Advertisement

ಹೊರಗುತ್ತಿಗೆ, ದಿನಗೂಲಿ ನೌಕರರ ನೇರ ನೇಮಕಾತಿ: ಪೌರ ಕಾರ್ಮಿಕರಲ್ಲಿ ಮೂಡಿತು ಆಶಾಭಾವ

09:23 PM Jan 25, 2023 | Team Udayavani |

ಮಂಗಳೂರು: ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಪೌರ ಕಾರ್ಮಿಕರಿಗೆ ನೇರ ನೇಮಕಾತಿ, ನೇರ ಪಾವತಿ ವ್ಯವಸ್ಥೆಗೆ ಸರಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ 526 ಪೌರ ಕಾರ್ಮಿಕರಲ್ಲಿ ಆಶಾಭಾವ ಮೂಡಿದೆ.

Advertisement

ದ.ಕ. ಜಿಲ್ಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಹೊರತುಪಡಿಸಿ 13 ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಹಾಗೂ ಉಡುಪಿಯ 6 ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಪೌರ ಕಾರ್ಮಿಕರ ನೇರ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಈಗಾಗಲೇ ದಿನಗೂಲಿ, ಹೊರಗುತ್ತಿಗೆ/ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಆದ್ಯತೆ ದೊರೆಯಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ, ಪುತ್ತೂರು, ಬಂಟ್ವಾಳ, ಮೂಡುಬಿದಿರೆ, ಬೆಳ್ತಂಗಡಿ, ಸುಳ್ಯ, ಸೋಮೇಶ್ವರ, ಕಡಬ, ಬಜಪೆ, ಕಿನ್ನಿಗೋಳಿ, ಮೂಲ್ಕಿ, ವಿಟ್ಲ, ಕೋಟೆಕಾರು ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಮಂಜೂರಾದ ಒಟ್ಟು ಪೌರ ಕಾರ್ಮಿಕರ ಸಂಖ್ಯೆ 483 ಆಗಿದ್ದು ಈ ಪೈಕಿ 371 ಹುದ್ದೆಗಳು ಖಾಲಿ ಇವೆ.

ಉಡುಪಿ ಜಿಲ್ಲೆಯ ಉಡುಪಿ, ಕಾರ್ಕಳ, ಕುಂದಾಪುರ, ಕಾಪು, ಬೈಂದೂರು, ಸಾಲಿಗ್ರಾಮ ಗಳಲ್ಲಿ ಒಟ್ಟು ಮಂಜೂರಾದ 372 ಪೌರ ಕಾರ್ಮಿಕ ಹುದ್ದೆಗಳಲ್ಲಿ 155 ಖಾಲಿ ಹುದ್ದೆಗಳು ಖಾಲಿಯಿವೆ.

ಈ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಹೊರಗುತ್ತಿಗೆ/ಗುತ್ತಿಗೆ/ ದಿನಗೂಲಿ ನೌಕರರಾಗಿ 277 ಮಂದಿ ಹಾಗೂ ಉಡುಪಿಯಲ್ಲಿ 164 ಮಂದಿ ಕರ್ತವ್ಯದಲ್ಲಿದ್ದಾರೆ. ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆದೇಶ ಬಂದಿರುವುದು ಇದೀಗ ಗುತ್ತಿಗೆಯಡಿ ಹಲವು ವರ್ಷಗಳಿಂದ ದುಡಿಯುತ್ತಿರುವ ಪೌರ ಕಾರ್ಮಿಕರಲ್ಲಿ ಸಂತಸ ಮೂಡಿಸಿದೆ.

Advertisement

ವಿದ್ಯಾರ್ಹತೆ ಅನಗತ್ಯ
ಸರಕಾರದ ಆದೇಶದಂತೆ ಪೌರ ಕಾರ್ಮಿಕರ ನೇರ ನೇಮಕಾತಿಗೆ ವಿದ್ಯಾರ್ಹತೆ ಅನ್ವಯ ವಾಗುವುದಿಲ್ಲ. ಆದರೆ ಕನ್ನಡ ಮಾತನಾಡಲು ಗೊತ್ತಿರಬೇಕು. ಪೌರ ಕಾರ್ಮಿಕ/ ಲೋಡರ್ಸ್‌/ಕ್ಲೀನರ್ಸ್‌ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವ ನೇರ ಪಾವತಿ ಕ್ಷೇಮಾಭಿವೃದ್ಧಿ, ದಿನಗೂಲಿ, ಗುತ್ತಿಗೆ, ಹೊರಗುತ್ತಿಗೆ, ಸಮಾನ ಕೆಲಸಕ್ಕೆ ಸಮಾನ ವೇತನ ನೌಕರರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಖಾಯಂ ಮಾಡಲು ಸಾಧ್ಯವಾಗದಿರುವ ಪೌರ ಕಾರ್ಮಿಕ ರನ್ನು ನೇರ ವೇತನ ಪಾವತಿ ವ್ಯಾಪ್ತಿಗೆ ತಂದು ಗುತ್ತಿಗೆ, ಹೊರ ಗುತ್ತಿಗೆ ಸಂಪೂರ್ಣವಾಗಿ ರದ್ದು ಮಾಡಲು ಈಗಾಗಲೇ ರಾಜ್ಯ ಸರಕಾರದಿಂದ ಆದೇಶವಾಗಿದೆ.

ಗುತ್ತಿಗೆ/ಹೊರಗುತ್ತಿಗೆಯಡಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಕನಿಷ್ಠ ವೇತನ, ನೇರ ಪಾವತಿಯ ಸೌಲಭ್ಯವಿಲ್ಲದೆ ಸಂಕಷ್ಟ ಪಡುತ್ತಿರುವ ಕುರಿತಂತೆ ಪೌರ ಕಾರ್ಮಿಕರ ಸಂಘವು ಕಳೆದ ಹಲವಾರು ವರ್ಷಗಳಿಂದ ರಾಜ್ಯ ಮಟ್ಟದ ಹೋರಾಟದ ಮೂಲಕ ಗಮನ ಸೆಳೆಯುತ್ತಾ ಬಂದಿದೆ. ಇದೀಗ ನೇರ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿರುವುದು ಸಂತಸವಾಗಿದೆ.
-ಅನಿಲ್‌ ಕುಮಾರ್‌, ಅಧ್ಯಕ್ಷ, ದಕ್ಷಿಣ ಕನ್ನಡ ಜಿಲ್ಲಾ ಪೌರ ಕಾರ್ಮಿಕರ ಸಂಘ/
– ಶಂಕರ್‌, ಹಿರಿಯ ಪೌರ ಕಾರ್ಮಿಕ, ಉಡುಪಿ ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next