Advertisement

ಮುಂದುವರಿದ “ಮಹಾ”ಮಳೆ; ಶಾಲೆಗಳಿಗೆ ರಜೆ, ರೈಲು ಸಂಚಾರ ರದ್ದು

05:47 PM Aug 06, 2019 | Nagendra Trasi |

ಮುಂಬಯಿ: ಮುಂಬಯಿ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ಕಳೆದ ಒಂದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯು ರವಿವಾರವೂ ತನ್ನ ರೌದ್ರ ನರ್ತನವನ್ನು ಮುಂದುವರಿಸಿದೆ.

Advertisement

ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಜನ ಸಾಮಾನ್ಯರ ಜೀವನ ಅಸ್ತವ್ಯಸ್ತಗೊಳಿಸಿದ್ದು. ರಸ್ತೆ, ರೈಲು ಮತ್ತು ವಾಯು ಸಂಚಾರಕ್ಕೆ ಅಡ್ಡಿಪಡಿಸಿದೆ. ಸತತ ಭಾರೀ ಮಳೆಯಿಂದ ಮುಂಬಯಿ, ಸಾಯನ್‌, ನಾಗಾ³ಡ, ನಲಸೋಪಾರ, ಸಾಂತಕ್ರೂಜ್‌, ಅಂಧೇರಿ ಮತ್ತು ಚೆಂಬೂರ್‌ ಸೇರಿದಂತೆ ವಿವಿಧ ಕಡೆಗಳಲ್ಲಿ ನೀರು ಜವಾವಣೆಗೊಂಡಿದೆ.

ಬೃಹನ್ಮುಂಬಯಿ ಮಹಾನಗರ ಪಾಲಿಕೆ ಪ್ರಕಾರ, ಮುಂಬಯಿ ಮತ್ತು ಉಪನಗರಗಳಲ್ಲಿ
ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯೊಂದಿಗೆ ಪ್ರತ್ಯೇಕ ಸ್ಥಳಗಳಲ್ಲಿ ಅತಿ ಹೆಚ್ಚು ಮಳೆಯಾಗಬಹುದು ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ನಗರ, ಅದರ ನೆರೆಯ ಥಾಣೆ ಮತ್ತು ಪಾಲರ್‌ ಜಿಲ್ಲೆಗಳು ಮತ್ತು ನವಿ ಮುಂಬಯಿ ಪಟ್ಟಣದಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದೆ ಮತ್ತು ಅಲ್ಲಿಂದ ಹಲವಾರು ಮರಗಳು ಕುಸಿದಿರುವ ಘಟನೆಗಳು ವರದಿಯಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ ನಗರದಲ್ಲಿ 100 ಮಿ.ಮೀ. ಮಳೆಯಾದರೆ, ಉಪನಗರಗಳಾದ ಥಾಣೆ
ಮತ್ತು ನವಿಮುಂಬಯಿಯಲ್ಲಿ 250 ಮಿ.ಮೀ.ಗಿಂತ ಹೆಚ್ಚು ಮಳೆಯಾಗಿದೆ ಎಂದು ಐಎಂಡಿಯ ಉಪನಿರ್ದೇಶಕ ಕೆ. ಎಸ್‌. ಹೊಸಲಿಕರ್‌ ಹೇಳಿದ್ದಾರೆ.

ಲೋಕಲ್‌ ರೈಲು ಸೇವೆ ಸಂಪೂರ್ಣ ಅಸ್ತವ್ಯಸ್ತ ಮಳೆಗೆ ರೈಲ್ವೇ ಹಳಿಗಳು ಜಲಾವೃತಗೊಂಡ ಪರಿಣಾಮ ಮಧ್ಯ ರೈಲ್ವೇಯಲ್ಲಿ ಉಪನಗರ ಲೋಕಲ್‌ ರೈಲು ಸೇವೆಗಳು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡವು. ರವಿವಾರವಾದ್ದರಿಂದ ಕಚೇರಿಗಳಿಗೆ ರಜೆ ಕಾರಣ ಹೆಚ್ಚಿನವರು ಮನೆಯಲ್ಲಿದ್ದರಿಂದ ಸಂಭವನೀಯ ಸಂಕಷ್ಟಗಳಿಂದ ಪಾರಾಗಿದೆ. ಭಾರೀ ಮತ್ತು
ನಿರಂತರ ಮಳೆಯ ಅನಂತರ ಕೆಲವು ವಿಭಾಗಗಳಲ್ಲಿ ಹಳಿಗಳಲ್ಲಿ ನೀರು ಸಂಗ್ರಹವಾಗಿದ್ದರಿಂದ, ಮಧ್ಯ ರೈಲ್ವೇಯ ಮುಖ್ಯ ಮಾರ್ಗ ಮತ್ತು ಹಾರ್ಬರ್‌ ಮಾರ್ಗದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಸ್‌ನಿಂದ (ಮುಂಬಯಿ) ಕರ್ಜತ್‌, ಕಸಾರ ಮತ್ತು ಖೊಪೋಲಿ ನಡುವಿನ ಉಪನಗರ ಲೋಕಲ್‌ ರೈಲು ಸೇವೆಗಳನ್ನು ಬೆಳಗ್ಗೆ 8 ರಿಂದ ಸ್ಥಗಿತಗೊಳಿಸಲಾಗಿದೆ ಎಂದು ಮಧ್ಯ ರೈಲ್ವೇಯ ಮುಖ್ಯ  ವಕ್ತಾರ ಸುನೀಲ್‌ ಉದಾಸಿ ಹೇಳಿದ್ದಾರೆ.

