Advertisement

ಚಿಣ್ಣರ ಬಿಂಬ ಮುಂಬಯಿ: ಸಾಕಿನಾಕಾದ ನೂತನ ಶಾಖೆ ಆರಂಭ

02:26 PM Oct 27, 2018 | Team Udayavani |

ಮುಂಬಯಿ: ಮಕ್ಕಳು ಶಾಲೆಯಲ್ಲಿ ಕಲಿಯುವ ವಿಷಯ ಕ್ಕಿಂತ ಹೊರತಾದ ಹೊಸ ಹೊಸ ವಿಷಯಗಳನ್ನು, ನಮ್ಮ ಆಚಾರ ವಿಚಾರ, ಸಂಸ್ಕಾರ-ಸಂಸ್ಕೃತಿಯನ್ನು  ಕಲಿಸುವ ಚಿಣ್ಣರಬಿಂಬದಂತಹ ಸಂಸ್ಥೆಗೆ ಪ್ರೋತ್ಸಾಹಿಸಬೇಕು. ಇಂತಹ ಸಂಸ್ಥೆಯೊಂದು ಸಾಕಿನಾಕದ ಪರಿಸರದ ಮಕ್ಕಳಿಗೆ ಅವಶ್ಯವಾಗಿತ್ತು. ಚಿಣ್ಣರ ಬಿಂಬದ ಮಕ್ಕಳ ಜ್ಞಾನ ಭಂಡಾರವನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತಿರುವುದು ಸ್ತುತ್ಯರ್ಹ. ಇಂದು ಶುಭಾರಂಭಗೊಂಡ ಈ ಶಿಬಿರ ಉತ್ತರೋತ್ತರ ಅಭಿವೃದ್ಧಿಯನ್ನು ಕಾಣಲಿ. ಮುಂಬರುವ ದಿನಗಳಲ್ಲಿ ಇಲ್ಲಿನ ಮಕ್ಕಳು ಹೆಚ್ಚಿನ ಯಶಸ್ಸನ್ನು ಪಡೆದು ಜೀವನದಲ್ಲಿ ಉತ್ತಮ ಪ್ರಜೆಗಳಾಗಿ ಮುಂದುವರಿಯಲಿ ಎಂದು ಶಾರದಾ ಹೈಸ್ಕೂಲ್‌ ಸಾಕಿನಾಕದ ನಿರ್ದೇಶಕರಾದ ಬಿ. ಎಸ್‌. ಕುಮಾರ್‌ ಅವರು ನುಡಿದರು.

Advertisement

ಅವರು ಅ. 21 ರಂದು ಸಾಕಿನಾಕದ ಶಾರದಾ ಹೈಸ್ಕೂಲಿನ ಸಭಾಗೃಹದಲ್ಲಿ ನಡೆದ  ಚಿಣ್ಣರ ಬಿಂಬದ ನೂತನ ಶಾಖೆಯನ್ನು  ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ಚಿಣ್ಣರ ಬಿಂಬ ಕೇವಲ ಒಂದು ಸಂಸ್ಥೆಯಲ್ಲ. ಅದು ಒಂದು ಶಿಕ್ಷಣ ಸಂಸ್ಥೆಯಂತೆ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ನಮ್ಮ ನಾಡು-ನುಡಿಯೊಂದಿಗೆ ಜೀವನಕ್ಕೆ ಬೇಕಾದ ಅವಶ್ಯಕವಾದ ನೀತಿ ಭೋಧನೆಗಳನ್ನು ತಿಳಿಸಲಾಗುತ್ತದೆ. ಅವರಲ್ಲಿನ ಪ್ರತಿಭೆಗೆ ಪೂರಕವಾದ ಸ್ಪರ್ಧೆಗಳನ್ನು ಏರ್ಪಡಿಸಿ ಯಾವ ಭೇದ ಭಾವವೂ ಇಲ್ಲದೆ ಮಕ್ಕಳ ಸುಪ್ತ ಪ್ರತಿಭೆಯನ್ನು ಪ್ರಕಾಶಗೊಳಿಸುವ ಕಾರ್ಯವನ್ನು ನಡೆಸಲಾಗುತ್ತದೆ. ಕಳೆದ ಹದಿನಾರು ವರ್ಷಗಳಿಂದ ಈ ಚಿಣ್ಣರಬಿಂಬದಲ್ಲಿ ಅರಳಿದ ಪ್ರತಿಭೆಗಳು ಇಂದು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ವಿವಿಧ ಸ್ತರಗಳಲ್ಲಿ ಹೆಸರು ಮಾಡಿದ್ದಾರೆ ಎಂದು ಚಿಣ್ಣರ ಬಿಂಬದ ಕನ್ನಡ ಕಲಿಕೆಯ ಸಂಚಾಲಕರಾಗಿರುವ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಚಿಣ್ಣರಬಿಂಬ ನಡೆದು ಬಂದ ದಾರಿಯನ್ನು ಪಾಲಕರ ಮುಂದೆ ತೆರೆದಿಟ್ಟರು.

