Advertisement

ಮುಂಡಗೋಡ- ಶಾಸಕರ ಮಾದರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ಆತಂಕ

06:04 PM Jun 10, 2024 | Team Udayavani |

■ ಉದಯವಾಣಿ ಸಮಾಚಾರ
ಮುಂಡಗೋಡ: ಇಲ್ಲಿನ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳು ಸಮರ್ಪಕವಾಗಿ ಶಿಕ್ಷಣ ಸಿಗದೇ ವಂಚಿತರಾಗುತ್ತಿದ್ದಾರೆ ಎಂಬ ಆತಂಕ ಪಾಲಕರಲ್ಲಿ ಮೂಡಿದ್ದು ಬೇರೆ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ.

Advertisement

ಪಟ್ಟಣ ಹೃದಯ ಭಾಗದಲ್ಲಿ ಶಾಸಕರ ಮಾದರಿ ಶಾಲೆಯಿದ್ದು, ಇಲ್ಲಿ ಒಂದರಿಂದ ಎಂಟನೇ ತರಗತಿ ವರೆಗೆ ಕನ್ನಡ ಹಾಗೂ ಒಂದರಿಂದ 6ನೇ ತರಗತಿವರೆಗೆ ಆಂಗ್ಲ ಮಾಧ್ಯಮ ಶಿಕ್ಷಣ ಪಡೆಯುತ್ತಿದ್ದು, ಒಟ್ಟು 650 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕನ್ನಡ ಹಾಗೂ ಆಂಗ್ಲ ಮಾಧ್ಯಮವಿರುವ ಕಾರಣ ಈ ಶಾಲೆಯಲ್ಲಿ ಒಟ್ಟು ಇಪ್ಪತ್ತು ಶಿಕ್ಷಕರು ಕರ್ತವ್ಯ ನಿರ್ವಹಿಸಬೇಕು. ಆದರೆ ಸದ್ಯ ಮುಖ್ಯೋಪಾಧ್ಯಾಯ ಸೇರಿ 9 ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.

ಕಳೆದ ವರ್ಷ ನಡೆದ ವರ್ಗಾವಣೆಯಲ್ಲಿ ಈ ಶಾಲೆ ಯಿಂದ ಹಲವಾರು ಶಿಕ್ಷಕರು ಬೇರಡೆ ವರ್ಗಾವಣೆ ಗೊಂಡಿದ್ದಾರೆ. ಆದರೆ ವರ್ಗವಾದ ಶಿಕ್ಷಕರ ಜಾಗಕ್ಕೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿತ್ತು. ಆದರೆ ಪ್ರಸ್ತುತ ವರ್ಷದಲ್ಲಿ ಕನ್ನಡ ಮಾಧ್ಯಮ ಮತ್ತು ಇಂಗ್ಲಿಷ ಮಾಧ್ಯಮ ತಲಾ ನಾಲ್ಕು ಶಿಕ್ಷಕರ ಕೊರತೆ ಎದುರಾಗಿದೆ.

ಶಾಸಕರ ಮಾದರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ಸಿಗುತ್ತದೆ ಎಂಬ ಉದ್ದೇಶದಿಂದ ಕನ್ನಡ ಹಾಗೂ ಆಂಗ್ಲ ಮಾಧ್ಯಮಕ್ಕೆ ವಿದ್ಯಾರ್ಥಿಗಳನ್ನು ಸೇರಿಸಿದ್ದಾರೆ. ಆದರೆ ಇದೀಗ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳಿಗೆ ಸರಿಯಾಗಿ ಶಿಕ್ಷಣ ಸಿಗುತ್ತಿಲ್ಲ. ಅಲ್ಲದೆ ನಮ್ಮ ಮಕ್ಕಳ ಶಾಲೆಯಲ್ಲಿ ಟೀಚರ್‌ ಇರುವುದಿಲ್ಲ, ಶಾಲೆಗೆ ಹೋಗುವುದಿಲ್ಲ ಎಂದು ಗೈರಾಗುತ್ತಿದ್ದಾರೆ.

ಕೆಲ ಪಾಲಕರು ಶಿಕ್ಷಕರ ಕೊರತೆಯಿಂದ ಮಕ್ಕಳನ್ನು ಬೇರೆ ಶಾಲೆಗೆ ಹಾಕುತ್ತಿದ್ದಾರೆ. ಹೀಗಾಗಿ ವರ್ಗವಾಗಿ ಹೋದ ಅವರ ಜಾಗಕ್ಕೆ ಬೇರೆ ಶಿಕ್ಷಕರನ್ನು ನೇಮಿಸಬೇಕು. ಅದು ಬಿಟ್ಟು ಶಿಕ್ಷಕರೆ ಇಲ್ಲದಿದ್ದರೆ ಮಕ್ಕಳ ಭವಿಷ್ಯ ಏನೆಂಬುದು ಪಾಲಕರ ಚಿಂತೆಗೀಡು ಮಾಡಿದೆ. ಸದ್ಯ 9 ಶಿಕ್ಷಕರ ಕೊರತೆಯಿದೆ. ಶೀಘ್ರವೇ ಶಿಕ್ಷಕರನ್ನು ನೇಮಿಸದೆ ಹೋದರೆ ಪಾಲಕರು ಶಿಕ್ಷಣ ಇಲಾಖೆ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಕೆಲ ಪಾಲಕರು ತಿಳಿಸಿದ್ದು, ಕೂಡಲೆ ಶಿಕ್ಷಕರನ್ನು ನೇಮಕ ಮಾಡಿ ಮಾದರಿ ಶಾಲೆಯೂ ತಾಲೂಕಿನ ಇತರೆ ಶಾಲೆ ಗಳಿಗೆ ಮಾದರಿಯಾಗಿರಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ. ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಕೂಡಲೇ ಶಾಸಕರ ಮಾದರಿ ಶಾಲೆಗೆ ಶಿಕ್ಷಕರನ್ನು ನೇಮಕ ಮಾಡಬೇಕು. ಇಲ್ಲದಿದ್ದರೆ ಪಾಲಕರು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

Advertisement

ಶಿಕ್ಷಕರ ಕೊರತೆ ಬಗ್ಗೆ ಬಿಇಒ ಅವರ ಗಮನಕ್ಕೆ ತರಲಾಗಿದೆ. ಸದ್ಯಕ್ಕೆ ಐದು ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಿ ಎಂದು ಸೂಚಿಸಿದ್ದಾರೆ. ಕಳೆದ ವರ್ಷ ಕರ್ತವ್ಯ ನಿರ್ವಹಿಸಿದ ಅತಿಥಿ ಶಿಕ್ಷಕರಿಗೆ ನಾಳೆಯಿಂದಲೇ ಬನ್ನಿ ಎಂದು ತಿಳಿಸಿದ್ದೇನೆ.
●ವಿನೋದ ನಾಯ್ಕ, ಶಾಲೆ ಮುಖ್ಯೋಪಾಧ್ಯಾಯ

Advertisement

Udayavani is now on Telegram. Click here to join our channel and stay updated with the latest news.

Next