ಲಕ್ನೋ:ಪರೋಲ್ ಮೇಲೆ ಹೊರಬಂದು ನಿಗೂಢವಾಗಿ ನಾಪತ್ತೆಯಾಗಿದ್ದ 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಕರಣದ ಅಪರಾಧಿ ಜಲೀಸ್ ಅನ್ಸಾರಿ ಅಲಿಯಾಸ್ ಬಾಂಬ್ ಡಾಕ್ಟರ್ ನನ್ನು ಶುಕ್ರವಾರ ಕಾನ್ಪುರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಾಕ್ಟರ್ ಬಾಂಬ್ ಕುಖ್ಯಾತಿಯ ಅನ್ಸಾರಿ ಮಸೀದಿಯಿಂದ ಹೊರಟು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ವೇಳೆ ಉತ್ತರಪ್ರದೇಶದ ವಿಶೇಷ ಪೊಲೀಸ್ ತಂಡ ಬಂಧಿಸಿರುವುದಾಗಿ ವರದಿ ವಿವರಿಸಿದೆ.
ವೈದ್ಯನಾಗಿದ್ದ ಜಲೀಸ್ ಅನ್ಸಾರಿ ಬಾಂಬ್ ತಯಾರಿಕಾ ತಜ್ಞನಾಗಿದ್ದ. ಈ ಹಿನ್ನೆಲೆಯಲ್ಲಿ ಅನ್ಸಾರಿ ಡಾ.ಬಾಂಬ್ ಎಂದೇ ಕುಖ್ಯಾತಿಯಾಗಿದ್ದ. 21 ದಿನಗಳ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ಅನ್ಸಾರಿ ಮುಂಬೈಯ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದ.
ಏತನ್ಮಧ್ಯೆ ಗುರುವಾರ ಬೆಳಗ್ಗೆಯಿಂದ ಅನ್ಸಾರಿ ಮನೆಯಿಂದ ನಿಗೂಢವಾಗಿ ಕಣ್ಮರೆಯಾಗಿರುವುದಾಗಿ ಕುಟುಂಬದ ಸದಸ್ಯರು ಮುಂಬೈನ ಅಗ್ರಿಪಾಡಾ ಪೊಲೀಸ್ ಠಾಣೆಗೆ ನಾಪತ್ತೆಯಾದ ಬಗ್ಗೆ ದೂರು ನೀಡಿದ್ದರು.
ದೂರಿನ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಜಲೀಸ್ ಅನ್ಸಾರಿ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದಾರೆ. ದೇಶಾದ್ಯಂತ ಸಂಭವಿಸಿದ 50 ಬಾಂಬ್ ಸ್ಫೋಟದ ಪ್ರಕರಣಗಳು ಅನ್ಸಾರಿ ವಿರುದ್ಧ ದಾಖಲಾಗಿದ್ದವು ಎಂದು ವರದಿ ವಿವರಿಸಿತ್ತು.