Advertisement

ಪ್ರಯಾಣಿಕರಿಗೆ ಆಗುವ ತೊಂದರೆಗಳನ್ನು ತಪ್ಪಿಸಲು ಮುನ್ನೆಚ್ಚರಿಕೆ ಕ್ರಮವಾಗಿ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿತು. ಬೆಳಗ್ಗೆ 11 ರಿಂದ ಕಲ್ಯಾಣ್‌ ಮತ್ತು ಥಾಣೆ ನಿಲ್ದಾಣದವರೆಗೆ ಸ್ಲೋ ಮಾರ್ಗದಲ್ಲಿ ರೈಲುಗಳನ್ನು ಓಡಿಸಲಾಗಿದೆ ಎಂದವರು ತಿಳಿಸಿದ್ದಾರೆ.

ಆದಾಗ್ಯೂ, ಟ್ರಾನ್ಸ್‌-ಹಾರ್ಬರ್‌ ಮಾರ್ಗ ಮತ್ತು ಖಾರ್‌ ಕೋಪರ್‌ನ ನಾಲ್ಕನೇ ಕಾರಿಡಾರ್‌ನಲ್ಲಿ ರೈಲು ಸೇವೆಗಳು ಸಾಮಾನ್ಯವಾಗಿ ಚಾಲನೆಯಲ್ಲಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ರೈಲು ಸಂಚಾರ ರದ್ದು, ವೇಳಾಪಟ್ಟಿಯಲ್ಲಿ ಬದಲಾವಣೆ
ಧಾರಾಕಾರ ಮಳೆಯಿಂದಾಗಿ ಮಧ್ಯ ರೈಲ್ವೇಯ ಆರು ರೈಲುಗಳ ಸಂಚಾರವನ್ನು ರದ್ದುಪಡಿಸಿದ್ದು, 6
ರೈಲುಗಳ ಸಂಚಾರವನ್ನು ಬೇರೆಡೆಗೆ ತಿರುಗಿಸಲಾಗಿದೆ ಮತ್ತು ಒಂದು ರೈಲಿನ ಸಂಚಾರವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಲಾಗಿದೆ.

ಇಂದು ಥಾಣೆ ಜಿಲ್ಲೆಯ ಶಾಲೆಗಳಿಗೆ ರಜೆ
ಭಾರೀ ಮಳೆಯ ಹಿನ್ನೆಲೆಯಲ್ಲಿ ಥಾಣೆ, ಕಲ್ಯಾಣ್‌ ಮತ್ತು ಡೊಂಬಿವಲಿಯಲ್ಲಿನ ಶಾಲೆಗಳಿಗೆ ಸೋಮವಾರ ರಜೆ ಘೋಷಿ ಸಲಾಗಿದೆ. ಈ ಪ್ರದೇಶಗಳಲ್ಲಿ ನಿರ್ಮಾಣವಾಗಿರುವ ಪ್ರವಾಹ ಪರಿಸ್ಥಿತಿಯನ್ನು ಉಲ್ಲೇಖಿಸಿ ಜಿಲ್ಲಾಡಳಿತವು ಈ ಆದೇಶ ಹೊರಡಿಸಿದೆ. ಪುಣೆ ಮತ್ತು ನಾಸಿಕ್‌ನಲ್ಲೂ ಇದೇ ರೀತಿಯ ಆದೇಶಗಳನ್ನು ನೀಡಲಾಗಿದೆ. ಇಂದು ಹೆಚ್ಚಿನ ಮಳೆಯಾಗುವ ಸಾಧ್ಯತೆಯಿರುವ ಹಿನ್ನೆಲೆ ಅಂದು ಜಿಲ್ಲೆಯ ಶಾಲೆಗಳು ಮುಚ್ಚಿರಲಿವೆ ಎಂದು ಥಾಣೆ ಜಿಲ್ಲಾಧಿಕಾರಿ ರಾಜೇಶ್‌ ನಾರ್ವೇಕರ್‌ ಹೇಳಿದ್ದಾರೆ.

