Advertisement

ನಗರಸಭೆ ಮಳಿಗೆ ಹರಾಜಿನಿಂದ 1.41ಕೋಟಿ ಆದಾಯ : 20 ವರ್ಷಗಳ ಬಳಿಕ ಹರಾಜಾದ ಮಳಿಗೆಗಳು

10:16 PM Feb 25, 2022 | Team Udayavani |

ಹುಣಸೂರು : ಹುಣಸೂರು ನಗರಸಭೆ ಸಭಾಂಗಣದಲ್ಲಿ ಕಳೆದ ಎರಡು ದಿನಗಳ ಕಾಲ ನಡೆದ ಹರಾಜಿನಲ್ಲಿ 103 ಮಳಿಗೆಗಳ ಪೈಕಿ 100 ವಾಣಿಜ್ಯ ಮಳಿಗೆಗಳ ಹರಾಜು ನಡೆದಿದ್ದು, ಮೂರು ಮಳಿಗೆಗಳಿಗೆ ಬಿಡ್‍ದಾರರು ಆಸಕ್ತಿ ತೋರದ ಕಾರಣ ಹರಾಜಾಗಲಿಲ್ಲ. ಆದರೂ ಇದೀಗ ನಗರಸಭೆಗೆ ವಾಣಿಜ್ಯ ಮಳಿಗೆಗಳ ಹರಾಜಿನಿಂದ ವಾರ್ಷಿಕ 1.41ಕೋಟಿರೂಗಳ ಆದಾಯ ಬರುವಂತಾಗಿದೆ.

Advertisement

20 ವರ್ಷಗಳ ಹಿಂದೆ ನಡೆದಿದ್ದ ಹರಾಜಿನಂತೆ ನಗರಸಭೆಗೆ ವಾರ್ಷಿಕ 11.72 ಲಕ್ಷರೂ ಬಾಡಿಗೆ ನಿಗದಿ ಗಿಳಿಸಿದ್ದರೂ ಕೆಲವರು ಮತ್ತೊಬ್ಬರಿಗೆ ಗುತ್ತಿಗೆ ನೀಡಿ ದುಪ್ಪಟ್ಟು ಆದಾಯಗಳಿಸುತ್ತಿದ್ದರೆ, ಇನ್ನೂ ಕೆಲವರು 4-5 ಮಳಿಗೆಗಳನ್ನು ಹಿಡಿದುಕೊಂಡು ಹೆಚ್ಚಿನ ಆದಾಯದ ಮಾರ್ಗಕಂಡು ಕೊಂಡಿದ್ದರು.

ಆಗಾಗ್ಗೆ ಚರ್ಚೆ: ಈ ಬಗ್ಗೆ ಕಳೆದ 6-7 ವರ್ಷಗಳಿಂದ ಸಾಮಾನ್ಯ ಸಭೆಗಳಲ್ಲಿ ಚರ್ಚೆಯೂ ನಡೆಯುತ್ತಿತ್ತು. ನಂತರದಲ್ಲಿ ಮರೆತು ಬಿಡುತ್ತಿದ್ದರು. ಆದರೆ ಮಳಿಗೆಗಳು ಹರಾಜಾಗಿ 20-22 ವರ್ಷ ಪೂರೈಸಿದ್ದ ಕಾರಣ ಹಾಗೂ ಸುಲಭವಾಗಿ ಮಳಿಗೆಗಳನ್ನು ವಶಕ್ಕೆ ಪಡೆಯಲು ನಗರಸಭೆಯವರು ಹರಸಾಹಸ ಪಡಬೇಕಿತ್ತು. ಹೀಗಾಗಿ ಹರಾಜಿಗಾಗಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರು, ಜಿಲ್ಲಾಧಿಕಾರಿಗಳ ಅನುಮೋದನೆ ದೊರೆತು ಹರಾಜು ಹಾಕಲಾಗಿದೆ.

ಹೈಕೋರ್ಟ್ ಮೆಟ್ಟಿಲೇರಿದ್ದ ಬಾಡಿಗೆದಾರರು:
ಮುಂದಾದರೂ ಸಂತೆ ಮಾಳದ ಬಾಡಿಗೆದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು, ಕೊನೆಗಳಿಗೆಯಲ್ಲಿ ನ್ಯಾಯಾಲಕ್ಕೆ ಅರ್ಜಿಸಲ್ಲಿಸಿರುವ ಬಗ್ಗೆ ಬಾಡಿಗೆ ದಾರರಿಗೆ ಮನವರಿಕೆ ಮಾಡಿಕೊಟ್ಟು ಹೈಕೋರ್ಟ್ ಸಹ ಬಿಡ್ ಆದ ಮೊತ್ತಕ್ಕೆ ಶೇ.5ರಷ್ಟು ಹೆಚ್ಚಿನ ಬಾಡಿಗೆ ನೀಡುವುದಾದರೆ ಪಡೆದುಕೊಳ್ಳಲು ಅವಕಾಶ ನೀಡಿ ಬಿಡ್‍ನಲ್ಲಿ ಭಾಗವಹಿಸುವಂತೆ ಆದೇಶಿಸಿತ್ತು. ಪ್ರಸ್ತುತ ಹರಾಜಿನಿಂದಾಗಿ 1.41 ಕೋಟಿರೂ ದಾಖಲೆ ಪ್ರಮಾಣದ ಬಾಡಿಗೆ ಬರುವಂತಾಗಿದೆ.

