Advertisement

ನಗರಸಭೆ ಬಜೆಟ್‌ಗೆ ಪೂರ್ವಭಾವಿ ಸಭೆ : ಬೆರಳೆಣಿಕೆ ಮಂದಿ ಸಾರ್ವಜನಿಕರಿಂದಷ್ಟೇ ಸಲಹೆ-ಸೂಚನೆ

12:18 AM Feb 16, 2021 | Team Udayavani |

ಉಡುಪಿ: ಉಡುಪಿ ನಗರಸಭೆಯ 2021-22ನೇ ಸಾಲಿನ ಬಜೆಟ್‌ ತಯಾರಿಯ ಬಗ್ಗೆ ನಗರಸಭಾ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಆವಶ್ಯಕ ಅಭಿವೃದ್ಧಿ ಕೆಲಸ ಕಾರ್ಯಗಳ ವಿಚಾರ ವಿನಿಮಯಗಳ ಕುರಿತು ನಗರಸಭೆಯ ಸತ್ಯಮೂರ್ತಿ ಸಭಾಭವನದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಾರ್ವಜನಿಕ ಸಮಾಲೋಚನ ಸಭೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಕೇವಲ ಬೆರಳೆಣಿಕೆಯಷ್ಟೇ ಸಾರ್ವಜನಿಕರು ಭಾಗವಹಿಸಿ ಸಲಹೆ, ಮಾಹಿತಿಯನ್ನು ನೀಡಿದರು.

Advertisement

ನಗರಸಭೆಯ ಮಾಜಿ ನಾಮನಿರ್ದೇಶಿತ ಸದಸ್ಯ ಶ್ರೀನಿವಾಸ ಶೆಟ್ಟಿ ತೋನ್ಸೆ ಮಾತನಾಡಿ, ನಗರಸಭೆಯು ಆಸ್ತಿ, ರಸ್ತೆಗಳು, ಜನರಿಗೆ ಮೂಲಸೌಕರ್ಯ ಒದಗಿಸುವ ಬಗ್ಗೆ ಚಿಂತನೆ ನಡೆಸಬೇಕು. ಬನ್ನಂಜೆಯ ಕೆಎಸ್ಸಾರ್ಟಿಸಿ ಬಳಿಯ ರಸ್ತೆಯನ್ನು ದ್ವಿಪಥ ಮಾಡಬೇಕು. ಸ್ಥಳೀಯ ಸಂಸ್ಥೆಗಳು ಸಾರ್ವಜನಿಕರ ಸೊತ್ತುಗಳನ್ನು ರಕ್ಷಣೆ ಮಾಡಲು ಕ್ರಮ ತೆಗೆದುಕೊಳ್ಳಬೇಕು. ಮುಂಗಡ ಪತ್ರದಲ್ಲಿ ಇದನ್ನು ನಮೂದಿಸಬೇಕು ಎಂದರು. ಬಿಎಸ್‌ಎನ್‌ಎಲ್‌ ನಿಗಮದ ಗ್ರಾಹಕ ಸಂಚಾರ ಕೇಂದ್ರದ ಬಳಿ ಅವ್ಯವಸ್ಥೆಯಿದೆ. ಪಾರ್ಕಿಂಗ್‌ ಸಮಸ್ಯೆಯೂ ಇದೆ. ಇದನ್ನು ನಿವಾರಿಸಬೇಕು. ಅನಾಥ ಶವಗಳು, ಪ್ರಾಣಿಗಳು ಸಾವನ್ನಪ್ಪಿದಾಗ ಅದರ ವಿಲೇವಾರಿಗೆ ನಗರಸಭೆ ಗಮನಹರಿಸಬೇಕು. ಅಥವಾ ಇದನ್ನು ವಿಲೇವಾರಿ ಮಾಡುವ ಸಮಾಜಸೇವಕರಿಗೆ ಸೂಕ್ತ ರೀತಿಯ ಪ್ರೋತ್ಸಾಹಧನ ವಿತರಿಸಬೇಕು. ಕಾಲುದಾರಿ ಅಸಮರ್ಪಕವಾಗಿರುವ ಕಡೆ ನಗರಸಭೆ ವತಿಯಿಂದ ಎಚ್ಚರಿಕೆ ಫ‌ಲಕ ಅಳವಡಿಸಲು ಕ್ರಮ ತೆಗೆದುಕೊಳ್ಳಬೇಕು ಎಂದರು.

ತಡೆಬೇಲಿ ನಿರ್ಮಿಸಲು ಕ್ರಮ ಕೈಗೊಳ್ಳಿ
ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಕಾಡುಗಳು ಬೆಳೆದಿವೆ. ಇಲ್ಲಿ ಹಲವು ಪ್ರಭೇದದ ಪ್ರಾಣಿಗಳು ವಾಸವಾಗಿದ್ದು, ಸ್ಥಳೀಯ ಮನೆಗಳಿಗೆ ಬರುತ್ತಿವೆ. ಕಾಡುಪ್ರಾಣಿಗಳು ಬಾರದಂತೆ ಸೂಕ್ತ ರೀತಿಯಲ್ಲಿ ತಡೆಗೋಡೆ ನಿರ್ಮಿಸಬೇಕು ಎಂದು ಶ್ರೀಕೃಷ್ಣ ರಾವ್‌ ಕೊಡಂಚ ಹೇಳಿದರು. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್‌. ನಾಯಕ್‌ ತಿಳಿಸಿದರು.

