ಮುಂಬಯಿ: ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಮಂಗಳೂರು ಇದರ ಮುಂಬಯಿ ಘಟಕದ ವತಿಯಿಂದ ಆ. 13ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ನಡೆಯಲಿರುವ ಯಕ್ಷಧ್ರುವ ಪಟ್ಲ ಸಂಭ್ರಮ-2017 ಸಮಾರಂಭದ ರೂಪುರೇಷೆಗಳ ಬಗ್ಗೆ ವಿಚಾರ ವಿನಿಮಯ ಸಭೆಯು ಆ. 7ರಂದು ಸಂಜೆ ಬಂಟರ ಭವನದ ಎನೆಕ್ಸ್ ಸಂಕೀರ್ಣದಲ್ಲಿರುವ ವಿಜಯಲಕ್ಷ್ಮೀ ಮಹೇಶ್ ಎಸ್. ಶೆಟ್ಟಿ ಹವಾನಿಯಂತ್ರಿತ ಕಿರು ಸಭಾಗೃಹದಲ್ಲಿ ನಡೆಯಿತು.
ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಇದರ ಮುಂಬಯಿ ಘಟಕದ ಗೌರವಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಮಾತನಾಡಿ, ಯಕ್ಷ ಕಲಾವಿದರ ಸಮಸ್ಯೆ, ನೋವು ನಲಿವುಗಳಿಗೆ ಆಶಾಕಿರಣವಾಗಿ ಸ್ಪಂದಿಸುವ ಉದ್ದೇಶದಿಂದ ತನ್ನ ಬದುಕನ್ನೇ ಮುಡಿಪಾಗಿಟ್ಟ ಪಟ್ಲ ಸತೀಶ್ ಶೆಟ್ಟಿ ಅವರ ಮಾನವೀಯ ಅನುಕಂಪದ ಸೇವಾ ಕಾರ್ಯಕ್ಕೆ ಮುಂಬಯಿ ತುಳು-ಕನ್ನಡಿಗರ ಸಹಾಯ-ಸಹಕಾರದ ಮಹಾಪೂರವೇ ಹರಿದು ಬರುತ್ತಿದೆ. ಯಕ್ಷಧ್ರುವ ಪಟ್ಲ ಯೋಜನೆಗೆ ನೆರವು ನೀಡುವ ಪ್ರತಿಯೋರ್ವರೂ ಅಂದಿನ ಸಮಾರಂಭದಲ್ಲಿ ನಮ್ಮ ಅತಿಥಿಗಳಾಗಿದ್ದು, ಅವರೆಲ್ಲರಿಗೂ ಸಭಾ ಭವನದಲ್ಲಿ ಆಸನವನ್ನು ಕಾದಿರಿಸಲಾಗುವುದಲ್ಲದೆ, ಸಮಾರಂಭದಲ್ಲಿ ಹೃದಯಪೂರ್ವಕವಾಗಿ ಗೌರವ ನೀಡಲಾಗುವುದು. ಪಟ್ಲ ಯೋಜನೆಗೆ ನಗದು ಅಥವಾ ಚೆಕ್‌ರೂಪದಲ್ಲಿ ಧನಸಹಾಯ ನೀಡಲಿಚ್ಛಿಸುವ ಸಹೃದಯಿಗಳಿಗೆ ಕೌಂಟರ್‌ವೊಂದನ್ನು ತೆರೆಯಲಾಗುವುದು. ಸಮಾರಂಭವು ಯಶಸ್ವಿಯಾಗಿ ನಡೆಯಲು ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಕಟೀಲು ಶ್ರೀ ಭ್ರಮರಾಂಬಿಕೆಯ ಆಶೀರ್ವಾದದಿಂದ ನಮ್ಮ ಪರಿಶ್ರಮಕ್ಕೆ ಹೆಚ್ಚಿನ ಫಲ ದೊರೆಯುದೆಂಬ ವಿಶ್ವಾಸ ನನಗಿದ್ದು, ಅದಕ್ಕಾಗಿ ಸರ್ವರ ಸಹಕಾರ ಅಗತ್ಯವಾಗಿದೆ ಎಂದರು.
ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಮಂಗಳೂರು ಇದರ ಸಂಸ್ಥಾಪಕ ಪಟ್ಲ ಸತೀಶ್ ಶೆಟ್ಟಿ ಅವರು ಮಾತನಾಡಿ, ಕಾರ್ಯಕ್ರಮದ ಯಶಸ್ಸಿಗೆ ತಾವೆಲ್ಲರೂ ಅತಿ ಉತ್ಸಾಹದಿಂದ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವುದು ನನಗೆ ಹೆಚ್ಚಿನ ಸಂತಸ ಹಾಗೂ ಸಂತೃಪ್ತಿ ತಂದಿದೆ. ತಮ್ಮೆಲ್ಲರ ಸಹಾಯ, ಸಹಕಾರವನ್ನು ನಾನು ನನ್ನ ಜೀವಮಾನವಿಡೀ ಹೃದಯಲ್ಲಿ ಸ್ಥಿರವಾಗಿ ಇರಿಸಿಕೊಳ್ಳುತ್ತೇನೆ. ನಿಮಗೆಲ್ಲರಿಗೂ ಚಿರಋಣಿಯಾಗಿರುತ್ತೇನೆ. ಮುಂಬಯಿ ಘಟಕಕ್ಕೆ ನನ್ನ ಆತ್ಮೀಯ ಸಹೋದರ ಐಕಳ ಹರೀಶ ಶೆಟ್ಟಿ ಅವರು ಗೌರವಾಧ್ಯಕ್ಷರಾಗಿ ದೊರೆತಿರುವುದು ನನ್ನ ಸಂಸ್ಥೆಯ ಸೌಭಾಗ್ಯವಾಗಿದೆ. ನನ್ನೀ ಸೇವಾ ಕಾರ್ಯ ಕಟೀಲು ಶ್ರೀ ದುರ್ಗಾಮಾತೆಯು ನೀಡಿದ ಪ್ರೇರಣೆಯಿಂದ ಸಾಧ್ಯವಾಗುತ್ತಿದೆ. ತಾವೆಲ್ಲರೂ ನೀಡುವ ಸಹಾಯದ ಒಂದೊಂದು ಬಿಂದುವೂ ಕಲಾವಿದರ ಹೆಸರಲ್ಲಿ ಶ್ರೀದೇವಿಗೆ ಸಮರ್ಪಿತವೆಂದು ತನ್ನ ಆಶಯ ವ್ಯಕ್ತಪಡಿಸಿದರು.
ಟ್ರಸ್ಟ್‌ನ ಮುಂಬಯಿ ಘಟಕದ ಉಪಾಧ್ಯಕ್ಷ ಅಶೋಕ್ ಪಕ್ಕಳ ಅವರು ಕಾರ್ಯಕ್ರಮದ ಬಗ್ಗೆ ಕೆಲವೊಂದು ಸಲಹೆ-ಸೂಚನೆಗಳನ್ನು ನೀಡಿದರು. ಉಪಾಧ್ಯಕ್ಷರಾದ ಉಳೂ¤ರು ಮೋಹನ್‌ದಾಸ್ ಶೆಟ್ಟಿ, ರತ್ನಾಕರ ಶೆಟ್ಟಿ ಮುಂಡ್ಕೂರು, ಸುರೇಶ್ ಬಿ. ಶೆಟ್ಟಿ ಮರಾಠ, ಸಂಚಾಲಕ ಐಕಳ ಗಣೇಶ್ ಶೆಟ್ಟಿ, ಗೌರವ ಕಾರ್ಯದರ್ಶಿ ಕರ್ನೂರು ಮೋಹನ್ ರೈ, ಕೋಶಾಧಿಕಾರಿಗಳಾದ ಬಾಬು ಎಸ್. ಶೆಟ್ಟಿ ಪೆರಾರ, ಸಿಎ ಸುರೇಂದ್ರ ಶೆಟ್ಟಿ, ಜತೆ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಅಜೆಕಾರು ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವಿಧ ಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರಾದ ಸುರೇಂದ್ರ ಕುಮಾರ್ ಹೆಗ್ಡೆ, ವಿಠಲ ಎಸ್. ಆಳ್ವ. ರಾಘು ಪಿ. ಶೆಟ್ಟಿ, ಡಾ| ಪ್ರಭಾಕರ ಶೆಟ್ಟಿ ಬಿ., ಬಾಲಕೃಷ್ಣ ಹೆಗ್ಡೆ ಬೆಳ್ಳಂಪಳ್ಳಿ, ರವೀಂದ್ರನಾಥ ಎಂ. ಭಂಡಾರಿ, ಪದ್ಮನಾಭ ಸಸಿಹಿತ್ಲು, ಪ್ರವೀಣ್ ಎಸ್. ಶೆಟ್ಟಿ, ದಯಾಸಾಗರ್ ಚೌಟ, ಎ. ಧನಂಜಯ ಶೆಟ್ಟಿ, ಆನಂದ ಶೆಟ್ಟಿ, ದಿವಾಕರ ಶೆಟ್ಟಿ ಕುರ್ಲಾ, ನವೀನ್ ಶೆಟ್ಟಿ ಇನ್ನಬಾಳಿಕೆ, ಸುರೇಶ ಶೆಟ್ಟಿ ಯೆಯ್ನಾಡಿ, ಹರೀಶ್ ಟಿ. ಶೆಟ್ಟಿ ಕಲ್ಯಾಣ್, ಪ್ರವೀಣ್ ಶೆಟ್ಟಿ ಕಣಂಜಾರು, ಜಯಪ್ರಕಾಶ್ ಶೆಟ್ಟಿ, ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ, ನಂದಳಿಕೆ ನಾರಾಯಣ ಶೆಟ್ಟಿ, ಕರುಣಾಕರ ಶೆಟ್ಟಿ ಕುಕ್ಕುಂದೂರು, ಪ್ರಕಾಶ್ ಎಂ. ಶೆಟ್ಟಿ ಸುರತ್ಕಲ್, ಪ್ರಸನ್ನ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಚಿತ್ರ-ವರದಿ: ಪ್ರೇಮನಾಥ್ ಶೆಟ್ಟಿ ಮುಂಡ್ಕೂರು