Advertisement

ಧರ್ಮಾಚರಣೆಯಲ್ಲಿ ನಿಜವಾದ ಸುಖ ಇದೆ: ಬ್ರಹ್ಮಾನಂದ ಸರಸ್ವತೀ

05:34 PM Jan 30, 2020 | Naveen |

ಮುಂಬಯಿ : ವಿಶ್ವಕ್ಕೆ ವೇದಾಂತವನ್ನು ನೀಡಿರುವ ಶ್ರೇಷ್ಠ ಪರಂಪರೆ ನಮ್ಮ ಭಾರತಕ್ಕೆ ಇದೆ. ನಾವು ಯಾವುದನ್ನು ಸುಖ ಎಂದು ಭಾವಿಸುತ್ತಿರುತ್ತೇವೆ ಅದು ರೂಪಾಯಿಯಲ್ಲಿನ ಹದಿನೈದು ಆಣೆ ಮಾತ್ರ ವಾಗಿದ್ದು, ದ್ವೇಷ, ಜಾತಿ, ಭೇದ ಮರೆತು ಪರೋಪಕಾರದ ದೃಷ್ಟಿಯಿಂದ ಮಾನವ ಕುಲದ ಏಳ್ಗೆಯನ್ನು ಬಯಸಬೇಕು. ಮಾಡುವ ಕರ್ಮವು ನಿಜವಾದ ಧರ್ಮ ಆಚರಣೆ ಯಾಗಿದ್ದು. ಅದರಲ್ಲೇ ಪಾರಮಾರ್ಥಿಕ ಸುಖ ಅಡಗಿದೆ ಎಂದು ಧರ್ಮಸ್ಥಳ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಗುರು ಪೀಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ನುಡಿದರು.

Advertisement

ಜ. 24ರಂದು ಬೊಯಿಸರ್‌ ಪಶ್ಚಿಮದ ಶ್ರೀ ನಿತ್ಯಾನಂದ ಸ್ವಾಮಿ ಮಂದಿರಕ್ಕೆ ಭೇಟಿ ನೀಡಿ ಭಕ್ತಾದಿಗಳನ್ನು ಉದ್ದೇಶಿಸಿ ಧಾರ್ಮಿಕ ಪ್ರವಚನ ನೀಡಿದ ಶ್ರೀಗಳು, ಶ್ರೀರಾಮ ಕ್ಷೇತ್ರದ ಗುರುಪೀಠದ ವತಿಯಿಂದ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮೇಲ್ಪಂಕ್ತಿಯಲ್ಲಿರುವ ಉಡುಪಿ ಬಾರ್ಕೂರಿನ ಬಿಲ್ಲಾಡಿಯಲ್ಲಿ ಸುಸಜ್ಜಿತ ವಾದ ಐಟಿಐ ಶಿಕ್ಷಣ ಸಂಸ್ಥೆಯಲ್ಲಿ ವಸತಿ ಸೌಲಭ್ಯದೊಂದಿಗೆ ಸುಮಾರು ನೂರು ಮಕ್ಕಳಿಗೆ ಉಚಿತ ತರಬೇತಿ ದೊರೆಯುತ್ತಿದೆ ಎಂದು ನುಡಿದು, ಇತರ ಶಾಖಾ ಮಠಗಳಲ್ಲೂ ಸಮಾಜದಲ್ಲಿನ ಪ್ರಗತಿಶೀಲ ದೃಷ್ಟಿ ಕೋನದೊಂದಿಗೆ ಗುರುಪೀಠದ ವತಿ ಯಿಂದ ಕಾರ್ಯವೆಸಗುವ ಬಗ್ಗೆ ಮಾಹಿತಿ ನೀಡಿದರು.

