಕಟ್ಟು ಸಮರ್ಪಕ ನಿರ್ವಹಣೆ ಕಂಡುಕೊಂಡ ಪರಿಣಾಮ ಇಲ್ಲಿನ ನದಿಯಲ್ಲಿ ಇನ್ನೂ ನೀರು ತುಂಬಿದೆ. ಈ ಭಾಗದ ಪಂಚಾಯತ್‌ನ ತೆರೆದ ಬಾವಿ ಹಾಗೂ ಕೃಷಿಕರ
ಪಂಪ್‌ ಸೆಟ್‌ಗಳ ಬಾವಿಗಳಲ್ಲಿ ನೀರಿನ ಒರತೆ ಉತ್ತಮವಾಗಿದ್ದು ಸಾರ್ವಜನಿಕರಿಗೆ ನೀರು ಪೂರೈಕೆ ಹಾಗೂ ಕೃಷಿಕರ ನೀರಾವರಿ ಯೋಜನೆ ಉತ್ತಮವಾಗಿ ನಡೆಯುತ್ತಿದೆ. ವಿದ್ಯುತ್‌ ತೊಂದರೆ, ಪಂಪ್‌ ಕೆಟ್ಟು ಹೋಗುವುದು ಅಥವಾ ಇನ್ನಿತರ ತಾಂತ್ರಿಕ ತೊಂದರೆ ಬಿಟ್ಟರೆ ಇಲ್ಲಿನವರಿಗೆ ನೀರಿನ ಸಮಸ್ಯೆ ಈಗಿಲ್ಲ. .

ಕೃಷಿಕರಲ್ಲಿ ಸಂತಸ
ಮುಂಡ್ಕೂರು ಸಂಕಲಕರಿಯದ ಶಾಂಭವಿ ನದಿ ಅಣೆಕಟ್ಟಿನ ನಿರ್ವಹಣೆಯನ್ನು ಪ್ರಗತಿಪರ ಕೃಷಿಕ ಸುಧಾಕರ ಸಾಲ್ಯಾನ್‌ ನಡೆಸುತ್ತಿದ್ದು ಈ ಬಾರಿಯೂ ಸಕಾಲಕ್ಕೆ ನಿರ್ವಹಣೆ ಮಾಡಿದ್ದರ ಪರಿಣಾಮವಾಗಿ ಶಾಂಭವಿ ನದಿಯಲ್ಲಿ ಇನ್ನೂ ನೀರು ತುಂಬಿ ಈ ಭಾಗದ ಕೃಷಿಕರು ತಮ್ಮ ಪಂಪ್‌ ಸೆಟ್‌ ಮೂಲಕ ನೀರು ಬಳಸಿ ಸಹಸ್ರಾರು ಎಕರೆ ಕೃಷಿ ಭೂಮಿಗಳನ್ನು ಹಸಿರಾಗಿಸಿದ್ದಾರೆ.

ಮುಂಡ್ಕೂರಿನ ಸಂಕಲಕರಿಯ, ಏಳಿಂಜೆ, ಪಟ್ಟೆ, ಶುಂಟಿಪಾಡಿ, ಕೊಟ್ರಪಾಡಿ, ಉಗ್ಗೆದಬೆಟ್ಟು, ಪೊಸ್ರಾಲು, ಸಚ್ಚೇರಿಪೇಟೆ ಭಾಗದ ಬಹುತೇಕ ಕೃಷಿಕರು ತಮ್ಮ ಹೊಲಗಳಲ್ಲಿ ಮೂರು ಬೆಳೆ ಬೆಳೆದಿದ್ದಾರೆ. ಈ ಕಾರಣಗಳಿಂದಾಗಿ ಮುಂಡ್ಕೂರು ಗ್ರಾಮ ಪಂಚಾಯತ್‌ ನೀರು ಪೂರೈಕೆಯಲ್ಲಿ ಜನರಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗಿದೆ.

ರೋಟರಿ, ಬರೋಡಾ ಬ್ಯಾಂಕ್‌ ಸಾಥ್‌
ನಿರಂತರ 7-8 ವರ್ಷಗಳಿಂದ ಸಂಕಲಕರಿಯ ಶಾಂಭವಿ ನದಿ ಅಣೆಕಟ್ಟು ನಿರ್ವಹಣೆ ನಡೆಸುವ ಸಂಕಲಕರಿಯ ಸುಧಾಕರ
ಸಾಲ್ಯಾನ್‌ ಅವರ ಪ್ರಯತ್ನಕ್ಕೆ ಕಿನ್ನಿಗೋಳಿ ರೋಟರಿ ಬ್ಯಾಂಕ್‌ ಆಫ್‌ ಬರೋಡಾ ಕಿನ್ನಿಗೋಳಿ ಶಾಖೆಯ ಮೂಲಕ ಸಹಕಾರ
ನೀಡುವ ಭರವಸೆ ನೀಡಿದೆ. ಈಗಾಗಲೇ ಸಣ್ಣ ನೀರಾವರಿ ಇಲಾಖೆಯೂ ಹಲಗೆ ಅಳವಡಿಸುವ, ತೆಗೆಯುವ ಕಾಯಕಕ್ಕೂ
ಸಹಕರಿಸುವ ಸಾಧ್ಯತೆ ಇದೆ. ಸಾರ್ವಜನಿಕರಿಗೆ ನೀರಿನ ಆಸರೆ ನೀಡಿದ ಪ್ರಗತಿಪರ ಕೃಷಿಕ, ಸುಧಾಕರ್‌ ಅವರ ಶ್ರಮ ಶ್ಲಾಘನೀಯ.

Advertisement

*ಶರತ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next