Advertisement

ಈರುಳ್ಳಿಗೆ ಪ್ರೋತ್ಸಾಹಧನ ಘೋಷಣೆ 

04:00 PM Dec 07, 2018 | Team Udayavani |

ಮುಂಡರಗಿ: ಈರುಳ್ಳಿ ಬೆಳೆದ ರೈತರಿಗೆ ಸರ್ಕಾರವು 200 ರೂ. ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೆ ತಂದಿದೆ. ರೈತರು ಡಿ. 17ರೊಳಗೆ ಬೆಳೆದ ಈರುಳ್ಳಿಯನ್ನು ಮಾರಾಟ ಮಾಡಬೇಕು ಎಂದು ಎಪಿಎಂಸಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ತಿಳಿಸಿದರು.

Advertisement

ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ಗುರುವಾರ ತರಕಾರಿ ವ್ಯಾಪಾರಸ್ಥರು, ಎಪಿಎಂಸಿ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ತುರ್ತು ಸಭೆಯಲ್ಲಿ ಅವರು ಮಾತನಾಡಿದರು. ಸರ್ಕಾರ ಈರುಳ್ಳಿ ಬೆಲೆಗೆ ಏಳುನೂರು ರೂಪಾಯಿಗಳ ಬೆಂಬಲ ಬೆಲೆ ನಿಗದಿಗೊಳಿಸಿದೆ. ರೈತರಿಗೆ ವ್ಯತ್ಯಾಸದ ದರವನ್ನು ಮಾತ್ರ ನೀಡಲಾಗುವುದು. ಒಬ್ಬ ರೈತನು ಗರಿಷ್ಠ ಎಪ್ಪತೈದು ಕ್ವಿಂಟಲ್‌ ಈರುಳ್ಳಿಯನ್ನು ಮಾತ್ರ ಮಾರಾಟ ಮಾಡಲು ಅವಕಾಶವಿದೆ. ರೈತರು ಅಗತ್ಯ ದಾಖಲೆ ನೀಡಿ ಸರ್ಕಾರದ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು. ವ್ಯಾಪಾರಸ್ಥರು ಈರುಳ್ಳಿ ಖರೀದಿಸಿದರೆ ಸಂಗ್ರಹಕ್ಕಾಗಿ ಉಗ್ರಾಣವನ್ನು ಉಚಿತವಾಗಿ ನೀಡಲಾಗುವುದು ಎಂದು ಶಿವಕುಮಾರಗೌಡ ಪಾಟೀಲ ಭರವಸೆ ನೀಡಿದರು.

ತರಕಾರಿ ವ್ಯಾಪಾರಸ್ಥರ ಸಂಘದ ಉಪಾಧ್ಯಕ್ಷ ವಿಜಯಕುಮಾರ ಅಕ್ಕಿ ಮಾತನಾಡಿ, ಪ್ರತಿದಿನ ತರಕಾರಿ ಮಾರುಕಟ್ಟೆಯಲ್ಲಿ ಐದುನೂರು ಕ್ವಿಂಟಲ್‌ ಈರುಳ್ಳಿಯನ್ನು ಖರೀದಿಸಲಾಗುತ್ತದೆ. ಆ ಮೂಲಕ ರೈತರಿಗೆ ಅನುಕೂಲವಾಗಲಿದೆ ಎಂದರು. ಈರುಳ್ಳಿ ಬೆಳೆದ ರೈತ ಹೊಸಮನಿ ಮಾತನಾಡಿ, ನ. 28ಕ್ಕಿಂತ ಪೂರ್ವದಲ್ಲಿ ರೈತರು ಮಾರಾಟ ಮಾಡಿರುವ ಈರುಳ್ಳಿಗೂ ಎರಡು ನೂರು ರೂಪಾಯಿಗಳ ಪ್ರೋತ್ಸಾಹ ಧನ ನೀಡಬೇಕು ಎಂದು ಮನವಿ ಮಾಡಿಕೊಂಡರು. ಎಪಿಎಂಸಿ ಉಪಾಧ್ಯಕ್ಷ ವಿರೂಪಾಕ್ಷಗೌಡ್ರ ಮರಿಗೌಡ್ರ, ಕಾರ್ಯದರ್ಶಿ ಎನ್‌.ಎಚ್‌. ಈಶ್ವರಾಚಾರಿ, ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಈರಣ್ಣ ಬೇವಿನಮರದ, ತರಕಾರಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಫರೀದ್‌ ಲೈನದ, ಕೊಟ್ರೇಶ ಅಂಗಡಿ ಮತ್ತಿತರರು ಇದ್ದರು.

ರಾಜ್ಯದಲ್ಲಿ ಸುಮಾರು 1.53ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಅಂದಾಜು 29 ಲಕ್ಷ ಮೆಟ್ರಿಕ್‌ ಟನ್‌ ಈರುಳ್ಳಿ ಬೆಳೆಯಲಾಗಿದೆ. ಅದಕ್ಕೆ ಪ್ರೋತ್ಸಾಹ ಧನ ನೀಡಲು ಸರ್ಕಾರ 50-75ಕೋಟಿ ಬಳಸಲು ನಿರ್ಧರಿಸಿದೆ.
.ಸುರೇಶ ಕುಂಬಾರ,
ತೋಟಗಾರಿಕೆ ಸಹಾಯಕ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next