ಮುಂಬಯಿ : ಭಾರತೀಯ ಕ್ರಿಕೆಟ್ ರಂಗದ ದೇವರು ಎಂದೇ ಪರಿಗಣಿತರಾಗಿರುವ ಭಾರತ ರತ್ನ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆಯನ್ನು ತೆರೆದ ನಿತಿನ್ ಶಿಶೋಡೆ ಎಂಬ ಸಾಫ್ಟ್ ವೇರ್ ಇಂಜಿನಿಯರ್‌ನನ್ನು ಪೊಲೀಸರು ಮುಂಬಯಿಯಲ್ಲಿ ಬಂಧಿಸಿದ್ದಾರೆ.
ತೆಂಡೂಲ್ಕರ್ ಪುತ್ರಿ ಸಾರಾ ಹೆಸರಲ್ಲಿ ನಕಲಿ ಟ್ವಿಟರ್ ಖಾತೆಯನ್ನು ತೆರದ ಆರೋಪಿ ಟೆಕ್ಕಿ ಶಿಶೋಡೆ ಅದರಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಆಕ್ಷೇಪಾರ್ಹ ಪೋಸ್ಟಿಂಗ್‌ಗಳನ್ನು ಹಾಕುತ್ತಿದ್ದ.
ಮುಂಬಯಿ ಪೊಲೀಸರು ನಗರದ ಅಂಧೇರಿ ಪ್ರದೇಶದಲ್ಲಿ ಆರೋಪಿ ನಿತಿನ್ ಶಿಶೋಡೆಯನ್ನು ಬಂಧಿಸಿದರು.
ತಿಂಗಳ ಹಿಂದೆ ಸಾರಾ ತೆಂಡೂಲ್ಕರ್‌ಗೆ ಪೋನಿನಲ್ಲಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ 32ರ ಹರೆಯದ ವ್ಯಕ್ತಿಯನ್ನು ಪಶ್ಚಿಮ ಬಂಗಾಲದಲ್ಲಿ ಬಂಧಿಸಲಾಗಿತ್ತು. ಆತನನ್ನು ಮುಂಬಯಿ ಪೊಲೀಸರು ಮತ್ತು ಪಶ್ಚಿಮ ಬಂಗಾಲ ಪೊಲೀಸರ ಜಂಟಿ ತಂಡ ಪೂರ್ವ ಮಿಡ್ನಾಪುರ ಜಿಲ್ಲೆಯ ಮಹಿಸದಾಲ್ ಎಂಬಲ್ಲಿ ಬಂಧಿಸಿತ್ತು.
ಮಹಿಸದಾಲ್ ಪೊಲೀಸ್ ಠಾಣೆಯ ಪ್ರಭಾರಾಧಿಕಾರಿ ಪಾರ್ಥ ಬಿಸ್ವಾಸ್ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ, “ಸಾರಾ ತೆಂಡೂಲ್ಕರ್‌ಗೆ ಫೋನಿನಲ್ಲಿ ಮಾನಸಿಕ ಕಿರುಕುಳ ನೀಡುತ್ತಿದ್ದ ಆರೋಪಿ ದೇಬಕುಮಾರ್ ಮೈತಿ ಎಂಬಾತನನ್ನು ಇಬ್ಬರು ಸದಸ್ಯರ ಮುಂಬಯಿ ಪೊಲೀಸ್ ತಂಡ ಮತ್ತು ನಮ್ಮ ಪೊಲೀಸ್ ಸಿಬಂದಿಗಳು ಬಂಧಿಸಿದ್ದರು’ ಎಂದು ಹೇಳಿದರು.