ಮುಂಬಯಿ : ಉದಯೋನ್ಮುಖ ರೂಪದರ್ಶಿಯೊಬ್ಬಳ ಮೃತದೇಹ ತುರುಕಿಸಲ್ಪಟ್ಟ ದೊಡ್ಡದೊಂದು ಸೂಟ್‌ಕೇಸ್ ಮುಂಬಯಿಯ ಮಲಾಡ್‌ನಲ್ಲಿ ರಸ್ತೆ ಬದಿಯಲ್ಲಿ ಪತ್ತೆಯಾಗಿದೆ.
ಮೃತ ರೂಪದರ್ಶಿಯನ್ನು ಮಾನಸಿ ದೀಕ್ಷಿತ್ (20) ಎಂದು ಗುರುತಿಸಲಾಗಿದೆ. ಈಕೆ ರೂಪದರ್ಶಿಯಾಗಿ ತನ್ನ ಅದೃಷ್ಟವನ್ನು ಪರೀಕ್ಷಿಸಲು ರಾಜಸ್ಥಾನದ ಕೋಟಾದಿಂದ ಮುಂಬಯಿಗೆ ಬಂದಿದ್ದಳು. ವಿದ್ಯಾರ್ಥಿನಿಯಾಗಿದ್ದ ಈಕೆ ಈವೆಂಟ್ ಮ್ಯಾನೇಜ್‌ಮೆಂಟ್, ಡಿಸೈನಿಂಗ್ ಮುಂತಾದ ಉದ್ಯಮದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಳು. ಈಕೆ ಕಚೇರಿಯು ಅಂಧೇರಿಯಲ್ಲಿನ ಇನ್‌ಫಿನಿಟಿ ಮಾಲ್ ಪಕ್ಕದಲ್ಲೇ ಇದೆ.
ರೂಪದರ್ಶಿ ಮಾನಸಿಯ ಕೊಲೆಗೆ ಸಂಬಂಧಿಸಿ ಪೊಲೀಸರು ಆಕೆಯ ಸಹಪಾಠಿ ಮುಜಮ್ಮಿಲ್ ಸಯ್ಯದ್ (ಹೈದರಾಬಾದ್ ನಿವಾಸಿ) ನನ್ನು ಬಂಧಿಸಿದ್ದಾರೆ. ಈತ ಪಶ್ಚಿಮ ಅಂಧೇರಿಯ ಮಿಲ್ಲತ್ ನಗರದ ನಿವಾಸಿಯಾಗಿದ್ದಾನೆ. ಪೊಲೀಸರ ಪ್ರಕಾರ ಮಾನಸಿಗೆ ಈತ ಪರಿಚಿತನೇ ಆಗಿದ್ದಾನೆ.
ಕೊಲೆಗೆ ಮುನ್ನ ಮುಜಮ್ಮಿಲ್, ಫೋನ್ ಕರೆ ಮಾಡಿ ಮಾನಸಿಯನ್ನು ತನ್ನ ಫ್ಲಾಟಿಗೆ ಕರೆಸಿಕೊಂಡಿದ್ದಾನೆ. ಆಕೆ ಬಂದ ಕ್ಷಣಾರ್ಧದೊಳಗೆ ಇವರಿಬ್ಬರಲ್ಲಿ ಮಾತಿನ ಜಗಳ ಪರಾಕಾಷ್ಠೆಗೇರಿದೆ. ಪರಿಣಾಮವಾಗಿ ಮುಜಮ್ಮಿಲ್ ಘನವಾದ ವಸ್ತುವಿನಿಂದ ಆಕೆಯ ಮೇಲೆ ಮಾರಣಾಂತಿಕ ಪ್ರಹಾರ ಎಸಗಿದ್ದಾನೆ.
ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವಂತೆ ಮುಜಮ್ಮಿಲ್, ಮಾನಸಿಯ ಮೃತ ದೇಹವನ್ನು ಆಕೆಯ ಟ್ರಾವೆಲಿಂಗ್ ಸೂಟ್ ಕೇಸಿನಲ್ಲಿ, ಕುತ್ತಿಗೆ-ಕೈಗಳನ್ನು ಬಿಗಿದು ತುಂಬಿದ್ದಾನೆ. ಅನಂತರ ಮುಂಬಯಿ ವಿಮಾನ ನಿಲ್ದಾಣಕ್ಕೆ ಹೋಗಲು ಓಲಾ ಕ್ಯಾಬ್ ಬುಕ್ ಮಾಡಿದ್ದಾನೆ. ದಾರಿ ಮಧ್ಯೆ ಆತ ಡ್ರೈವರ್ ಗೆ ಮಲಾಡ್ ಪಶ್ಚಿಮದಲ್ಲಿ ಮೈಂಡ್ ಸ್ಪೇಸ್ ಹಿಂಬದಿ ರಸ್ತೆಗೆ ಕಾರನ್ನು ತಿರುಗಿಸುವಂತೆ ಹೇಳಿದ್ದಾನೆ. ಅಲ್ಲೇ ರಸ್ತೆ ಬದಿ ಸೂಟ್‌ಕೇಸನ್ನು ಇಳಿಸಿದ್ದಾನೆ. ಮುಂದಿನ ದಾರಿಯನ್ನು ತಾನು ಆಟೋದಲ್ಲಿ ಕ್ರಮಿಸುವುದಾಗಿ ಹೇಳಿ ಅಲ್ಲಿಂದ ಹೋಗಿದ್ದಾನೆ.
ಓಲಾ ಚಾಲಕನು ಆ ಕೂಡಲೇ ಪೊಲೀಸರನ್ನು ಜಾಗೃತಗೊಳಿಸಿದ್ದಾನೆ. ಅಲ್ಲಿಂದ ಕೇವಲ ನಾಲ್ಕೇ ತಾಸಿನ ಒಳಗೆ ಪೊಲೀಸರು ಮುಜಮ್ಮಿಲ್‌ನನ್ನು ಬಂಧಿಸಿದ್ದಾರೆ.
ಬಂಗೂರ್‌ನಗರ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು ತನಿಖೆ ನಡೆಯುತ್ತಿದೆ.