ವಾಡಿ: ಕಳೆದ ವರ್ಷ ಮಹಾರಾಷ್ಟ್ರದಿಂದ ಬರುವ ವಲಸಿಗರನ್ನು ಹದ್ದುಗಣ್ಣಿನಿಂದ ನೋಡುತ್ತಿದ್ದ ಆರೋಗ್ಯ ಇಲಾಖೆ ಈ ವರ್ಷದ ಕೋವಿಡ್ ಎರಡನೇ ಅಲೆ ಆತಂಕ ಸೃಷ್ಟಿಸಿದ್ದರೂ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ಕೈಚೆಲ್ಲಿ ಕುಳಿತಿದೆ.
ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಅಲ್ಲಿನ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದೆ. ಹೀಗಾಗಿ ವಲಸಿಗರು ರಾಜ್ಯದತ್ತ ಮುಖಮಾಡಿದ್ದು, ಗಂಟು ಮೂಟೆ ಹೊತ್ತು ಕುಟುಂಬ ಸಮೇತ ಊರಿಗೆ ವಾಪಸ್ಸಾಗುತ್ತಿರುವ ಪ್ರಕ್ರಿಯೆ ಕಳೆದ ಒಂದು ತಿಂಗಳಿನಿಂದ ನಡೆಯುತ್ತಲೇ ಇದೆ. ಶುಕ್ರವಾರ ಬೆಳಗ್ಗೆ ಹುಸೇನ ಸಾಗರ ರೈಲು ಮೂಲಕ ಆಗಮಿಸುತ್ತಿರುವ ಚಿತ್ತಾಪುರ ತಾಲೂಕಿಗೆ ಸೇರಿದ ವಿವಿಧ ತಾಂಡಾ ಮತ್ತು ಗ್ರಾಮಗಳ ನೂರಾರು ವಲಸಿಗರ ದಂಡು, ಖಾಸಗಿ ವಾಹನಗಳನ್ನು ಹತ್ತಿ ಊರು ಸೇರಿಕೊಳ್ಳುತ್ತಿದೆ.
ಆದರೆ ಸ್ಥಳೀಯ ಗ್ರಾಪಂ ಆಡಳಿತಗಳು ಹೋಂ ಕ್ವಾರಂಟೈನ್ ವ್ಯವಸ್ಥೆ ಕೈಗೊಳ್ಳದೇ ಅಸಹಾಯಕ ಸ್ಥಿತಿ ಪ್ರದರ್ಶಿಸುತ್ತಿವೆ. ಮಹಾರಾಷ್ಟ್ರದ ಮುಂಬೈ, ಪುಣೆ ನಗರಗಳಲ್ಲಿ ವಾಸವಿದ್ದ ತಾಲೂಕಿನ ಅನೇಕ ವಲಸೆ ಕಾರ್ಮಿಕ ಕುಟುಂಬ ಗಳು ಮಹಾಮಾರಿ ಕೊರೊನಾ ಸೋಂಕಿನ ಆತಂಕವಿಲ್ಲದೇ ಗ್ರಾಮ, ತಾಂಡಾಗಳಲ್ಲಿ ಸಂಚರಿಸುತ್ತಿದ್ದಾರೆ. ಸ್ಥಳೀಯರೊಂದಿಗೆ ಬೆರೆಯುತ್ತಿದ್ದಾರೆ. ಗ್ರಾಮದ ಸಾರ್ವಜನಿಕ ಸ್ಥಳಗಳಾದ ಅಗಸಿ ಕಟ್ಟೆಗಳಲ್ಲಿ ಗುಂಪಾಗಿ ಕುಳಿತು ಹರಟುತ್ತಿದ್ದಾರೆ.
ಯಾಗಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಬಹುತೇಕ ತಾಂಡಾ ಮತ್ತು ಗ್ರಾಮಗಳ ಜನರು ಹೊಟ್ಟೆಪಾಡಿಗಾಗಿ ಮಹಾರಾಷ್ಟ್ರದಲ್ಲಿ ನೆಲೆಸಿದ್ದರು. ಅವರೆಲ್ಲ ವಾಪಸ್ ಬಂದಿದ್ದಾರೆ. ಅವರ ಆರೋಗ್ಯ ತಪಾಸಣೆ ಮಾಡುವಂತೆ ವೈದ್ಯರಿಗೆ ತಿಳಿಸಿದರೂ ಕ್ರಮಕೈಗೊಂಡಿಲ್ಲ. ಹೋಂ ಕ್ವಾರಂಟೈನ್ ಕೂಡ ಮಾಡಿಲ್ಲ. ಐದಾರು ಜನರಿಗೆ ಕೋವಿಡ್ ಸೋಂಕು ದೃಢಪಟ್ಟು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋಣೆಗಳ ವ್ಯವಸ್ಥೆ ಮಾಡಿದರೂ ಕೊರೊನಾ ಪರೀಕ್ಷೆಗೆ ಆರೋಗ್ಯ ಇಲಾಖೆ ಮುಂದಾಗಿಲ್ಲ. –
ಮದನ್ ಹೇಮ್ಲಾ ರಾಠೊಡ, ಗ್ರಾಪಂ ಅಧ್ಯಕ್ಷ, ಯಾಗಾಪುರ
-ಮಡಿವಾಳಪ್ಪ ಹೇರೂರ