ಬೆಂಗಳೂರು: ರಣಜಿ ಟ್ರೋಫಿ – 2022 ರ ಫೈನಲ್ ಪಂದ್ಯದಲ್ಲಿ ಮಧ್ಯ ಪ್ರದೇಶ ತಂಡ 6 ವಿಕೆಟ್ ಗಳಿಂದ ಮುಂಬಯಿಯನ್ನು ಮಣಿಸಿ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಸಂಭ್ರಮಿಸಿದೆ.
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪೃಥ್ವಿ ಶಾ ನೇತೃತ್ವದ ಮುಂಬಯಿ ತಂಡ ಸರ್ಫರಾಜ್ ಖಾನ್ ಅವರ ಭರ್ಜರಿ 134 ರನ್ ಹಾಗೂ ಜೈಸ್ವಾಲ್ ಅವರ 78 ರನ್ ಗಳ ಸಹಾಯದಿಂದ 374 ರನ್ ಗಳಿಸಿ ಸರ್ವಪತನವನ್ನು ಕಂಡಿತು.
ಮೊದಲ ಇನ್ನಿಂಗ್ಸ್ ಗೆ ಉತ್ತರ ಕೊಟ್ಟ ಮಧ್ಯ ಪ್ರದೇಶ ತಂಡ ಯಶ್ ದುಬೆ (133) , ಶುಭಮ್ ಶರ್ಮಾ(116), ಆರ್ ಸಿಬಿಯ ಸ್ಟಾರ್ ಆಟಗಾರ ರಜತ್ ಪಾಟೇದರ್ (122) ಅವರ ಶತಕದಿಂದ ಸ್ಕೋರ್ ಬೋರ್ಡ್ ನಲ್ಲಿ 536 ಬೃಹತ್ ಮೊತ್ತವನ್ನು ದಾಖಲಿಸಿತು.
ಬಳಿಕ ಸಾಗಿದ 2ನೇ ಇನ್ನಿಂಗ್ಸ್ ನಲ್ಲಿ ಮುಂಬಯಿ ಆಟಗಾರರು, ಬ್ಯಾಟಿಂಗ್ ವೈಫಲ್ಯದಿಂದ ಕೇವಲ 269 ರನ್ ಗೆ ಅಲೌಟ್ ಆಗಿ, ಎದುರಾಳಿ ಮಧ್ಯ ಪ್ರದೇಶಕ್ಕೆ 108 ರ ಗುರಿಯನ್ನು ಬಿಟ್ಟು ಕೊಟ್ಟಿತು.
ಸುಲಭ ಗುರಿಯನ್ನು ಮಧ್ಯ ಪ್ರದೇಶ 4 ವಿಕೆಟ್ ಗಳನ್ನು ಕಳೆದುಕೊಂಡು ಚೊಚ್ಚಲ ರಣಜಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.
ಮಧ್ಯ ಪ್ರದೇಶದ ಶುಭಮ್ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು. ಸರಣಿ ಶ್ರೇಷ್ಠ ಪ್ರಶಸ್ತಿಯನ್ನು 9 ಪಂದ್ಯದಲ್ಲಿ 982 ರನ್ ಗಳಿಸಿದ ಮುಂಬಯಿ ತಂಡದ ಸರ್ಫರಾಜ್ ಖಾನ್ ಪಡೆದುಕೊಂಡರು.
ಗೆದ್ದ ತಂಡಕ್ಕೆ ಬಿಸಿಸಿಐ ಕಡೆಯಿಂದ 2 ಕೋಟಿ ರೂ ಸಿಗಲಿದ್ದು, ರನ್ನರ್ ಅಪ್ ತಂಡಕ್ಕೆ 1 ಕೋಟಿ ರೂ ಸಿಗಲಿದೆ.