ಶಾರ್ಜಾ: ನಾಯಕ ಡೇವಿಡ್ ವಾರ್ನರ್ ಅಮೋಘ ಬ್ಯಾಟಿಂಗ್ ನೆರವಿನ ಹೊರತಾಗಿಯೂ ಸನ್ ರೈಸರ್ಸ್ ಹೈದರಾಬಾದ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 34 ರನ್ ಗಳಿಂದ ಸೋಲನ್ನಪ್ಪಿದೆ.
ಮುಂಬೈ ಇಂಡಿಯನ್ಸ್ ನೀಡಿದ 209 ರನ್ ಗಳ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಹೈದರಾಬಾದ್ ಗೆ ನಾಯಕ ಡೇವಿಡ್ ವಾರ್ನರ್ ಆಸರೆಯಾದರು. 2 ಸಿಕ್ಸರ್ ಮತ್ತು 5 ಬೌಂಡರಿಗಳ ಸಹಾಯದಿಂದ ಆಕರ್ಷಕ ಅರ್ಧಶತಕ ಸಿಡಿಸಿದರು. 44 ಬಾಲ್ ಗಳಲ್ಲಿ 60 ರನ್ ಗಳಿಸಿದ್ದಾಗ ಇಶಾನ್ ಕಿಶಾನ್ ಹಿಡಿದ ಅಧ್ಬುತ ಕ್ಯಾಚ್ ನಿಂದ ಪೆವಿಲಿಯನ್ ಸೇರಿದರು.
ಆರಂಭದಲ್ಲಿ ನಾಯಕ ವಾರ್ನರ್ ಜೊತೆಯಾದ ಜಾನಿ ಬೈರ್ ಸ್ಟೋ (25) ಉತ್ತಮ ಆರಂಭ ಒದಗಿಸಿದರು. 2 ಭರ್ಜರಿ ಸಿಕ್ಸರ್ ಗಳ ಮೂಲಕ ಮೊದಲ ವಿಕೆಟ್ ಗೆ 34 ರನ್ ಗಳ ಜೊತೆಯಾಟ ನಡೆಸಿದರು. ಬೈರ್ ಸ್ಟೋ ನಿರ್ಗಮಿಸಿದ ಬೆನ್ನಲ್ಲೆ ಬಂದ ಮನೀಷ್ ಪಾಂಡೆ ಕೂಡ ತಂಡದ ಮೊತ್ತವನ್ನು ಹಿಗ್ಗಿಸಿದರು. 19 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 4 ಬೌಂಡರಿ ಸಿಡಿಸಿ 30 ರನ್ ಗಳಿಸಿ ಪ್ಯಾಟಿನ್ ಸನ್ ಗೆ ವಿಕೆಟ್ ಒಪ್ಪಿಸಿದರು.
ಭರವಸೆಯ ಆಟಗಾರ ಕೇನ್ ವಿಲಿಯಮ್ಸನ್ ಕೇವಲ 3 ರನ್ ಗಳಿಸಿ ನಿರಾಸೆ ಮೂಡಿಸಿದರು. ನಂತರ ಬಂದ ಪ್ರಿಯಂ ಗರ್ಗ್ ಆಟ ಕೇವಲ 8 ರನ್ ಗೆ ಸೀಮಿತವಾಯಿತು. ಅಭಿಶೇಕ್ ಶರ್ಮಾ 10 ರನ್ ಗಳಿಸಿದರೆ, ಅಬ್ದುಲ್ ಸಮದ್ 20 ರನ್ ಹಾಗೂ ರಷೀದ್ ಖಾನ್ 3 ರನ್ ಪೇರಿಸಿದರು. 20 ಓವರ್ ಗಳ ಅಂತ್ಯಕ್ಕೆ ಹೈದರಾಬಾದ್ ತಂಡ 174 ರನ್ ಗೆ 7 ವಿಕೆಟ್ ಕಳೆದುಕೊಂಡು 34 ರನ್ ಗಳಿಂದ ಸೋಲನ್ನಪ್ಪಿತ್ತು.
ಮುಂಬೈ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಟ್ರೆಂಟ್ ಬೌಲ್ಟ್, ಜೇಮ್ಸ್ ಪ್ಯಾಟಿನ್ ಸನ್, ಬುಮ್ರಾ ತಲಾ 2 ವಿಕೆಟ್ ಪಡೆದರು. ಕ್ರುನಾಲ್ ಪಾಂಡ್ಯ 1 ವಿಕೆಟ್ ಪಡೆದು ಮಿಂಚಿದರು.