Advertisement
ತಮಿಳುನಾಡಿನ 146 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಉತ್ತರ ವಾಗಿ 2ನೇ ದಿನದಾಟದ ಅಂತ್ಯಕ್ಕೆ 9 ವಿಕೆಟಿಗೆ 353 ರನ್ ಪೇರಿಸಿದ್ದು, ಲೀಡ್ 207 ರನ್ನಿಗೆ ಏರಿದೆ.
Related Articles
ಒಂದು ಹಂತದಲ್ಲಿ ಮುಂಬಯಿ 106 ರನ್ನಿಗೆ 7 ವಿಕೆಟ್ ಉದುರಿಸಿಕೊಂಡು ಇನ್ನಿಂಗ್ಸ್ ಹಿನ್ನಡೆಯ ಭೀತಿಯಲ್ಲಿತ್ತು. ನಾಯಕ ಆರ್. ಸಾಯಿ ಕಿಶೋರ್ ಘಾತಕ ದಾಳಿಯೊಂದನ್ನು ಸಂಘಟಿಸಿ 97 ರನ್ನಿಗೆ 6 ವಿಕೆಟ್ ಉರುಳಿಸಿದ್ದರು. ಆದರೆ ಶಾರ್ದೂಲ್ ಠಾಕೂರ್ ಕ್ರೀಸ್ ಇಳಿದ ಬಳಿಕ ಮುಂಬಯಿ ಸರದಿಯ ಚಿತ್ರಣವೇ ಬದಲಾಯಿತು. ಕೀಪರ್ ಹಾರ್ದಿಕ್ ತಮೋರೆ ಜತೆಗೂಡಿದ ಠಾಕೂರ್ 8ನೇ ವಿಕೆಟಿಗೆ 105 ರನ್, ಕೋಟ್ಯಾನ್ ಜತೆ 9ನೇ ವಿಕೆಟಿಗೆ 79 ರನ್ ರಾಶಿ ಹಾಕಿದರು. ಕೋಟ್ಯಾನ್-ದೇಶಪಾಂಡೆ ಮತ್ತೊಂದು ದೊಡ್ಡ ಜತೆಯಾಟದ ನಿರೀಕ್ಷೆ ಮೂಡಿಸಿದ್ದು, ಈಗಾಗಲೇ ಅಂತಿಮ ವಿಕೆಟಿಗೆ 63 ರನ್ ಒಟ್ಟುಗೂಡಿಸಿದ್ದಾರೆ.
Advertisement
ಮುಂಬಯಿಯ ಅಗ್ರ ಕ್ರಮಾಂಕದಲ್ಲಿ ಮಿಂಚಿದ್ದು ಮುಶೀರ್ ಖಾನ್ ಮಾತ್ರ. ಅವರು 131 ಎಸೆತ ನಿಭಾಯಿಸಿ 55 ರನ್ ಮಾಡಿದರು. ನಾಯಕ ಅಜಿಂಕ್ಯ ರಹಾನೆ ಅವರ ಬ್ಯಾಟಿಂಗ್ ಬರಗಾಲ ಮತ್ತೆ ಮುಂದುವರಿಯಿತು. ಅವರ ಗಳಿಕೆ 19 ರನ್ ಮಾತ್ರ. ಬಿಸಿಸಿಐ ಒಡಂಬಡಿಕೆಯಿಂದ ಬೇರ್ಪಟ್ಟು ರಣಜಿ ಆಡಲಿಳಿದ ಶ್ರೇಯಸ್ ಅಯ್ಯರ್ ಮೂರೇ ರನ್ನಿಗೆ ಆಟ ಮುಗಿಸಿದರು.
ಸಂಕ್ಷಿಪ್ತ ಸ್ಕೋರ್ ತಮಿಳುನಾಡು -146. ಮುಂಬಯಿ -9 ವಿಕೆಟಿಗೆ 353 (ಶಾರ್ದೂಲ್ ಠಾಕೂರ್ 109, ತನುಷ್ ಕೋಟ್ಯಾನ್ ಬ್ಯಾಟಿಂಗ್ 74, ಮುಶೀರ್ ಖಾನ್ 55, ಹಾರ್ದಿಕ್ ತಮೋರೆ 35, ಸಾಯಿ ಕಿಶೋರ್ 97ಕ್ಕೆ 6, ಕುಲ್ದೀಪ್ ಸೇನ್ 65ಕ್ಕೆ 2). 50 ವಿಕೆಟ್: ಸಾಯಿ ಕಿಶೋರ್ ಸಾಧನೆ
ಮುಂಬಯಿ ನಾಯಕ ಅಜಿಂಕ್ಯ ರಹಾನೆ ಅವರನ್ನು ಔಟ್ ಮಾಡುವ ಮೂಲಕ ತಮಿಳುನಾಡು ನಾಯಕ ಸಾಯಿ ಕಿಶೋರ್ ವಿಶಿಷ್ಟ ಸಾಧನೆಗೈದರು. ರಣಜಿ ಋತುವೊಂದರಲ್ಲಿ 50 ವಿಕೆಟ್ ಉರುಳಿಸಿದ ತಮಿಳುನಾಡಿನ 3ನೇ ಬೌಲರ್ ಎಂಬ ಹಿರಿಮೆಗೆ ಪಾತ್ರರಾದರು. ಉಳಿದಿಬ್ಬರು ಬೌಲರ್‌ಗಳೆಂದರೆ ಎಸ್. ವೆಂಕಟರಾಘವನ್ ಮತ್ತು ಆಶಿಷ್ ಕಪೂರ್. ವೆಂಕಟರಾಘವನ್ 1972-73ರ ಋತುವಿನಲ್ಲಿ 58 ವಿಕೆಟ್, ಆಶಿಷ್ ಕಪೂರ್ 1999-2000ದ ಸೀಸನ್‌ನಲ್ಲಿ 50 ವಿಕೆಟ್ ಕೆಡವಿದ್ದರು. ಮಧ್ಯ ಪ್ರದೇಶವನ್ನು ಮೇಲೆತ್ತಿದ ಮಂತ್ರಿ
