Advertisement

ಪುರಸಭೆ ಹೈಟೆಕ್‌ ಕಟ್ಟಡ ಕಾಮಗಾರಿ ನನೆಗುದಿಗೆ

04:38 PM Nov 02, 2020 | Suhan S |

ಮಸ್ಕಿ: ಎರಡು ವರ್ಷದಿಂದಲೂ ಪ್ರಗತಿಯಲ್ಲಿರುವ ಇಲ್ಲಿನ ಪುರಸಭೆ ಹೈಟೆಕ್‌ ಕಟ್ಟಡ ಕಾಮಗಾರಿ ಕಾಲಾವಧಿ ಮತ್ತೂಂದು ವರ್ಷ ವಿಸ್ತರಿಸಲಾಗಿದೆ. ಆದರೆ ಈಗ ವಿಸ್ತರಣೆ ಅವಧಿಯೂ ಮುಗಿಯುತ್ತಿದ್ದರೂ ಕಟ್ಟಡ ಕಾಮಗಾರಿಗೆ ಮೋಕ್ಷ ಸಿಕ್ಕಿಲ್ಲ.

Advertisement

ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮ(ಲ್ಯಾಂಡ್‌ ಆರ್ಮಿ), ಪುರಸಭೆ ಹೈಟೆಕ್‌ ಕಟ್ಟಡ ನಿರ್ಮಾಣ ಜವಾಬ್ದಾರಿ ಹೊತ್ತಿದೆ. ಒಟ್ಟು2 ಕೋಟಿ ಮೊತ್ತದಲ್ಲಿ ಅತ್ಯಾಧುನಿಕ ಸುವ್ಯವಸ್ಥಿತ ಬಹುಮಹಡಿ ಕಟ್ಟಡ ನಿರ್ಮಿಸಿ ಪುರಸಭೆಗೆ ಹಸ್ತಾಂತರಿಸಬೇಕಿದೆ.

ಮೂರು ವರ್ಷದ ಹಿಂದೆಯೇ ಕಾಮಗಾರಿ ಗುತ್ತಿಗೆ ಒಪ್ಪಂದವಾಗಿದ್ದು, 2017 ಡಿಸೆಂಬರ್‌ ತಿಂಗಳಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಕಾಮಗಾರಿ ಆರಂಭದಿಂದ 24 ತಿಂಗಳಲ್ಲಿ ಕಟ್ಟಡ ಪೂರ್ಣಗೊಳಿಸಿ ಬಳಕೆಗೆ ಅರ್ಪಿಸಬೇಕಿತ್ತು. ಆದರೆ ಇದುವರೆಗೂ ಕಾಮಗಾರಿ ಮುಗಿದಿಲ್ಲ.

ತಿಕ್ಕಾಟ: ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿದ ಬಳಿಕ ಮಸ್ಕಿ ಪಟ್ಟಣ ಪ್ರತ್ಯೇಕ ತಾಲೂಕು ಕೇಂದ್ರವಾಗಿಯೂ ಘೋಷಣೆಯಾಗಿದೆ. ಹೀಗಾಗಿ ಗ್ರಾಪಂ ಇದ್ದಾಗಿನಿಂದಲೂ ಬಳಕೆಯಿಲ್ಲದ ಕಟ್ಟಡವನ್ನು ಪುರಸಭೆಗೆ ಬಳಸಿಕೊಳ್ಳಲಾಗಿತ್ತು. ಆದರೆ ಇದು ಚಿಕ್ಕ ಮೊತ್ತ ಹೆಚ್ಚು ಅನುಕೂಲವಿಲ್ಲದ ಕಾರಣಕ್ಕೆ ಹಳೆಯ ಕಟ್ಟಡವನ್ನು ತೆರವು ಮಾಡಿ ಹೈಟೆಕ್‌ ಆಗಿ ಹೊಸ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.

ಆದರೆ ಕಾಮಗಾರಿ ನಿಗದಿತ ಕಾಲಮಿತಿಯಲ್ಲ ಪೂರ್ಣಗೊಳ್ಳದೇ ನಿಧಾನಗತಿಯಲ್ಲಿ ಸಾಗಿರುವುದು ವಿಪರ್ಯಾಸ. ಕಾಮಗಾರಿ ಇಷ್ಟೊಂದು ವಿಳಂಬಕ್ಕೆ ಕಾರಣ ಕೆದಕುತ್ತಾ ಹೋದರೆ, ಗುತ್ತಿಗೆ ಏಜೆನ್ಸಿ ಮತ್ತು ಉಪಗುತ್ತಿಗೆದಾರರ ನಡುವಿನ ತಿಕ್ಕಾಟದಿಂದಲೇ ಕಾಮಗಾರಿ ವಿಳಂಬವಾಗಿದೆ ಎನ್ನುವ ಅಂಶ ಬಹಿರಂಗವಾಗಿದೆ. ಗುತ್ತಿಗೆ ಏಜೆನ್ಸಿ, ಗುತ್ತಿಗೆದಾರರ ನಡುವಿನ ಹಗ್ಗ-ಜಗ್ಗಾಟದಿಂದ ಪುರಸಭೆ ಹೈಟೆಕ್‌ ಕಟ್ಟಡ ಕಾಮಗಾರಿ ನನೆಗುದಿಗೆ ಬಿದ್ದಿರುವುದು ದುರಂತ.

