ಮುಂಬಯಿ : ಚಿಲ್ಲರೆ ಹಾಗೂ ಸಾಂಸ್ಥಿಕ ಹೂಡಿಕೆದಾರರು ವ್ಯಾಪಕ ಖರೀದಿಯಲ್ಲಿ ತೊಡಗಿಕೊಂಡ ಪ್ರಯುಕ್ತ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ನಿರಂತರ ಆರನೇ ದಿನದ ಆರಂಭಿಕ ವಹಿವಾಟಿನಲ್ಲಿ 106 ಅಂಕಗಳ ಮುನ್ನಡೆಯನ್ನು ಸಾಧಿಸಿತು.
ಆದರೆ 10.45ರ ಹೊತ್ತಿಗೆ ಸೆನ್ಸೆಕ್ಸ್ ತನ್ನ ಆರಂಭಿಕ ಗಳಿಕೆಯ ಅರ್ಧಾಂಶವನ್ನು ಬಿಟ್ಟುಕೊಟುx 59.74 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 28,924.45 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 20.90 ಅಂಕಗಳ ಮುನ್ನಡೆಯನ್ನು ಸಾಧಿಸಿ 8,947.80 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇಂದಿನ ವಹಿವಾಟಿನಲ್ಲಿ ಭಾರ್ತಿ ಏರ್‌ಟೆಲ್ ಶೇರುಗಳು ಶೇ.5.5ರ ಮುನ್ನಡೆಯನ್ನು ಸಾಧಿಸಿರುವುದು ಗಮನಾರ್ಹವೆನಿಸಿತು. ಟೆಲಿನಾರ್ ಇಂಡಿಯಾ ಕಂಪೆನಿಯನ್ನು ಭಾರ್ತಿ ಏರ್‌ಟೆಲ್ ಖರೀದಿಸಲು ಮುಂದಾಗಿದ್ದು ಇದರಿಂದ ಕಂಪೆನಿಗೆ ಹೆಚ್ಚುವರಿಯಾಗಿ 1,800 ಮೆಗಾ ಹಜ್ ಬ್ಯಾಂಡ್ ಸಿಗಲಿರುವುದು ಗಮನಾರ್ಹವಾಗಿದೆ.
ಇಂದಿನ ಆರಂಭಿಕ ವಹಿವಾಟಿನಲ್ಲಿ ಏಶ್ಯನ್ ಶೇರು ಮಾರುಕಟ್ಟೆಯಲ್ಲಿ ದೌರ್ಬಲ್ಯ ತೋರಿ ಬಂತು. ಹಾಂಕಾಂಗ್‌ನ ಹ್ಯಾಂಗ್‌ಸೆಂಗ್ ಶೇ.0.43ರಷ್ಟು ಕುಸಿಯಿತಾದರೆ ಜಪಾನಿನ ನಿಕ್ಕಿ ಶೇ.0.35ರ ಹಿನ್ನಡೆಗೆ ಗುರಿಯಾಯಿತು. ಶಾಂಘೈ ಕಾಂಪೋಸಿಟ್ ಇಂಡೆಕ್ಸ್ ಶೇ.0.39ರ ನಷ್ಟಕ್ಕೆ ಗುರಿಯಾಯಿತು. ಆದರೆ ನಿನ್ನೆ ಅಮೆರಿಕದ ಡೋವ್ ಜೋನ್ಸ್ ಸೂಚ್ಯಂಕ ಶೇ.0.16ರ ಏರಿಕೆಯನ್ನು ಕಂಡಿತ್ತು.