Advertisement

ವಾರ್ಡ್‌ ಸಮಿತಿ ರಚನೆಗೆ ಪಾಲಿಕೆ ಅನುಮೋದನೆ; ಸದಸ್ಯರ ಆಯ್ಕೆಯನ್ನು ಸ್ಥಳೀಯ ನಾಗರಿಕರೇ ನಡೆಸಲಿ

08:31 PM Aug 14, 2020 | mahesh |

ಮಹಾನಗರ: ಮಂಗಳೂರಿನ ನಾಗರಿಕರ ಬಹು ಬೇಡಿಕೆಯಾದ ವಾರ್ಡ್‌ ಸಮಿತಿ ರಚನೆಗೆ ಇದೀಗ ಮಂಗಳೂರು ಮಹಾನಗರ ಪಾಲಿಕೆಯಿಂದ ಅನುಮೋದನೆ ದೊರಕಿದೆ. ಪಾರದರ್ಶಕ ಆಡಳಿತ ಪಡೆಯುವ ಸಲುವಾಗಿ ಆ ಭಾಗದ ಜನರೇ ವಾರ್ಡ್‌ ಸದಸ್ಯರನ್ನು ಆಯ್ಕೆ ಮಾಡಲು ಅವಕಾಶ ನೀಡುವಂತೆ ಇದೀಗ ಒತ್ತಾಯ ಶುರುವಾಗಿದೆ.

Advertisement

ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ ಗಳಲ್ಲಿ ಪಾರದರ್ಶಕ ಆಡಳಿತ ನೀಡುವ ಸಲುವಾಗಿ ವಾರ್ಡ್‌ ಸಮಿತಿ ರಚಿಸಬೇಕು ಎಂಬುದು ನಾಗರಿಕರ ಹಲವು ವರ್ಷಗಳ ಬೇಡಿಕೆಯಾಗಿತ್ತು. ವಾರ್ಡ್‌ ಸಮಿತಿ ರಚನೆಯಾದ ಬಳಿಕ ಪಾಲಿಕೆ ಅಭಿವೃದ್ಧಿಯಲ್ಲಿ ಜನರ ನೇರ ಸಹಭಾಗಿತ್ವಕ್ಕೆ ಅವಕಾಶ ದೊರೆಯಲಿದೆ. ಆದರೆ ವಾರ್ಡ್‌ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡುವಾಗ ಜನರ ಸಹಭಾಗಿತ್ವ ಅಗತ್ಯವಾಗಿದ್ದು, ಜನರೇ ಆಯ್ಕೆ ಮಾಡಬೇಕು ಎಂಬುದು ವಾರ್ಡ್‌ ಸಮಿತಿ ರಚನೆಗಾಗಿ ಹೋರಾಡುತ್ತಿರುವ ನಾಗರಿಕರ ಅಭಿಪ್ರಾಯ.

ಬೆಂಗಳೂರು ಮುಂತಾದೆಡೆ ಈಗಾಗಲೇ ವಾರ್ಡ್‌ ಸಮಿತಿ ಅಸ್ತಿತ್ವದಲ್ಲಿದೆ. ಅಲ್ಲಿ ಕಾರ್ಪೊರೇಟರ್‌ಗಳು ಅವರಿಗೆ ಬೇಕಾದ ಜನರನ್ನೇ ಆಯ್ಕೆ ಮಾಡಿದ್ದಾರೆ. ಹೀಗೆ ಮಾಡುವುದರಿಂದ ಪಾರದರ್ಶಕ ಆಡಳಿತ ನಿರೀಕ್ಷಿಸುವುದು ಅಸಾಧ್ಯ. ಜನರೇ ಆಯ್ಕೆ ಮಾಡುವ ಅನುಭವಿಗಳು, ಯುವಕರು ವಾರ್ಡ್‌ ಕಮಿಟಿಯ ಸದಸ್ಯರಾಗಬೇಕು ಎನ್ನುವುದು ವಾರ್ಡ್‌ ಸಮಿತಿಗೆ ಹೋರಾಡುತ್ತಿರುವ ನಾಗರಿಕರ ವಾದ.