ಮಲ್ಟಿ ಲೆವೆಲ್‌ ಪಾರ್ಕಿಂಗ್‌ ನಿರ್ಮಿಸಿ
ಶ್ರೀಕೃಷ್ಣ ರಾವ್‌ ಕೊಡಂಚ ಮಾತನಾಡಿ, ವಿಶ್ವೇಶ್ವರಯ್ಯ ಮಾರುಕಟ್ಟೆಯಲ್ಲಿ ಪಾರ್ಕಿಂಗ್‌ ಸಮಸ್ಯೆ ಇದೆ. ಇಲ್ಲಿ ಮಲ್ಟಿ ಲೆವೆಲ್‌ ಪಾರ್ಕಿಂಗ್‌ ಅಥವಾ ವಾಣಿಜ್ಯ ಸಂಕೀìಣಗಳನ್ನು ನಿರ್ಮಿಸಿ ಕೆಳಭಾಗದಲ್ಲಿ 150ರಿಂದ 200 ವಾಹನಗಳ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಬೇಕು. ಇದರಿಂದ ನಗರಸಭೆಗೆ ಆದಾಯವೂ ಲಭಿಸುತ್ತದೆ. ಪಾರ್ಕಿಂಗ್‌ ಸಮಸ್ಯೆಯೂ ನಿವಾರಣೆಯಾಗುತ್ತದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಅಧ್ಯಕ್ಷರು, ಪಾರ್ಕಿಂಗ್‌ ಸಮಸ್ಯೆ ನಿವಾರಿಸಲು ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಈ ಹಿಂದೆಯೇ ಯೋಜನೆ ರೂಪಿಸ ಲಾಗಿತ್ತು. ಈಗ ಇರುವ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದ ಪ್ರದೇಶದಲ್ಲಿಯೂ ಪಾರ್ಕಿಂಗ್‌ಗೆ ಸ್ಥಳಾವಕಾಶ ಕಲ್ಪಿಸುವ ಬಗ್ಗೆ ಯೋಚನೆಗಳಿವೆ ಎಂದರು.

ಸ್ಥಾಯೀ ಸಮಿತಿ ಅಧ್ಯಕ್ಷ ಗಿರೀಶ್‌ ಅಂಚನ್‌, ಪೌರಾಯುಕ್ತ ಉದಯ ಶೆಟ್ಟಿ, ನಗರಸಭೆಯ ಕಾರ್ಯಪಾಲಕ ಅಭಿಯಂತ ಮೋಹನ್‌ರಾಜ್‌ ಉಪಸ್ಥಿತರಿದ್ದರು.

Advertisement

ಮಾರ್ಚ್‌ನಲ್ಲಿ ಬಜೆಟ್‌
ಅಧ್ಯ ಕ್ಷೆ ಸುಮಿತ್ರಾ ಆರ್‌. ನಾಯಕ್‌ ಮಾತನಾಡಿ, ಮಾರ್ಚ್‌ ತಿಂಗಳಿನಲ್ಲಿ ಬಜೆಟ್‌ ಮಂಡನೆ ಆಗಲಿದೆ. ರಸ್ತೆ ವಿಸ್ತರಣೆ ಸಹಿತ ಹಲವಾರು ಯೋಜನೆಗಳಿವೆ. ಪಾರ್ಕಿಂಗ್‌ ಸಮಸ್ಯೆ ಇತ್ಯರ್ಥ, ಕಮರ್ಶಿಯಲ್‌ ಕಾಂಪ್ಲೆಕ್ಸ್‌, ಚರಂಡಿ ನಿರ್ಮಾಣ, ಪಾದಚಾರಿಗಳಿಗೆ ಅನುಕೂಲ ಕಲ್ಪಿಸಲು ಆದ್ಯತೆ ನೀಡಲಾಗು ವುದು. ಬೀಡಿನಗುಡ್ಡೆ, ಮಲ್ಪೆಯಲ್ಲಿ ಈಗಾಗಲೇ ಶ್ಮಶಾನವಿದ್ದು, ಇಂದ್ರಾಳಿಯ ಶ್ಮಶಾನ ಪಾಳುಬಿದ್ದಿದೆ. ಈ ಬಾರಿಯ ಬಜೆಟ್‌ನಲ್ಲಿ ಇದರ ದುರಸ್ತಿಗೆ ಕ್ರಮ ತೆಗೆದುಕೊಳ್ಳಲಾಗುವುದು. ಸುಸಜ್ಜಿತ ಜಿಲ್ಲಾಸ್ಪತ್ರೆ ನಿರ್ಮಾಣ ವಾದ ಬಳಿಕ ಸೂಕ್ತ ಬಸ್‌ ತಂಗುದಾಣ ನಿರ್ಮಿಸುವ ಬಗ್ಗೆಯೂ ಚಿಂತಿಸಲಾಗುವುದು.

ಸಾರ್ವಜನಿಕ ಶೌಚಾಲಯಗಳ ವಿರುದ್ಧ ಹಲವಾರು ದೂರುಗಳು ಬರುತ್ತಿದ್ದು, ಇದರ ನಿರ್ವಹಣೆಗೂ ಸೂಕ್ತ ಕ್ರಮ ತೆಗೆದುಕೊಳ್ಳ ಲಾಗುವುದು. ಯಾವುದೇ ರೀತಿಯಲ್ಲಿ ತೆರಿಗೆ ಏರಿಕೆ ಮಾಡದೆ ಉತ್ತಮ ಬಜೆಟ್‌ಗೆ ಆದ್ಯತೆ ನೀಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next