ಇದನ್ನೂ ಓದಿ : ಕನ್ನಡಿಗರ ವಾಪಸ್‌ ಕರೆತರಲು ಸಹಾಯಕ್ಕೆ ರಾಜೀವ್‌ ಚಂದ್ರಶೇಖರ್‌ ಮನವಿ

Advertisement

21 ಮಳಿಗೆ ಹರಾಜು ಬಾಕಿ ಇದೆ:
ಈ ಹಿಂದೆ ಮಳಿಗೆ ಪಡೆದ ಹಲವಾರು ಮಂದಿ ಕಡಿಮೆ ಪ್ರಮಾಣದ ಬಾಡಿಗೆಯನ್ನೂ ಪಾವತಿಸದೆ ಇದ್ದರೆ, ಜೆಎಲ್‍ಬಿ ರಸ್ತೆಯ 21 ಮಳಿಗೆದಾರರಲ್ಲಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಹರಾಜು ನಡೆಸಲಾಗಿಲ್ಲವೆಂದು ತಿಳಿಸಿರುವ ಅಧ್ಯಕ್ಷರು ಆದಾಯದಿಂದ ನಗರದ ಅಭಿವೃದ್ದಿಗೆ ನೆರವಾಗಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹರಾಜಿನಲ್ಲಿ ಏರಿಳಿತ, ಒಳ ಒಪ್ಪಂದದ ಸುಳಿವು:
ಸಂತೆ ಮೈದಾನದ 37ವಾಣಿಜ್ಯ ಮಳಿಗೆಗಳ ಪೈಕಿ ಕೆಲವು ಮಳಿಗೆಗಳು 18,300 ರಿಂದ 6,200ರೂ, ಅತೀ ಕಡಿಮೆ ಅಂದರೆ 1100ರೂ ಹರಾಜಾದರೆ, ಇನ್ನು ಎಚ್.ಡಿ.ಕೋಟೆ ವೃತ್ತದ ಒಂದೇ ವಾಣಿಜ್ಯ ಮಳಿಗೆಯ ಬಿಲ್ಡಿಂಗ್‍ನಲ್ಲಿನ 7ಮಳಿಗೆಗಳ ಪೈಕಿ 1,11 ಲಕ್ಷದಿಂದ 8,500ರೂಗಳ ತನಕ ಹಾಗೂ ಬಜಾರ್ ರಸ್ತೆಯ 9 ಮಳಿಗೆಗಳ ಪೈಕಿ 1 ಲಕ್ಷ ರೂ ನಿಂದ ಕ್ರಮವಾಗಿ 96 ಸಾವಿರ, 46 ಸಾವಿರದಿಂದ 5,600ರೂ ವರೆಗೆ ಮತ್ತು ಸಂತೆ ಮೈದಾನದ 50 ತರಕಾರಿ ವಾಣಿಜ್ಯ ಮಳಿಗೆಗಳ ಹರಾಜಿನಲ್ಲಿ ದೊಡ್ಡ ಪ್ರಮಾಣದಲ್ಲಿ ಏರಿಳಿತ ಕಂಡು ಬಂದಿದ್ದು. 50ನೇ ಮಳಿಗೆ 45,300ರೂ, 24ನೇ ಮಳಿಗೆ 31,100ರೂ ಮೊದಲನೇ ಮಳಿಗೆ 26,100ರೂಗೂ 8ನೇ ಮಳಿಗೆ 28,100, 9ನೇ ಮಳಿಗೆ 19,600ರೂಗೂ 23 ನೇ ಮಳಿಗೆ 10 ಸಾವಿರಕ್ಕೆ ಹರಾಜಾಗಿದ್ದರೆ, ಈ ಪೈಕಿ ಕೇವಲ ಒಂದು ಸಾವಿರ ರೂಗೆ 9 ಮಳಿಗೆಗಳು ಹಾಗೂ ಉಳಿದವು ಸಾವಿರದಿಂದ 4 ಸಾವಿರ ರೂಗಳವರೆಗೆ ಹರಾಜಿನಲ್ಲಿ ಪಡೆದುಕೊಂಡಿರುವುದು ಪ್ರಭಾವಿ ಮಳಿಗೆಗಳು ಕೇವಲ ಒಂದು ಸಾವಿರಕ್ಕೆ ಹರಾಜಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚಾಗ್ರಾಸವಾಗಿದ್ದು, ಒಳ ಒಪ್ಪಂದದ ಸುಳಿವು ಕಂಡುಬರುತ್ತಿದೆ.