ಥಾಣೆ, ಪಾಲ್ಘರ್ ನಲ್ಲಿ ವಿದ್ಯುತ್‌ ಪೂರೈಕೆ ಕಡಿತ ಭಾರೀ ಮಳೆಗೆ ವಿದ್ಯುತ್‌ ಸಬ್‌ಸ್ಟೇಶನ್‌ಗಳು
ಮುಳುಗಡೆಯಾಗಿ ಟಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ರವಿವಾರ ಥಾಣೆ
ಮತ್ತು ಪಾಲ್ಘರ್ ಜಿಲ್ಲೆಗಳಲ್ಲಿ ವಿದ್ಯುತ್‌ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ವಸಾಯಿ ಸಬ್‌ಸ್ಟೇಶನ್‌ನಿಂದ ವಿದ್ಯುತ್‌ ಸರಬರಾಜನ್ನು ನಿಲ್ಲಿಸಲಾಗಿದೆ ಎಂದು ಮಹಾರಾಷ್ಟ್ರ ರಾಜ್ಯ ವಿದ್ಯುತ್‌ ವಿತರಣಾ ಕಂಪೆನಿಯ ಜನಸಂಪರ್ಕಾಧಿಕಾರಿ ವಿಶ್ವಜೀತ್‌
ಭೋಸ್ಲೆ ತಿಳಿಸಿದ್ದಾರೆ. ವಸಾಯಿ, ಗಿರಿಜ್‌, ಸಾಂಡೊರ್‌, ಕೊಲಾರ್‌, ನವಘರ್‌, ಸಾತಿವಲಿ, ಸನ್‌ ಸಿಟಿ, ವಸಾಯಿ ಪಶ್ಚಿಮ ಮತ್ತು ಮಾವೆಲ್ಪಾಡಾದ ಸುಮಾರು 1.50 ಲಕ್ಷ ಗ್ರಾಹಕರು ಇದರಿಂದ ಪರಿಣಾಮಕ್ಕೊಳಗಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಮಂದಾ, ಟಿಟ್ವಾಲಾ, ವರಪ್‌, ಮಾರಲ್‌, ಕೋಣ್‌ ಮತ್ತು ಖಾಡವಲಿ ಸೇರಿದಂತೆ ಕಲ್ಯಾಣ್‌ ಉಪವಿಭಾಗದ 68,000 ಜನರಿಗೂ ವಿದ್ಯುತ್‌ ಸರಬರಾಜು ಕಡಿತದಿಂದ ತೊಂದರೆ ಉಂಟಾಗಿದೆ ಎಂದವರು ಹೇಳಿದ್ದಾರೆ. ಭಾರೀ ಮಳೆಯಿಂದಾಗಿ ಶಹಾಪುರ ಸ್ವಿಚ್ಚಿಂಗ್‌ ಕೇಂದ್ರಕ್ಕೆ ನೀರು ಪ್ರವೇಶಿಸಿರುವುದು ಆ ಪಟ್ಟಣದಲ್ಲಿ ವಿದ್ಯುತ್‌ ಕಡಿತಕ್ಕೆ ಕಾರಣವಾಯಿತು ಮತ್ತು ಅದರಿಂದಾಗಿ
ಧಾಸಾಯಿ ಮತ್ತು ಆಸನಾವ್‌ ಡರ್‌ ಲೈನ್‌ಗಳಿಗೂ ಹಾನಿಯಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪಶ್ಚಿಮ ಘಟ್ಟ ವಿಭಾಗದಲ್ಲಿ ಕರ್ಜತ್‌ (ನೆರೆಯ ರಾಯಗಢ್ ಜಿಲ್ಲೆ) ಮತ್ತು ಲೋನಾವಲಾ ಹಿಲ್ ಸ್ಟೇಶನ್‌ (ಪುಣೆ) ನಡುವೆ ಹಳಿಗಳಲ್ಲಿ ನೀರು ಜಮಾವಣೆ ಮತ್ತು ಬಂಡೆಗಳ ಕುಸಿತದಿಂದಾಗಿ ಮುಂಬಯಿಗೆ ತೆರಳುವ ಹಲವಾರು ರೈಲುಗಳನ್ನು ನಿಲ್ಲಿಸಲಾಯಿತು, ತಿರುಗಿಸಲಾಯಿತು ಅಥವಾ ರದ್ದುಗೊಳಿಸಲಾಯಿತು ಎಂದು ಮಧ್ಯ ರೈಲ್ವೇಯ ನಿಯಂತ್ರಣ ಕೊಠಡಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪುಣೆಯಿಂದ ಮುಂಬಯಿಗೆ ಹೋಗುವ ರೈಲು ಮಾರ್ಗವನ್ನು ಸಹ ಮುಚ್ಚಲಾಗಿದೆ ಎಂದವರು ತಿಳಿಸಿದ್ದಾರೆ. ಮಳೆಗೆ ಹಲವಾರು ರೈಲುಗಳು ಮಾರ್ಗ ಮಧ್ಯ ಸಿಕ್ಕಿಕೊಂಡಿರುವ ಬಗ್ಗೆಯೂ ವರದಿಯಾಗಿದೆ.

