ಮುಂಬೈ: ದೇವೆಂದ್ರ ಫಡ್ನವೀಸ್ ಅವರ ಸರಕಾರಕ್ಕೆ ವಿಶ್ವಾಸಮತ ಯಾಚಿಸಲು ಬುಧವಾರ ಸಂಜೆ 5 ಗಂಟೆಗೆ ಸುಪ್ರೀಂ ಕೋರ್ಟ್ ಗಡುವು ನೀಡಿದ ಹಿನ್ನಲೆಯಲ್ಲಿ ಮುಂಬೈನಲ್ಲೀಗ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಬಹುಮತ ಸಾಬೀತು ಪಡಿಸಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇಂದು ಬಿಜೆಪಿ ಶಾಸಕರ ಸಭೆ ನಡೆಯಲಿದ್ದು, ಮುಂದಿನ ನಡೆಯ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಈ ಮಧ್ಯೆ ಕಾಂಗ್ರೆಸ್ ಪಕ್ಷ ತನ್ನ ಶಾಸಕಾಂಗ ಪಕ್ಷ ನಾಯಕನನ್ನು ಆಯ್ಕೆ ಮಾಡಿದೆ. ಹಿರಿಯ ನಾಯಕ ಬಾಳಾ ಸಾಹೆಬ್ ಥೋರಾಟ್ ಅವರು ಕಾಂಗ್ರೆಸ್ ನ ಶಾಸಕಾಂಗ ಪಕ್ಷದ ನಾಯಕನ್ನಾಗಿ ಆಯ್ಕೆ ಮಾಡಿದೆ. ಹಿರಿಯ ಕಾಂಗ್ರೆಸ್ ನಾಯಕ, ಮಹಾರಾಷ್ಟ್ರ ಕಾಂಗ್ರೆಸ್ ಉಸ್ತವಾರಿ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು.
ಶರದ್ ಪವಾರ್ ಅವರ ಎನ್ ಸಿಪಿ ಸದ್ಯ 52 ಶಾಸಕರನ್ನು ಹೊಂದಿದ್ದು, ಅಜಿತ್ ಪವಾರ್ ಜೊತೆ ಕೇವಲ ಒಬ್ಬ ಶಾಸಕ ಮಾತ್ರ ಕಾಣಿಸಿಕೊಂಡಿದ್ಧಾನೆ ಎಂದು ವರದಿಯಾಗಿದೆ. ಹಾಗಾಗಿ ಎರಡೂ ಬಣದಲ್ಲಿ ರಾಜಕೀಯ ಲೆಕ್ಕಾಚಾರ ಜೋರಾಗಿಯೇ ನಡೆದಿದೆ.