ಆಶ್ವಾಸನೆ ಈಡೇರಿಕೆ
ಕಳೆದ ಅಕ್ಟೋಬರ್‌ನಲ್ಲಿ ಪಾಲಿಕೆ ಚುನಾವಣೆ ಮುಗಿದ ತತ್‌ಕ್ಷಣ ಅಸ್ತಿತ್ವಕ್ಕೆ ಬರಬೇಕಿದ್ದ ವಾರ್ಡ್‌ ಸಮಿತಿಗಳ ರಚನೆ ಪ್ರಕ್ರಿಯೆಗೆ ಮೇಯರ್‌ ಆಯ್ಕೆ ಮತ್ತು ಸದಸ್ಯರ ಪ್ರತಿಜ್ಞಾವಿಧಿ ಸ್ವೀಕಾರವಾಗದೇ ಇದ್ದುದರಿಂದ ತೊಡಕಾಗಿತ್ತು. ಆ ಬಳಿಕ ಕೊರೊನಾ ಆತಂಕದಿಂದ ಲಾಕ್‌ಡೌನ್‌ ಆದ ಪರಿಣಾಮ ಪಾಲಿಕೆಯ ಸಭೆಗಳೂ ನಡೆಯದೇ ಇದ್ದದ್ದರಿಂದಾಗಿ ವಾರ್ಡ್‌ ಸಮಿತಿ ರಚನೆ ಸಂಬಂಧ ಚರ್ಚೆ ಮುನ್ನೆಲೆಗೆ ಬಂದಿರಲಿಲ್ಲ. ಪಾಲಿಕೆ ಆಡಳಿತದಲ್ಲಿ ವಾರ್ಡ್‌ ಸಮಿತಿ ರಚಿಸಬೇಕೆಂಬ ಹೈಕೋರ್ಟ್‌ ಆದೇ ಶದ ಹಿನ್ನೆಲೆಯಲ್ಲಿ ಚುನಾವಣೆ ಪೂರ್ವ ದಲ್ಲಿ ಕಣದಲ್ಲಿದ್ದ ಅಭ್ಯರ್ಥಿಗಳೆಲ್ಲರೂ ವಾರ್ಡ್‌ ಸಮಿತಿ ರಚನೆಯ ಆಶ್ವಾಸನೆ ನೀಡಿದ್ದರು. ಪಾಲಿಕೆಯಲ್ಲಿ ನೂತನ ಆಡಳಿತ ಶುರುವಾದ ಬಳಿಕ ನಡೆದ ಪರಿಷತ್‌ನ ಮೊದಲ ಸಾಮಾನ್ಯ ಸಭೆಯಲ್ಲಿ ವಾರ್ಡ್‌ ಕಮಿಟಿ ರಚನೆ ಪ್ರಕ್ರಿಯೆಗೆ ಅನುಮೋದನೆ ಸಿಕ್ಕಿದೆ.

ಸಮಿತಿ ರಚನೆ ಹೇಗೆ?
ಪ್ರತಿಯೊಂದು ವಾರ್ಡ್‌ನ ವಿವಿಧ ಪ್ರದೇಶಗಳ ಜನತೆ ತಮ್ಮ ತಮ್ಮ ಪರಿಸರದ ಸದಸ್ಯರನ್ನು ಆಯ್ಕೆ ಮಾಡಿ ಕಾರ್ಪೊ
ರೇಟರ್‌ಗೆ ತಿಳಿಸಬೇಕು. ಕಾರ್ಪೊರೇಟರ್‌ ಆ ಸಮಿತಿಯ ಅಧ್ಯಕ್ಷರಾಗಿದ್ದು, ಆ ಮಾಹಿತಿಯನ್ನು ಆಯುಕ್ತರಿಗೆ ನೀಡುತ್ತಾರೆ. ಆಯುಕ್ತರು ಅದಕ್ಕೆ ಅನುಮೋದನೆ ನೀಡಬೇಕು. ವಾರ್ಡ್‌ ಸಮಿತಿಯಲ್ಲಿ ಒಟ್ಟು 10 ಜನ ಸದಸ್ಯರಿರುತ್ತಾರೆ. ಆ ಪೈಕಿ ಮೂವರು ಮಹಿಳೆಯರು, ನಿವೃತ್ತ ಸರಕಾರಿ ನೌಕರರು, ಯುವಕರು ಕಡ್ಡಾಯವಾಗಿ ಸಮಿತಿಯಲ್ಲಿರಬೇಕು.