ಭಾರೀ ಮಳೆಯಿಂದಾಗಿ ವಿಮಾನ ಸೇವೆಗಳಿಗೂ ಅಡ್ಡಿ ಉಂಟಾಗಿದೆ. ಕಡಿಮೆ ಗೋಚರತೆಯ ಕಾರಣ ಹಲವಾರು ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, ಮುಂಬಯಿಗೆ ಆಗಮಿಸುವ ಕೆಲವು ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಯಿತು ಮುಂಬಯಿ ವಿಮಾನ ನಿಲ್ದಾಣದ ವಕ್ತಾರರೊಬ್ಬರು ಹೇಳಿದ್ದಾರೆ.

ಪಾಲ್ಗರ್‌ನಲ್ಲಿ ಭಾರೀ ಮಳೆಯಿಂದಾಗಿ ಕೆಲವು ವಿಭಾಗಗಳಲ್ಲಿ ಹಳಿಗಳು ಜಲಾವೃತಗೊಂಡಿದ್ದು, ವಸಾಯಿ ಮತ್ತು ವಿರಾರ್‌ ಪಟ್ಟಣಗಳ ನಡುವಿನ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಯಿತು ಎಂದು ಪಶ್ಚಿಮ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಲಸೋಪಾರ ಬಳಿ ಹಳಿಗಳಲ್ಲಿ ಪ್ರವಾಹ ಉಂಟಾದ ಪರಿಣಾಮ ಬೆಳಗ್ಗೆ ವೇಳೆ ಪಶ್ಚಿಮ ಮಾರ್ಗದ ಎಲ್ಲಾ ಮೇಲ್ ಮತ್ತು ಎಕ್ಸ್‌ಪ್ರೆಸ್‌ ರೈಲುಗಳನ್ನು ನಿಲ್ಲಿಸಲಾಗಿದೆ ಎಂದವರು ಹೇಳಿದ್ದಾರೆ. ಆದಾಗ್ಯೂ, ವಸಾಯಿ-ಚರ್ಚ್‌ಗೇಟ್ ಮತ್ತು ವಿರಾರ್‌-ದಾದರ್‌ ವಿಭಾಗಗಳಲ್ಲಿ ರೈಲುಗಳು ಸಂಚಾರ ನಡೆಸಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಬಾರ್ವಿ ಅಣೆಕಟ್ಟಿನಿಂದ ನೀರು ಬಿಡುಗಡೆ:

ಭಾರೀ ಮಳೆಗೆ ಥಾಣೆ ನಗರಕ್ಕೆ ನೀರು ಪೂರೈಸುವ ಪ್ರಮುಖ ಅಣೆಕಟ್ಟುಗಳಲ್ಲಿ ಒಂದಾದ ಬಾರ್ವಿ ಅಣೆಕಟ್ಟು ತುಂಬಿ ಹರಿಯಲಾರಂಭಿಸಿದೆ. ಬಾರ್ವಿ ಅಣೆಕಟ್ಟಿನಿಂದ ನೀರು ಬಿಡುಗಡೆಯಾಗಿರುವುದರಿಂದ ಬಾರ್ವಿ ಮತ್ತು ಉಲ್ಲಾಸ್‌ ನದಿಗಳಲ್ಲಿ ಪ್ರವಾಹ ಉಂಟಾಗಿರುವ ಹಿನ್ನೆಲೆಯಲ್ಲಿ ಆ ಪ್ರದೇಶಗಳಲ್ಲಿ ನದಿ ತೀರದಲ್ಲಿರುವ ಗ್ರಾಮಗಳ ನಿವಾಸಿಗರಿಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಹೊಂದುವಂತೆ ಥಾಣೆ ಜಿಲ್ಲಾಡಳಿತ ಕೇಳಿಕೊಂಡಿದೆ.

