ಮುಂಬಯಿ: ಕೋವಿಡ್ ಪ್ರಕರಣಗಳ ಹೆಚ್ಚಳದೊಂದಿಗೆ ಮುಂಬಯಿ ಮಹಾನಗರ ಪಾಲಿಕೆ ಸಾರ್ವಜನಿಕರಿಗೆ ಸಾಧ್ಯವಾದಷ್ಟು ಬೇಗ ಲಸಿಕೆ ನೀಡಲು ಬಯಸಿದ್ದು, 1 ಮಿಲಿಯನ್ ಯುನಿಟ್ ಕೋವ್ಯಾಕ್ಸಿನ್ ಒದಗಿಸುವಂತೆ ಬಿಎಂಸಿ ಆಗ್ರಹಿಸಿದೆ. ಮುಂದಿನ 45 ದಿನಗಳಲ್ಲಿ 4.5 ದಶಲಕ್ಷ ಜನರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಬಿಎಂಸಿ ಆಯುಕ್ತ ಇಕ್ಬಾಲ್ ಚಾಹಲ್ ತಿಳಿಸಿದ್ದಾರೆ.
ನಗರದ 95 ಲಸಿಕೆ ಕೇಂದ್ರಗಳು ಪ್ರತೀದಿನ ಒಂದು ಲಕ್ಷ ಜನರಿಗೆ ಲಸಿಕೆ ನೀಡಬೇಕಾಗುತ್ತದೆ. ಈ ಗುರಿ ಸಾಧಿಸಲು ಮುಂಬಯಿ ಮಹಾನಗರ ಪಾಲಿಕೆಗೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಬೇಕಾ ಗುತ್ತದೆ. ಈ ವಾರ ನಾವು ಲಸಿಕೆ ಪಡೆಯಲಿದ್ದೇವೆ ಎಂದು ಬಿಎಂಸಿ ಅಧಿಕಾರಿ ಹೇಳಿದ್ದಾರೆ.
ಕೇಂದ್ರೀಕೃತ ಕೋ-ವಿನ್ ಅಪ್ಲಿಕೇಶನ್‌ನಲ್ಲಿ ನೋಂದಣಿಗೆ ಜನರಿಗೆ ಸಹಾಯ ಮಾಡಲು ವಿಶೇಷವಾಗಿ ಧಾರಾವಿಯಂತಹ ಕೊಳೆಗೇರಿಗಳಲ್ಲಿ ಬಿಎಂಸಿ ಶಿಬಿರಗಳನ್ನು ಸ್ಥಾಪಿಸಲಿದೆ. ಲಸಿಕೆ ಪಡೆಯಲು ಸಿದ್ಧರಿರುವ ಜನರು ಈ ಶಿಬಿರಗಳನ್ನು ಸಂಪರ್ಕಿಸಬಹುದು. ತರಬೇತಿ ಪಡೆದ ಸ್ವಯಂ ಸೇವಕರು ಕೋ-ವಿನ್ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಲು ಜನರಿಗೆ ಸಹಾಯ ಮಾಡುತ್ತಾರೆ. ಇದನ್ನು ಅನುಸರಿಸಿ ಜನರು ತಮ್ಮ ಹತ್ತಿರದ ಲಸಿಕೆ ಕೇಂದ್ರಕ್ಕೆ ಹೋಗಿ ಚುಚ್ಚು ಮದ್ದನ್ನು ಪಡೆಯಬಹುದು ಎಂದು ಜಿ-ನಾರ್ಥ್ ವಾರ್ಡ್‌ನ ಬಿಎಂಸಿ ಅಧಿಕಾರಿ ಕಿರಣ್ ದಿಘವ್ಕರ್ ಹೇಳಿದ್ದಾರೆ.
ಲಸಿಕೆ ಅಗತ್ಯದ ಬಗ್ಗೆ ಜನರಿಗೆ ಅರಿವು ಮೂಡಿಸಲು ಬಿಎಂಸಿ ಸ್ಥಳೀಯ ಸರಕಾರೇತರ ಸಂಸ್ಥೆಗಳೊಂದಿಗೆ ಸಹಕರಿಸುತ್ತಿದೆ. ಸ್ವಯಂ ಸೇವಕರು ಮನೆ ಮನೆಗೆ ತೆರಳಿ ವಿಶೇಷವಾಗಿ 60 ವರ್ಷ ಪ್ರಾಯಕ್ಕಿಂತ ಮೇಲ್ಪಟ್ಟವರನ್ನು ಪ್ರೇರೇಪಿಸಿ ಲಸಿಕೆಗಳ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ ಎಂದು ಬಿಎಂಸಿಯ ಹೆಚ್ಚುವರಿ ಆಯುಕ್ತ ಸುರೇಶ್ ಕಾಕಾನಿ ಹೇಳಿದ್ದಾರೆ.