ಮುಂಬೈ: ನೂರು ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಗಾದೆ ಮಾತಿನಂತೆ ಇಲ್ಲೊಬ್ಬ ಅಪ್ರಾಪ್ತ ಬಾಲಕಿಯ ಜನ್ಮದಿನಾಂಕವನ್ನು ಆಧಾರ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿ ಆಕೆಯನ್ನು ವಿವಾಹವಾಗಿದ್ದ ಯುವಕನನ್ನು ಬಂಧಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಇದನ್ನೂ ಓದಿ:Mumbai airport ನಲ್ಲಿ ಬೋರ್ಡಿಂಗ್ ಪಾಸ್ ವಿನಿಮಯ; ಇಬ್ಬರು ವಿದೇಶಿಗರ ಬಂಧನ
ದಹಿಸರ್ ಪೊಲೀಸ್ ಠಾಣೆಯಲ್ಲಿ ಯುವತಿಯ ತಂದೆ ನೀಡಿರುವ ದೂರಿನ ಪ್ರಕಾರ, ತನ್ನ ಮಗಳು 2006ರ ಮೇ 7ರಂದು ಜನಿಸಿದ್ದು, ಆರೋಪಿ ಯುವಕ ಆಕೆಯ ಜನ್ಮ ದಿನಾಂಕವನ್ನು 2004ರ ಮಾರ್ಚ್ 12ರಂದು ಜನಿಸಿರುವುದಾಗಿ ಆಧಾರ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿರುವುದಾಗಿ ತಿಳಿಸಿದ್ದಾರೆ.
ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 23 ವರ್ಷದ ಆರೋಪಿ ಹಾಗೂ ಬಾಲಕಿ ಸೋಮವಾರ ವಿವಾಹವಾದ ನಂತರ ಕಾನೂನು ಪ್ರಕ್ರಿಯೆ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಬಾಲಕಿಯ ತಂದೆಯನ್ನು ಠಾಣೆಗೆ ಕರೆಯಿಸಿದ್ದ ವೇಳೆ ಜನ್ಮದಿನಾಂಕ ತಿದ್ದುಪಡಿ ಮಾಡಿರುವುದು ಬಹಿರಂಗವಾಗಿರುವುದಾಗಿ ವರದಿ ತಿಳಿಸಿದೆ.
ಬಾಲಕಿಯ ತಂದೆ ಪೊಲೀಸರಿಗೆ ಆಕೆಯ ಒರಿಜಿನಲ್ Birth ಸರ್ಟಿಫಿಕೇಟ್ ಅನ್ನು ಸಾಕ್ಷಿಯಾಗಿ ನೀಡಿದ್ದರು. ತಾನು ವಿವಾಹವಾಗುವ ಹುಡುಗಿ ಅಪ್ರಾಪ್ತೆಯಲ್ಲ ಎಂಬುದಾಗಿ ತೋರಿಸಲು ಆಧಾರ್ ಸೆಂಟರ್ ನಲ್ಲಿ ತನ್ನ ಡೇಟ್ ಆಫ್ ಬರ್ತ್ ಅನ್ನು ತಿದ್ದುಪಡಿ ಮಾಡಿರುವುದಾಗಿ ಬಾಲಕಿ ಪೊಲೀಸರಿಗೆ ತಿಳಿಸಿರುವುದಾಗಿ ವರದಿ ವಿವರಿಸಿದೆ.
ತಂದೆಯ ದೂರಿನ ಆಧಾರದ ಮೇಲೆ ಯುವಕನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಅಪಹರಣ, ಮೋಸ, ವಂಚನೆ ಮತ್ತು ಬಾಲ್ಯ ವಿವಾಹ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.