ಕೇಂದ್ರ ಸಮಿತಿಯ ರಮೇಶ್‌ ರೈ ಅವರು ಮಾತನಾಡಿ, ಚಿಣ್ಣರಬಿಂಬ ನಮ್ಮ ಸಾಕಿನಾಕ ಪರಿಸರದಲ್ಲಿ ಆರಂಭವಾಗಿರುವುದು ಖುಷಿಯ ವಿಷಯ. ಇಲ್ಲಿ ನಮ್ಮ ತುಳು ಕನ್ನಡಿಗರು ಹೆಚ್ಚು ಜನರಿದ್ದು ತಮ್ಮ ಮಕ್ಕಳನ್ನು ಶಿಬಿರಕ್ಕೆ ಸೇರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು, ಪಾಲಕರು ಇದರ ಸದುಪಯೋಗವನ್ನು ಪಡೆಯಬೇಕು ಎಂದು ನುಡಿದರು.

ಅನಿತಾ ಉದಯ ಶೆಟ್ಟಿ ಅವರು ಮಾತನಾಡಿ,  ಪರಿಸರದ ಮಕ್ಕಳು, ಪಾಲಕರು ಪರಸ್ಪರ ಸಹಕರಿಸುತ್ತಾ ಈ ಶಿಬಿರದಲ್ಲಿ ಹೆಚ್ಚೆಚ್ಚು ಮಕ್ಕಳು ಕಲಿತು ಒಳ್ಳೆಯ ಸಂಸ್ಕಾರವಂತರಾಗಬೇಕು ಎಂದು ಮಕ್ಕಳಿಗೆ ಶುಭ ಹಾರೈಸಿದರು. ಶಿಕ್ಷಕಿ ಅನಿತಾ ಶೆಟ್ಟಿ ಕನ್ನಡ ಕಲಿಕಾ ತರಗತಿ ಹಾಗೂ ಪ್ರತಿಭಾ ಸ್ಪರ್ಧೆಯ ಕುರಿತು ಮಾಹಿತಿ ನೀಡಿದರು.

Advertisement

ವಲಯ ಮುಖ್ಯಸ್ಥರಾದ ಆಶಾ ಶೆಟ್ಟಿ ಅವರು ನೂತನ ಶಿಬಿರದ ಎಲ್ಲ ಕಾರ್ಯಗಳಲ್ಲಿ ನಮ್ಮ ಸಹಕಾರ ಇದ್ದೇ ಇರುತ್ತದೆ. ಇಲ್ಲಿನ ಪಾಲಕರು ಒಗ್ಗಟ್ಟಿನಿಂದ ಕಾರ್ಯನಿರ್ವನಿಸಬೇಕು ಎಂದು ನುಡಿದರು. ಅರುಣಾ ಶೆಟ್ಟಿ, ವಿದ್ಯಾ ಶೆಟ್ಟಿ, ಪುಷ್ಪಾ ಗೌಡ, ಸುರೇಖಾ ಶೆಟ್ಟಿ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು, ಮಕ್ಕಳು ಉಪಸ್ಥಿತರಿದ್ದರು. ಸುರೇಶ್‌ ಜೈನ್‌ ವಂದಿಸಿದರು. ಚಿಣ್ಣರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next