ಮುಂಬಯಿ : ಏಶ್ಯನ್ ಮಾರುಕಟ್ಟೆಗಳಲ್ಲಿ ತೋರಿಬಂದಿರುವ ಧನಾತ್ಮಕ ಅಂಶಗಳನ್ನು ಅನುಸರಿಸಿ ಮುಂಬಯಿ ಶೇರು ಪೇಟೆ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 57 ಅಂಕಗಳ ಮುನ್ನಡೆಯನ್ನು ಸಾಧಿಸಿತು.
ಪರಿಣಾಮವಾಗಿ ಎಫ್ಎಂಸಿಜಿ, ಕ್ಯಾಪಿಟಲ್ ಗೂಡ್ಸ್, ಪಿಎಸ್‌ಯು, ಪವರ್, ಆಟೋ ಮತ್ತು ಐಟಿ ವಲಯದ ಶೇರುಗಳು ಇಂದು ಉತ್ತಮ ಬೇಡಿಕೆಯನ್ನು ಪಡೆದು ಏರುಹಾದಿಯನ್ನು ಹಿಡಿದವು.
ಆದರೆ 10.50ರ ಹೊತ್ತಿಗೆ ಸೆನ್ಸೆಕ್ಸ್ ತನ್ನ ಆರಂಭಿಕ ಗಳಿಕೆಯನ್ನು ಬಿಟ್ಟುಕೊಟ್ಟು 53.72 ಅಂಕಗಳ ನಷ್ಟಕ್ಕೆ ಗುರಿಯಾಗಿ 29,465.02 ಅಂಕಗಳ ಮಟ್ಟಕ್ಕೆ ಇಳಿಯಿತು. ನಿಫ್ಟಿ 15.35 ಅಂಕಗಳ ನಷ್ಟಕ್ಕೆ ಗುರಿಯಾಗಿ 9,111.50 ಅಂಕಗಳ ಮಟ್ಟಕ್ಕೆ ಜಾರಿತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಏಶ್ಯನ್ ಶೇರು ಮಾರುಕಟ್ಟೆಗಳ ಪೈಕಿ ಹಾಂಕಾಂಗ್‌ನ ಹ್ಯಾಂಗ್‌ಸೆಂಗ್ ಶೇ.0.27, ಶಾಂಘೈ ಸೂಚ್ಯಂಕ ಶೇ.0.22ರಷ್ಟು ಏರಿದವು. ಆದರೆ ಜಪಾನಿನ ನಿಕ್ಕಿ ಶೇ.0.31ರಷ್ಟು ಕುಸಿತಕ್ಕೆ ಗುರಿಯಾಯಿತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಅತೀ ಹೆಚ್ಚು ಕ್ರಿಯಾಶೀಲವಾಗಿದ್ದ ಶೇರುಗಳೆಂದರೆ ಐಡಿಯಾ ಸೆಲ್ಯುಲರ್, ಡಾ. ರೆಡ್ಡೀಸ್ ಲ್ಯಾಬ್, ಎಕ್ಸಿಸ್ ಬ್ಯಾಂಕ್, ಟಿಸಿಎಸ್, ರಿಲಯನ್ಸ್.
ಅಂಬುಜಾ ಸಿಮೆಂಟ್ಸ್, ಲಾರ್ಸನ್, ಐಟಿಸಿ, ಭಾರ್ತಿ ಏರ್‌ಟೆಲ್ ಮತ್ತು ಬಾಶ್ ಶೇರುಗಳು ಟಾಪ್ ಗೇನರ್ ಎನಿಸಿಕೊಂಡವು.