ಮುಂಬಯಿ: ಪರೇಲ್ ಎಲ್ಫಿನ್‍ಸ್ಟನ್ ರೈಲ್ವೇ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದಭೀಕರ ಕಾಲ್ತುಳಿತದಲ್ಲಿ ದಕ್ಷಿಣ ಕನ್ನಡ ಮೂಲದ ಇಬ್ಬರು ಮಹಿಳೆಯರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮೃತರನ್ನು ಮುಂಬೈಯ ಬಂಟ್ಸ್ ಸಂಘದ ಕುರ್ಲಾ ಭಾಂಡೂಪ್ ಪ್ರಾದೇಶಿಕ ಸಮಿತಿ ಸದಸ್ಯೆಯರಾದ ಸುಜಾತಾ ಪಿ.ಆಳ್ವ (42) ಮತ್ತು ಸುಮಲತಾ ಸಿ.ಶೆಟ್ಟಿ (45) ಎಂದು ಗುರುತಿಸಲಾಗಿದೆ.
ಸುಜಾತಾ ಪಿ.ಆಳ್ವ ಮತ್ತು ಸುಮಲತಾ ಸಿ.ಶೆಟ್ಟಿ ಕಾಂಜೂರ್‍ಮಾರ್ಗ ಪೂರ್ವದ ನೆಹರೂ ನಗರ ನಿವಾಸಿಗಳಾಗಿದ್ದರು. ದಸರಾ ಹಬ್ಬದ ಪೂಜೆಗೆ ಹೂವು ಖರೀದಿಸಲೆಂದೇ ಹೋದವರು ಈ ಅವಘಡದಲ್ಲಿ ಮೃತಪಟ್ಟಿದ್ದಾರೆ.
ಸುಮಲತಾ ಶೆಟ್ಟಿ ಮೂಲತಃ ಇನ್ನಾ ಮಡ್ಮಾಣ್ ಪಾದೆಮನೆ (ತಾಯಿಮನೆ), ಕಡಂದಲೆ ಹೊಯ್ಗೆಮನೆ ಕೃಷ್ಣಶೆಟ್ಟಿ ದಂಪತಿಯ ಪುತ್ರಿ. ಪ್ರತಿಭಾನ್ವಿತೆ ಮತ್ತು ಅತ್ಯುತ್ತಮ ಕ್ರೀಡಾಪಟುವಾಗಿದ್ದರು. ಪತಿ ಎಳಿಯಾಲು ಶೆಟ್ಟಿ ಬೆಟ್ಟುಮನೆತನದ ಚಂದ್ರಶೇಖರ್ ಶೆಟ್ಟಿ ಸೀಮೆನ್ಸ್ ಉದ್ಯೋಗಿಯಾಗಿದ್ದು, ಏಕೈಕ ಪುತ್ರಿ ನಿಧಿ ಶೆಟ್ಟಿ ಸಯಾನ್‍ನಲ್ಲಿ ಬಿಎಸ್ಸಿ ಓದುತ್ತಿದ್ದಾರೆ.
ವಾಮಂಜೂರು ಮೂಲದವರಾದ ಸುಜಾತಾ ಆಳ್ವ ಅತ್ಯುತ್ತಮ ರಂಗಭೂಮಿ ಕಲಾವಿದೆ. ಇವರ ಪತಿ ಪುರುಷೋತ್ತಮ ಆಳ್ವ ಆದಾಯ ತೆರಿಗೆ ಉನ್ನತಾಧಿಕಾರಿಯಾಗಿದ್ದು ಮತ್ತು ಇಬ್ಬರು ಪುತ್ರಿಯರಾದ ಪ್ರಜ್ಞಾ ಆಳ್ವ ಮತ್ತು ಪ್ರೇರಣಾ ಆಳ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಮೈಸೂರು ಅಸೋಸಿಯೇಶನ್‍ನ ಸಭಾಗೃಹದಲ್ಲಿ ಪ್ರದರ್ಶನಗೊಂಡ ನಾಟಕ ತಜ್ಞ, ಪ್ರಶಸ್ತಿ ವಿಜೇತ ಸಾ.ದಯಾ (ದಯಾನಂದ್ ಸಾಲ್ಯಾನ್) ರಚಿಸಿ ನಿರ್ದೇಶಿಸಿದ ಅಬ್ಬ’ ಕನ್ನಡ ನಾಟಕದಲ್ಲಿ ಸುಜಾತ ಪಾತ್ರ ನಿರ್ವಹಿಸಿದ್ದರು.
ಶಾರ್ಟ್ ಸರ್ಕ್ಯೂಟ್ ಆಗಿದೆ ಎಂಬ ಸುಳ್ಳು ವದಂತಿ ಹಿನ್ನೆಲೆಯಲ್ಲಿ ಜನರ ಭಾರೀ ತಳ್ಳಾಟ, ನೂಕಾಟದಿಂದಾಗಿ ಸಂಭವಿಸಿದ ಕಾಲ್ತುಳಿತಕ್ಕೆ 22 ಮಂದಿ ಬಲಿಯಾಗಿದ್ದರು.