ಮೀಠಿ ನದಿಯಲ್ಲಿ ಪ್ರವಾಹ:

ಪಾಲ್ಗರ್‌ನ ವಿಕ್ರಂಗಢ್ ತಾಲೂಕಿನಲ್ಲಿ ಶನಿವಾರ ಸಂಭವಿಸಿದ ಪ್ರವಾಹದಲ್ಲಿ 16ರ ಹರೆಯದ ಬಾಲಕ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಜಿಲ್ಲೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆತನನ್ನು ಪತ್ತೆ ಹಚ್ಚಲು ಶೋಧ ನಡೆಯುತ್ತಿದೆ. ಮಳೆಗೆ ಮೀಠಿ ನದಿಯಲ್ಲಿ ಪ್ರವಾಹ ಉಂಟಾಗಿರುವ ಹಿನ್ನೆಲೆಯಲ್ಲಿ ಅದರ ಸುತ್ತಮುತ್ತಲಿನ ಪ್ರದೇಶಗಳಿಂದ ಕೆಲವು ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಬಿಎಂಸಿ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರವಾಹ ಸಂತ್ರಸ್ತರಿಗೆ ಮನಪಾ ಪರಿಹಾರ ಶಿಬಿರದಲ್ಲಿ ಆಹಾರ ಪ್ಯಾಕೆಟ್‌ಗಳು ಮತ್ತು ನೀರನ್ನು ಒದಗಿಸಲಾಗುತ್ತಿದೆ ಎಂದು ಅದು ಹೇಳಿದೆ.

ಬದಲಾದ ರೈಲ್ವೇ ವೇಳಾಪಟ್ಟಿ:

ಮುಂಬಯಿ-ಮನ್ಮಾಡ್‌ ರಾಜ್ಯರಾಣಿ ಎಕ್ಸ್‌ಪ್ರೆಸ್‌ ರೈಲು ಸಂಖ್ಯೆ 22101, ಮನ್ಮಾಡ್‌-ಮುಂಬಯಿ ರಾಜ್ಯರಾಣಿ ಎಕ್ಸ್‌ಪ್ರೆಸ್‌ 22102, ಮನ್ಮಾಡ್‌-ಎಲ್ಟಿಟಿ ಎಕ್ಸ್‌ಪ್ರೆಸ್‌ 12118, ಎಲ್ಟಿಟಿ-ಮನ್ಮಾಡ್‌ ಎಕ್ಸ್‌ಪ್ರೆಸ್‌ 12117, ಮುಂಬಯಿ-ಶ್ರೀನಗರ ಶಿರ್ಡಿ ಫಾಸ್ಟ್‌ ಪ್ಯಾಸೆಂಜರ್‌ 51033, ಶ್ರೀನಗರ ಶಿರ್ಡಿ-ಮುಂಬಯಿ ಫಾಸ್ಟ್‌ ಪ್ಯಾಸೆಂಜರ್‌ 51044 ರೈಲಿನ ಸಂಚಾರವನ್ನು ರವಿವಾರ ರದ್ದುಪಡಿಸಲಾಗಿದೆ ಎಂದು ಉದಾಸಿ ತಿಳಿಸಿದ್ದಾರೆ. ನಾಗಪುರ-ಮುಂಬಯಿ ಸೇವಾಗ್ರಾಮ್‌ ಎಕ್ಸ್‌ಪ್ರೆಸ್‌ 12140 ರೈಲಿನ ಸಂಚಾರ ನಾಸಿಕ್‌ ರೋಡ್‌ನ‌ಲ್ಲಿ ಅರ್ಧಕ್ಕೆ ಮೊಟಕುಗೊಳಿಸಲಾಗಿದೆ. 6 ರೈಲುಗಳ ಸಂಚಾರ ಬದಲಾವಣೆ ಮಾಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next