ಆದಾಯವೂ ಬಂದಿದೆ, ನಷ್ಟವೂ ಆಗಿದೆ:
ಪ್ರಮುಖ ವಾಣಿಜ್ಯ ಪ್ರದೇಶದಲ್ಲಿರುವ ಮಳಿಗೆಗಳಿಗೆ ಸರಕಾರದ ಅವೈಜ್ಞಾನಿಕ ನೀತಿಯಿಂದಾಗಿ ಕನಿಷ್ಟ 305ರೂನಿಂದ ಆರಂಭಗೊಂಡು ಗರಿಷ್ಟ 1,165ರೂಗಳಿಗೆ ನಿಗದಿಗೊಳಿಸಿದ್ದರೆ, ಎಚ್.ಡಿ.ಕೋಟೆ ಸರ್ಕಲ್ ಬಳಿಯ 7 ಮಳಿಗೆಗಳಿಗೆ ತಲಾ ಕೇವಲ 700ರೂ ಮಾಸಿಕ ಬಾಡಿಗೆ ನಿಗದಿಪಡಿಸಿದ್ದು, ಮೊದಲ ಮಳಿಗೆಯೇ 1.11 ಲಕ್ಷ, ಉಳಿದ ಮಳಿಗೆಗಳು ಸಹ ಹೆಚ್ಚಿನ ಬಿಡ್‍ಗೆ ಹರಾಜಾಗಿವೆ. ಇದೇರೀತಿ ಬಜಾರ್ ರಸ್ತೆಯ ಮಳಿಗೆಗಳಿಗೆ 2,400ರೂ ನಿಗದಿತ ಮಳಿಗೆಗೆ ಹೆಚ್ಚೆಂದರೆ 1 ಲಕ್ಷರೂಗೆ ಬಿಡ್ ಆಗಿದ್ದರೆ, ಸಂತೆ ಮೈದಾನದ ತರಕಾರಿ ಮಾರಾಟ ಮಳಿಗೆಗಳು 250ರೂನಿಂದ ಗರಿಷ್ಟ 350ರೂ ಬಾಡಿಗೆ ನಿಗದಿ ಪಡಿಸಿದ್ದು, ಹೆಚ್ಚೆಂದರೆ 28,100ರೂಗಳಿಗೆ ಹರಾಜಾಗಿವೆ. ಇದರಿಂದ 20 ವರ್ಷಕಾಲ ನಗರಸಭೆಗೆ ಆದಾಯ ಹಾಗೂ ಕಳೆದೆರಡು ವರ್ಷಗಳಿಂದ ಸರಕಾರಕ್ಕೆ ಲಕ್ಷಾಂತರರೂ ಜಿಎಸ್‍ಟಿ ತೆರಿಗೆ ನಷ್ಟವಾಗಿದೆ.

ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ, ಜಿಲ್ಲಾಧಿಕಾರಿ ಅನುಮೋದನೆ ಅವಶ್ಯ:
ಇದೀಗ ನಡೆದಿರುವ ಹರಾಜು ಪ್ರಕ್ರಿಯೆಗೆ ಹಾಗೂ ಕಡಿಮೆ ಬಿಡ್ ಆಗಿರುವ ವಾಣಿಜ್ಯ ಮಳಿಗೆಗಳ ಬಗ್ಗೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆದ ನಂತರ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ, ಒಪ್ಪಿಗೆ ಸಿಕ್ಕ ನಂತರವಷ್ಟೆ ಬಿಡ್‍ದಾರರಿಂದ ಮೂರು ತಿಂಗಳ ಬಾಡಿಗೆ ಮುಂಗಡ ಪಡೆದು ಗುತ್ತಿಗೆ ಕರಾರು ಮಾಡಿಕೊಡಬೇಕಿದೆ.
– ಪ್ರಭಾರ ಪೌರಾಯುಕ್ತೆ ರೂಪಾ.

ಒಟ್ಟಾರೆ 100 ಮಳಿಗೆಗಳ ಹರಾಜಾಗಿದ್ದು. 1.41 ಕೋಟಿರೂ ಬಾಡಿಗೆ ಬರಲಿದ್ದು, ನಗರಸಭೆಗೆ ಸಾಕಷ್ಟು ಆದಾಯ ಬರಲಿದ್ದು. ಅಭಿವೃದ್ದಿಗೂ ನೆರವಾಗಲಿದೆ.
– ಸೌರಭಸಿದ್ದರಾಜು, ನಗರಸಭೆ ಅಧ್ಯಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next