ಚಿಕ್ಕನಾಯಕನಹಳ್ಳಿ: ಆದಾಯ ಹೆಚ್ಚಿಸಲು ಪುರಸಭೆ ಅಧಿಕಾರಿಗಳು, ಸದಸ್ಯರು ನಿರ್ಧರಿಸಿದ್ದು ಮಳಿಗೆಗಳನ್ನು ಹರಾಜು ಮಾಡಲು ಸಿದ್ಧತೆ ಕೈಗೊಂಡಿದ್ದಾರೆ. ಹಲವು ವರ್ಷಗಳಿಂದ ಹರಾಜಾಗದೇ ಮಳಿಗೆಗಳು ಉಳಿದಿವೆ. ಅಲ್ಲದೇ, ಅವಧಿ ಮುಗಿದ ಮಳಿಗೆಗಳಿಗೆ ಮುಖ್ಯಾಧಿಕಾರಿ ಶ್ರೀನಿವಾಸ್ ನೋಟಿಸ್ ಜಾರಿಗೊಳಿಸಿದ್ದಾರೆ. ಹೀಗಾಗಿ ವ್ಯಾಪಾರಿಗಳು ಒಂದು ವಾರ ಸಮಯಾವಕಾಶ ಕೇಳಿದ್ದಾರೆ.
ಪಟ್ಟಣದ ಹೃದಯ ಭಾಗದ ಅಂಗಡಿ ಮಳಿಗೆಗಳಿಂದ ಪುರಸಭೆಗೆ ಅತೀ ಕಡಿಮೆ ಬಾಡಿಗೆ ಸಂದಾಯವಾಗುತ್ತಿದ್ದು, 2009 ರಲ್ಲಿಯೇ ಪುರಸಭೆ ಮಳಿಗೆಗಳ ಬಾಡಿಗೆಕರಾರು ಮುಗಿದಿದ್ದರೂ ಮಳಿಗೆ ಹರಾಜು ನಡೆದಿಲ್ಲ. ಇನ್ನೂ 25 ವರ್ಷಗಳ ಹಿಂದಿನ ದರದಲ್ಲಿ ಬಾಡಿಗೆ ಸ್ವೀಕರಿಸುತ್ತಿರುವ ಪುರಸಭೆ,ಪ್ರತಿ ತಿಂಗಳು ಸುಮಾರು 2 ಲಕ್ಷ ನಷ್ಟ ಅನುಭವಿಸುತ್ತಿದೆ. ಮುಖ್ಯಾಧಿಕಾರಿ ಶ್ರೀನಿವಾಸ್, ಸರ್ವ ಸದಸ್ಯರು ಅಂಗಡಿಗಳನ್ನು ಖಾಲಿ ಮಾಡಿಸಿ ಪ್ರಸ್ತುತ ದರಕ್ಕೆ ಹರಾಜುಮಾಡಲು ತೀರ್ಮಾನಿಸಿದ್ದಾರೆ. ಯಾವ ವಿಘ್ನ ಬರದಿದ್ದರೆ ಸುಮಾರು 3-4 ಲಕ್ಷ ಪುರಸಭೆಗೆ ಆದಾಯ ಬರುವುದರಲ್ಲಿ ಅನುಮಾನವಿಲ್ಲ.
ವಾರ್ಷಿಕ 30 ಲಕ್ಷ ರೂ. ನಷ್ಟ: ಪುರಸಭೆಗೆ ಸಂಬಂಧಿಸಿದ 120 ಮಳಿಗೆಗಳಿದ್ದು ಇವುಗಳಲ್ಲಿ 29 ಮಳಿಗೆಗಳ ಹರಾಜಿಗೆ ಕೋರ್ಟ್‌ತಡೆಯಾಜ್ಞೆ ನೀಡಿದೆ. 60 ಮಳಿಗೆಗಳು ಹರಾಜಿಗೆ ಸಿದ್ಧವಾಗಿವೆ. ಉಳಿದ ಮಳಿಗೆಗಳ ಕಾಲಾವಧಿ ಇನ್ನೂ ಬಾಕಿ ಇದೆ. ಮಳಿಗೆಗಳಿಂದಕನಿಷ್ಠ 800 ರಿಂದ ಗರಿಷ್ಠ 2500 ಪುರಸಭೆಗೆ ಬಾಡಿಗೆ ಬರುತ್ತಿದೆ. ಪ್ರಸು§ತ ಇವುಗಳ ಬಾಡಿಗೆ ದರ ಹೆಚ್ಚಾಗಿದ್ದು ಇವುಗಳನ್ನು ಮರು ಹರಾಜು ಮಾಡಿದರೆ ಪುರಸಭೆ ಪ್ರತಿ ತಿಂಗಳು 2.5 ಲಕ್ಷದಿಂದ 3ಲಕ್ಷದವರೆಗೆ ಆದಾಯ ಬರುತ್ತದೆ. 2009ಕ್ಕೆ ಬಹುತೇಕ ಮಳಿಗೆಗಳ ಬಾಡಿಗೆ ಕರಾರು ಮುಗಿದು ಹೋಗಿದ್ದು, 2021 ಕಳೆಯುತ್ತಿದ್ದರೂ ಹರಾಜಿಗೆ ಮನಸ್ಸು ಮಾಡಿರಲಿಲ್ಲ. ಈಗಿನ ಮುಖ್ಯಾಧಿಕಾರಿ ಶ್ರೀನಿವಾಸ್, ಸದಸ್ಯರ ಬೆಂಬಲದೊಂದಿಗೆ ಹರಾಜು ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಕಾಲಾವಕಾಶ: ಕಾನೂನಾತ್ಮಕವಾಗಿ ಗಡುವು ಮುಗಿದಿರುವ ಅಂಗಡಿ ಮಳಿಗೆ ಖಾಲಿ ಮಾಡಲು ಮಾ.1ರವರೆಗೆ ಅಂಗಡಿ ಮಳಿಗೆ ವ್ಯಾಪಾರಿಗಳು ಸಮಯ ಕೇಳಿದ್ದಾರೆ.ಸೋಮವಾರ ಮಳಿಗೆ ಖಾಲಿ ಮಾಡದಿದ್ದರೆಪೊಲೀಸರ ಸಹಕಾರದೊಂದಿಗೆ ಖಾಲಿಮಾಡಿಸಲು ಮುಂದಾಗುತ್ತೇವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂಗಡಿ ಮಳಿಗೆಗಳನ್ನು ಹರಾಜು ಮಾಡಿದರೆ ಪುರಸಭೆ ಆದಾಯ ಹೆಚ್ಚುತ್ತದೆ. ಪಟ್ಟಣ ಅಭಿವೃದ್ಧಿಗೆ ಹಣವನ್ನು ಬಳಕೆ ಮಾಡಿಕೊಳ್ಳಬಹುದು,ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಮಳಿಗೆಹರಾಜಿಗೆ ಸಹಮತ ವ್ಯಕ್ತಪಡಿಸಿದ್ದಾರೆ. ವ್ಯಾಪಾರಿಗಳು ಸೋಮವಾರದವರೆಗೆ ಮಳಿಗೆ ಖಾಲಿ ಮಾಡಲು ಅವಕಾಶ ಕೇಳಿದ್ದಾರೆ.
– ಶ್ರೀನಿವಾಸ್, ಚಿಕ್ಕನಾಯಕನಹಳ್ಳಿ ಪುರಸಭೆ ಮುಖ್ಯಾಧಿಕಾರಿ
–ಚೇತನ್