Advertisement

ಒಂದು ವೇಳೆ ವಾರ್ಡ್‌ ಸಮಿತಿಯ ಸಲಹೆ, ಅಸಮ್ಮತಿಯನ್ನು ಮೀರಿಯೂ ಕಾರ್ಪೊರೇಟರ್‌ ಅನುದಾನ ಬಳಕೆ ಅಥವಾ ಇತರೆ ಕಾರ್ಯಗಳನ್ನು ಮಾಡುವುದಾದರೆ ಲಿಖೀತವಾಗಿ ಆಯುಕ್ತರಿಗೆ ಕಾರ್ಪೊರೇಟರ್‌ ತಿಳಿಸಬೇಕು. “ನಾನು ವಾರ್ಡ್‌ ಸಮಿತಿಯ ತೀರ್ಮಾನವನ್ನು ಉಲ್ಲಂ ಸುತ್ತಿದ್ದೇನೆ’ ಎಂದು ಗಮನಕ್ಕೆ ತರಬೇಕಾಗುತ್ತದೆ.

ವಾರ್ಡ್‌ ಸಮಿತಿ ಅಧಿಕಾರ
ಪ್ರತಿಯೊಂದು ವಾರ್ಡ್‌ನ ಜನರು ತಾವು ಆಯ್ಕೆ ಮಾಡುವ ಪ್ರತಿನಿಧಿಯ (ಕಾರ್ಪೊರೇಟರ್‌) ಕಾರ್ಯವೈಖರಿ ಮೇಲೆ ನೇರವಾಗಿ ಪ್ರಭಾವ ಬೀರಲು ವಾರ್ಡ್‌ ಸಮಿತಿ ನೆರವಾಗುತ್ತದೆ. ಕಾರ್ಪೊರೇಟರ್‌ ಅಥವಾ ಆ ವಾರ್ಡ್‌ನ ಸದಸ್ಯ ತನ್ನ ಇಚ್ಛಾನುಸಾರ, ಅನಗತ್ಯವೆನಿಸುವ ಕಾಮಗಾರಿ ಮಾಡಿಸುವುದನ್ನು ತಡೆಯುವ ಅಧಿಕಾರ ವಾರ್ಡ್‌ ಸಮಿತಿಗಿರುತ್ತದೆ.

ಜನರ ಆಯ್ಕೆ
ವಾರ್ಡ್‌ ಸಮಿತಿ ರಚನೆಯಾಗಬೇಕೆಂಬುದು ನಮ್ಮ ಹಲವು ವರ್ಷಗಳ ಬೇಡಿಕೆಯಾಗಿತ್ತು. ಇದೀಗ ಸಮಿತಿ ರಚನೆಗೆ ಅನುಮೋದನೆ ಸಿಕ್ಕಿರುವುದು ತುಂಬಾ ಖುಷಿಯ ವಿಚಾರ. ಪ್ರತಿ ವಾರ್ಡ್‌ನಲ್ಲಿಯೂ ಕಾರ್ಪೊರೇಟರ್‌ಗಳು ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡದೆ ಜನತೆಯೇ ಆಯ್ಕೆ ಮಾಡುವಂತಾಗಬೇಕು. ಈಗಲಾದರೂ ಪ್ರಜಾಪ್ರಭುತ್ವ ಅನುಷ್ಠಾನಕ್ಕೆ ಬರುತ್ತದೆ ಎಂಬ ಆಶಾಭಾವನೆ.
– ಪದ್ಮನಾಭ ಉಳ್ಳಾಲ್‌, ಎಂಸಿಸಿ ಸಿವಿಕ್‌ ಗ್ರೂಪ್‌

Advertisement

Udayavani is now on Telegram. Click here to join our channel and stay updated with the latest news.

Next