ಮುಂಬೈ: ಪೆಟ್ರೋಲ್ ಬಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬಂದಿಯೊಬ್ಬ ಮುಂಗಡ ತೆರಿಗೆ, ಜಿಎಸ್ ಟಿ, ವ್ಯಾಟ್, ಟಿಡಿಎಸ್ ಹಣದ ವಹಿವಾಟಿನಲ್ಲಿ ಸುಮಾರು 1.7 ಕೋಟಿ ರೂಪಾಯಿ ಹಣವನ್ನು ವಂಚಿಸಿರುವ ಘಟನೆ ಮುಂಬೈನ ಅಂಧೇರಿಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ʼದಿ ಕೇರಳ ಸ್ಟೋರಿʼಗೆ ʼಎʼ ಸರ್ಟಿಫಿಕೇಟ್:10 ದೃಶ್ಯಗಳಿಗೆ ಕತ್ತರಿ ಹಾಕಿದ ಸೆನ್ಸಾರ್ ಬೋರ್ಡ್
ಅಂಧೇರಿ ಪೆಟ್ರೋಲ್ ಬಂಕ್ ನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ಅರುಣ್ ಮುದಲಿಯಾರ್ ಎಂಬ ವ್ಯಕ್ತಿ ಭಾರೀ ಮೊತ್ತದ ಹಣವನ್ನು ವಂಚಿಸಿರುವುದಾಗಿ ಪೆಟ್ರೋಲ್ ಬಂಕ್ ಮಾಲೀಕ ಸುರೇಶ್ ನಂದಾ (64ವರ್ಷ) ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆರೋಪಿ ಅರುಣ್ ಮುದಲಿಯಾರ್ (35ವರ್ಷ) ಕಳೆದ ಎಂಟು ವರ್ಷಗಳಿಂದ ಪೆಟ್ರೋಲ್ ಬಂಕ್ ನಲ್ಲಿ ಕ್ಲರ್ಕ್ ಆಗಿ ದುಡಿಯುತ್ತಿದ್ದು, ಬಂಕ್ ಪಾಲುದಾರ ಎಂ.ವಂಕಾರ್ ರಾವ್ ಅವರಿಗೆ ಆನ್ ಲೈನ್ ಹಣಕಾಸು ವಹಿವಾಟಿನಲ್ಲಿ ನೆರವು ನೀಡುತ್ತಿದ್ದರು ಎಂದು ವರದಿ ತಿಳಿಸಿದೆ.
2017ರ ಸೆಪ್ಟೆಂಬರ್ ನಿಂದ 2022ರ ಮಾರ್ಚ್ ವರೆಗಿನ ಆನ್ ಲೈನ್ ವಹಿವಾಟಿನಲ್ಲಿ ಆರೋಪಿ ಮುದಲಿಯಾರ್, ತನ್ನ ಪತ್ನಿ ಮತ್ತು ಸಹೋದರಿಯ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಿದ್ದ. ಏತನ್ಮಧ್ಯೆ ಪೆಟ್ರೋಲ್ ಬಂಕ್ ವಹಿವಾಟಿನ ಆಡಿಟ್ ಸಂದರ್ಭದಲ್ಲಿ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿರುವುದಾಗಿ ವರದಿ ವಿವರಿಸಿದೆ.
ಆರೋಪಿ ಅರುಣ್ ಮುದಲಿಯಾರ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 408 (ವಂಚನೆ) ಮತ್ತು ಕಲಂ 420ರ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.