Advertisement

ಇನ್ನೆಷ್ಟು ವಿಳಂಬ?: ಪುರಸಭೆ ಕಟ್ಟಡಕ್ಕೆ ಸಂಬಂಧಸಿದಂತೆ ಈಗಾಗಲೇ ಶೇ.70ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಕೆಳಮಹಡಿ, ಪಾರ್ಕಿಂಗ್‌ ವ್ಯವಸ್ಥೆ, ಮೊದಲ ಮಹಡಿ ಕಟ್ಟಡ ಪೂರ್ಣಗೊಂಡಿದೆ. ಆದರೆ ಪ್ಲಾಸ್ಟರಿಂಗ್‌, ಕಿಟಕಿ, ಬಾಗಿಲು ಅಳವಡಿಕೆ ಬಾಕಿ ಇದೆ. ಈಗಾಗಲೇ ಮುಕ್ತಾಯಗೊಂಡ ಕಾಮಗಾರಿಗೆ 1.55 ಕೋಟಿ ರೂ. ಬಿಲ್‌ ಪಾವತಿ ಮಾಡಲಾಗಿದೆ. ಆದರೆ ಉಳಿದ ಕಾಮಗಾರಿ ಇದುವರೆಗೂ ಪೂರ್ಣಗೊಂಡಿಲ್ಲ. ಶೇ.70ರಷ್ಟು ಕಾಮಗಾರಿ ಮುಕ್ತಾಯಕ್ಕೆ ಮೂರು ವರ್ಷ ಕಳೆಯುತ್ತಿದೆ. ಇನ್ನು ಬಾಕಿ ಉಳಿದ ಕಾಮಗಾರಿ ಮುಕ್ತಾಯಕ್ಕೆ ಇನ್ನೆಷ್ಟು ದಿನ ಬೇಕು? ಎನ್ನುವ ಪ್ರಶ್ನೆ ಕಾಡುತ್ತಿವೆ.

ಎರಡು ಬಾರಿ ನೋಟಿಸ್‌ : ಕಾಮಗಾರಿ ಅವಧಿ ವಿಸ್ತರಿಸಿದರೂ ಇನ್ನು ಹೈಟೆಕ್‌ ಕಟ್ಟಡ ಕಾಮಗಾರಿ ಪೂರ್ಣಗೊಂಡಿಲ್ಲ. ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಿ ಎಂದು ಇಲ್ಲಿನ ಪುರಸಭೆ ಮುಖ್ಯಾಧಿಕಾರಿಗಳು ಪ್ರತ್ಯೇಕ ಎರಡು ಬಾರಿ ನೋಟಿಸ್‌ ಜಾರಿ ಮಾಡಿದ್ದಾರೆ. ಮಾರ್ಚ್‌ 2021ರೊಳಗೆ ಕಾಮಗಾರಿ ಪೂರ್ಣಗೊಳಿಸಲು ಡೆಡ್‌ ಲೈನ್‌ ನೀಡಲಾಗಿದೆ.

ಪುರಸಭೆ ಕಟ್ಟಡ ಕಾಮಗಾರಿ ವಿಳಂಬದ ಬಗ್ಗೆ ನಮಗೂ ಬೇಸರವಿದೆ. ಗುತ್ತಿಗೆ ಏಜೆನ್ಸಿ ವಹಿಸಿಕೊಂಡವರಿಗೆ ಈಗಾಗಲೇ ನೋಟಿಸ್‌ ನೀಡಿದ್ದೇವೆ. ಶೀಘ್ರ ಕಾಮಗಾರಿ ಮುಗಿಸಿ ಇಲ್ಲವೇ ದಂಡ ಹಾಕಿ ಬೇರೆ ಏಜೆನ್ಸಿಗೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.  –ರೆಡ್ಡಿ ರಾಯನಗೌಡ, ಮುಖ್ಯಾಧಿಕಾರಿ.

 

-ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next