ಮುಂಬಯಿ: ಕಳೆದ ತಿಂಗಳು ಇರಾಕ್‌ಗೆ ಯಾತ್ರೆಗೆಂದು ತೆರಳಿದ್ದ ಈರ್ವರು ಯುವಕರು ಇರಾಕ್ ತಲುಪಿದ ಬಳಿಕ ನಾಪತ್ತೆಯಾಗಿರುವುದಾಗಿ ಹೇಳಲಾಗಿದೆ.
ಇದೀಗ ನಾಪತ್ತೆಯಾಗಿರುವರೆನ್ನಲಾಗಿರುವ ಈ ಈರ್ವರು ಯುವಕರಿಗಾಗಿ ರಾಜ್ಯದ ಭಯೋತ್ಪಾದನ ನಿಗ್ರಹ ದಳ ಶೋಧ ಕಾರ್ಯ ಆರಂಭಿಸಿದೆ.
ಇರಾಕ್ ರಾಜಧಾನಿ ಬಗ್ಧಾದ್‌ನಲ್ಲಿರುವ ಸೂಫಿ ಸಂತ ಅಬ್ದುಲ್ ಖಾದಿರ್ ಜಿಲಾನಿ ಅವರ ಸಮಾಧಿಗೆ ಪ್ರಾರ್ಥನೆ ಸಲ್ಲಿಸಲೆಂದು ನಗರದ ಟೂರ್ ಕಂಪನಿಯೊಂದರ ಆಶ್ರಯದಲ್ಲಿ ಜನವರಿಯಲ್ಲಿ ತೆರಳಿದ್ದ ಎರಡು ತಂಡಗಳಲ್ಲಿ ಈ ಯುವಕರಿದ್ದರು. ಆದರೆ ಇರಾಕ್‌ಗೆ ತಲುಪಿದ ಬಳಿಕ ಇವರೀರ್ವರು ಟೂರ್ ಕಂಪನಿ ಮತ್ತು ಕುಟುಂಬದವರ ಸಂಪರ್ಕವನ್ನು ಕಡಿದುಕೊಂಡಿದ್ದರು.
ಪ್ರಕರಣದ ಸಂಬಂಧ ತನಿಖೆಯನ್ನು ಕೈಗೆತ್ತಿಕೊಂಡಿರುವ ಎಟಿಎಸ್ ದಕ್ಷಿಣ ಮುಂಬಯಿನಲ್ಲಿರುವ ಟೂರ್ ಕಂಪನಿ ಮತ್ತು ಮುಂಬಯಿ ವಿಮಾನ ನಿಲ್ದಾಣದಿಂದ ಈ ಯುವಕರ ಬಗೆಗೆ ಮಾಹಿತಿಗಳನ್ನು ಪಡೆದುಕೊಂಡಿದೆ.
ಮೂಲತಃ ಈ ಯುವಕರು ಪಶ್ಚಿಮಬಂಗಾಳದವರೆನ್ನಲಾಗಿದ್ದು ನಗರದಲ್ಲಿ ವಾಸವಾಗಿದ್ದರೇ? ಎಂಬ ಬಗೆಗೆ ಖಚಿತ ಮಾಹಿತಿ ಲಭಿಸಿಲ್ಲ.