ಚಾಮರಾಜನಗರ: ಮೈಸೂರು ಮಹಾರಾಜರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಸುದೀರ್ಘ ಆಳ್ವಿಕೆ ನಡೆಸಿ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸಿದ ಶ್ರೇಷ್ಠರು ಎಂದು ಲೇಖಕ, ವೈದ್ಯ ಡಾ. ಗುರುಕಿರಣ್ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಗರದಲ್ಲಿ ಏರ್ಪಡಿಸಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸುಗಮ ಸಂಚಾರಕ್ಕೆ ಅವಕಾಶ: ಸಂಸ್ಥಾನದಲ್ಲಿ ಸಾರ್ವಜನಿಕ ಪ್ರಾಥಮಿಕ ವೈದ್ಯಕೀಯ ಸೇವೆಯನ್ನು ಸ್ಥಾಪನೆ ಮಾಡುವ ಮೂಲಕ ಮೊಟ್ಟಮೊದಲಿಗೆ ಆಧುನಿಕ ವೈದ್ಯ ಪದ್ಧತಿ ನೀಡಿದರು. ಕಾವೇರಿ ನದಿಗೆ ಶಿವನಸಮುದ್ರದ ಬಳಿ ಸೇತುವೆ ನಿರ್ಮಾಣ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿದವರು. ಒಡೆಯರ ಕಾಲದಲ್ಲಿ ಮೈಸೂರು ಸಂಸ್ಥಾನ ವಿಶ್ವವಿಖ್ಯಾತಿ ಹೊಂದಿತುಡ ಸಾಹಿತ್ಯ ಪರಿಷತ್ತು ಅವರನ್ನು ನೆನೆಯುವ ಮೂಲಕ ಉತ್ತಮ ಕಾರ್ಯವನ್ನು ಮಾಡಿದೆ ಎಂದು ತಿಳಿಸಿದರು.
59 ಗ್ರಂಥಗಳ ರಚನೆ ಮಾಡಿದ್ರು: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಮ್ಮಡಿ ಕೃಷ್ಣರಾಜ ಒಡೆಯರ್ ಆಡಳಿತಗಾರರು. ಅಷ್ಟೇ ಅಲ್ಲದೆ ಕವಿಗಳು. ಕನ್ನಡ ಮತ್ತು ಸಂಸ್ಕೃತದ ವಿದ್ವಾಂಸರಾಗಿ 59 ಗ್ರಂಥಗಳ ರಚನೆ ಮಾಡಿ ದೇಶ ವಿದೇಶಗಳ ಕಲಾವಿದರನ್ನು ಮೈಸೂರು ಸಂಸ್ಥಾನಕ್ಕೆ ಆಹ್ವಾನಿಸಿ ದರ್ಬಾರ್ ಹಾಲಿನಲ್ಲಿ ಸಂಗೀತ ಕಚೇರಿಗಳನ್ನು ಏರ್ಪಡಿಸುವ ಮೂಲಕ ಕಲೆ, ಸಾಹಿತ್ಯ ಸಂಗೀತಕ್ಕೆ ಅಪಾರ ಕೊಡುಗೆ ನೀಡಿದವರು.
ವೀಣೆ ವೆಂಕಟ ಸುಬ್ಬಯ್ಯ,ಕುಣಿಗಲ್ ರಾಮಾ ಶಾಸ್ತ್ರಿ, ಸೋಸಲೆ ಗರಳ ಪುರಿ ಶಾಸ್ತ್ರಿ, ಬಸವಪ್ಪ ಶಾಸ್ತ್ರಿ ,ಕೆಂಪುನಾರಾಯಣ ಮುಂತಾದ ಶ್ರೇಷ್ಠ ವಿದ್ವಾಂಸರಿಗೆ ಆಶ್ರಯ ನೀಡಿದವರು . ಸಂಗೀತಗಾರರು ,ಲೇಖಕರು ಕಲಾಕಾರರು, ಸಾಹಿತಿಗಳು, ವೇದ ವಿದ್ವಾಂಸರು, ಆಡಳಿತಗಾರರು, ಸರ್ವ ಜನರಿಗೆ ಆಶ್ರಯ ನೀಡಿದ ಕೃಷ್ಣರಾಜ ಒಡೆಯರ್ ಅವರನ್ನು ನೆನೆಸಿಕೊಳ್ಳುವುದೇ ಒಂದು ಪುಣ್ಯದ ಕೆಲಸವೆಂದು ತಿಳಿಸಿದರು.
ಆಹಾರ ಕ್ರಾಂತಿ ಮಾಡಿದವರು ಮುಮ್ಮಡಿ: ಕನ್ನಡ ಮಹಾಸಭಾ ಅಧ್ಯಕ್ಷ ಚಾರಂ ಶ್ರೀನಿವಾಸ್ ಗೌಡ ಮಾತನಾಡಿ ಅರಿ ಕೊಠಾರಕ್ಕೆ ಚಾಮರಾಜನಗರದ ಹೆಸರನ್ನು ಇಟ್ಟವರು ಮುಮ್ಮಡಿ ಕೃಷ್ಣರಾಜ ಒಡೆಯರ್. ತಮ್ಮ ಆಳ್ವಿಕೆಯ ಸಂದರ್ಭದಲ್ಲಿ ಮೈಸೂರು ,ಮಂಡ್ಯ, ಚಾಮರಾಜನಗರ ಸುತ್ತಮುತ್ತಲಿನ ಭಾಗಗಳಿಗೆ ನೀರಾವರಿ ಮೂಲಕ ಕೃಷಿ ಭೂಮಿಯನ್ನಾಗಿ ಪರಿವರ್ತಿಸಿ ಆಹಾರ ಕ್ರಾಂತಿ ಮಾಡಿದವರು ಮುಮ್ಮಡಿ ಕೃಷ್ಣರಾಜ ಒಡೆಯರ್ ಎಂದರು.
ಕಾರ್ಯಕ್ರಮದಲ್ಲಿ ವಕೀಲೆ ಎಂಪಿ ನಾಗಲಕ್ಷ್ಮೀ, ಪ್ರಫುಲ್ಲ ಗುರುಕಿರಣ್ ಕಸಾಪ ಕೋಶಾಧ್ಯಕ್ಷ ಮಹದೇವಪ್ಪ, ನಿರ್ದೇಶಕರಾದ ಬಿಕೆ ಆರಾಧ್ಯ ,ರವಿಚಂದ್ರ ಪ್ರಸಾದ್, ಸರಸ್ವತಿ, ಕನ್ನಡ ಹೋರಾಟಗಾರರಾದ ಪುಟ್ಟಸ್ವಾಮಿ, ಋಗ್ವೇದಿ ಯೂತ್ ಕ್ಲಬ್ ನ ಶ್ರಾವ್ಯ ಋಗ್ವೇದಿ ಉಪಸ್ಥಿತರಿದ್ದರು.