ಮಕ್ಕಳಿಗೆ ಬಾಲ್ಯದಿಂದಲೇ ಚಿಗುರುವ ಗಿಡವನ್ನು ಪೋಷಿಸುವ ರೀತಿ ಮೌಲ್ಯಾಧಾರಿತ ಶಿಕ್ಷಣ ನೀಡಿ ಬಲಿಷ್ಠ ಹೆಮ್ಮರಗಳಂತೆ ಬೆಳೆಸುವ ಮೂಲಕ ಭವಿಷ್ಯದ ಭವ್ಯ ಸಮಾಜದ ನಿರ್ಮಾಣ ಸಾಧ್ಯ. ಯೋಗವು ಶಾರೀರಿಕ ಆರೋಗ್ಯ ಕಲಿಸುತ್ತದೆ. ಶರೀರದ ಜತೆಗೆ ಜ್ಞಾನ, ಆಧ್ಯಾತ್ಮ ಚಿಂತನೆಯೊಂದಿಗೆ ಬುದ್ಧಿಶಕ್ತಿಯನ್ನು ಹೆಚ್ಚಿಸುವ ಮಾನಸಿಕ ಆರೋಗ್ಯವೂ ಬಹಳ ಅಗತ್ಯವಿದೆ ಎಂದು ನುಡಿದರು.

ಮಧ್ಯಾಹ್ನ 12ಕ್ಕೆ ಮಂದಿರಕ್ಕೆ ಆಗಮಿಸಿದ ಸ್ವಾಮೀಜಿಯವರಿಗೆ ಭಕ್ತ
ವೃಂದವು ಪುಷ್ಪವೃಷ್ಟಿಗೈದು ಚೆಂಡೆ ವಾದನ ಜಯಘೋಷಗಳೊಂದಿಗೆ ಸ್ವಾಗತ ನೀಡಿತು. ಮಂದಿರದ ವಿಶ್ವಸ್ತ ಮಂಡಳಿಯ ಪರವಾಗಿ ಶ್ರೀನಿವಾಸ ಕೋಟ್ಯಾನ್‌, ರಘುರಾಮ ರೈ, ಸತ್ಯಾ ಕೋಟ್ಯಾನ್‌, ಭಾಸ್ಕರ್‌ ಶೆಟ್ಟಿ, ರಮಾನಂದ ಪೂಜಾರಿ, ಸುಪ್ರೀತ್‌ ಶೆಟ್ಟಿ, ಸುಂದರ ಪೂಜಾರಿ, ಪುರೋಹಿತ ರಾಜೇಶ್‌ ಶಾಂತಿ ಹಾಗೂ ಮಹಿಳಾ ಭಕ್ತ ವೃಂದದ ಸದಸ್ಯೆಯರು ಪಾದಪೂಜೆಗೈದರು.
ಮಂದಿರದಲ್ಲಿ ಶ್ರೀ ನಿತ್ಯಾನಂದ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಅನಂತರ ಸ್ವಾಮೀಜಿಯವರು ಪಕ್ಕದಲ್ಲಿನ ಶ್ರೀರಾಮ ಮಂದಿರದಲ್ಲಿಯೂ ಪೂಜೆ ಸಲ್ಲಿಸಿದರು. ಮಂದಿರದ ಆವರಣದಲ್ಲಿ ಭಕ್ತಮಂಡಳಿಯ ಸದಸ್ಯೆಯರಿಂದ ಭಕ್ತಿ ಗಾನ ನೃತ್ಯ ಸೇವೆ ಜರಗಿತು. ಧಾರ್ಮಿಕ ಸಭೆಯಲ್ಲಿ ಶ್ರೀನಿವಾಸ್‌ ಕೋಟ್ಯಾನ್‌ ಭಕ್ತ ಮಂಡಳಿಯ ಪರವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಂದಿರದ ಭಕ್ತ ವೃಂದದ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.

ಚಿತ್ರ-ವರದಿ: ಪಿ. ಆರ್‌. ರವಿಶಂಕರ್‌
ಡಹಾಣೂರೋಡ್

Advertisement
Advertisement

Udayavani is now on Telegram. Click here to join our channel and stay updated with the latest news.

Next