ನಾಗ್ಪುರ: ಅತ್ಯಂತ ತಾಳ್ಮೆಯ ಶತಕವೊಂದನ್ನು ಬಾರಿಸಿದ ಹಿಮಾಂಶು ಮಂತ್ರಿ, ವಿದರ್ಭ ವಿರುದ್ಧದ ರಣಜಿ ಸೆಮಿಫೈನಲ್‌ನಲ್ಲಿ ಮಧ್ಯ ಪ್ರದೇಶಕ್ಕೆ ಮೊದಲ ಇನ್ನಿಂಗ್ಸ್ ಲೀಡ್ ಗಳಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ವಿದರ್ಭದ 170 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಜವಾಬು ನೀಡಿದ ಮಧ್ಯ ಪ್ರದೇಶ 252 ರನ್ ಪೇರಿಸಿತು. ಲಭಿಸಿದ ಮುನ್ನಡೆ 82 ರನ್.ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ವಿದರ್ಭ, ಆರಂಭಕಾರ ಅಥರ್ವ ತೈಡೆ (2) ವಿಕೆಟ್ ಕಳೆದುಕೊಂಡು 13 ರನ್ ಮಾಡಿದೆ. 69 ರನ್ನುಗಳ ಹಿನ್ನಡೆಯಲ್ಲಿದೆ. ದ್ವಿತೀಯ ಸರದಿಯಲ್ಲಿ ದೊಡ್ಡ ಮೊತ್ತ ಪೇರಿಸಿದರಷ್ಟೇ ವಿದರ್ಭ ಫೈನಲ್ ಕನಸು ಕಾಣಬಹುದು. ಹಿಮಾಂಶು 3ನೇ ಶತಕ
ವಿಕೆಟ್ ಕೀಪರ್ ಕೂಡ ಆಗಿರುವ ಆರಂಭಕಾರ ಹಿಮಾಂಶು ಮಂತ್ರಿ 90 ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡು ಮಧ್ಯ ಪ್ರದೇಶಕ್ಕೆ ಆಧಾರವಾಗಿ ನಿಂತರು. 265 ಎಸೆತಗಳನ್ನು ನಿಭಾಯಿಸಿ 126 ರನ್ ಬಾರಿಸಿದರು (13 ಬೌಂಡೆರಿ, 1 ಸಿಕ್ಸರ್). ಇದು ಪ್ರಸಕ್ತ ರಣಜಿ ಋತುವಿನಲ್ಲಿ ಹಿಮಾಂಶು ಮಂತ್ರಿ ಹೊಡೆದ 3ನೇ ಶತಕ.ಮಂತ್ರಿ ಹೊರತುಪಡಿಸಿ ಬೇರೆ ಯಾರಿಂದಲೂ ದೊಡ್ಡ ಮೊತ್ತ ಸಂದಾಯವಾಗಲಿಲ್ಲ. ಸಾರಾಂಶ್ ಜೈನ್ 30, ಸಾಗರ್ ಸೋಲಂಕಿ 26 ಮತ್ತು ಹರ್ಷ 25 ರನ್ ಮಾಡಿದರು. ಮಂತ್ರಿ- ಜೈನ್ ಜತೆಯಾಟದಲ್ಲಿ 6ನೇ ವಿಕೆಟಿಗೆ 73 ರನ್ ಒಟ್ಟುಗೂಡಿತು. ಇವರಿಬ್ಬರ ಜತೆಯಾಟದ ವೇಳೆ ಮಧ್ಯ ಪ್ರದೇಶ ವಿದರ್ಭದ ಮೊತ್ತವನ್ನು ಹಿಂದಿಕ್ಕಿತು. ವಿದರ್ಭ ಪರ ಹಿರಿಯ ವೇಗಿ ಉಮೇಶ್ ಯಾದವ್ ಮತ್ತು ಯಶ್ ಠಾಕೂರ್ 3 ವಿಕೆಟ್ ಉರುಳಿಸಿ ಹೆಚ್ಚಿನ ಯಶಸ್ಸು ಸಾಧಿಸಿದರು. ಅಕ್ಷಯ್ ವಖಾರೆ 2, ಆದಿತ್ಯ ಸರ್ವಟೆ ಒಂದು ವಿಕೆಟ್ ಸಂಪಾದಿಸಿದರು. ಸಂಕ್ಷಿಪ್ತ ಸ್ಕೋರ್: ವಿದರ್ಭ-170 ಮತ್ತು ಒಂದು ವಿಕೆಟಿಗೆ 13. ಮಧ್ಯ ಪ್ರದೇಶ-252 (ಹಿಮಾಂಶು ಮಂತ್ರಿ 126, ಸಾರಾಂಶ್ ಜೈನ್ 30,ಸಾಗರ್ ಸೋಲಂಕಿ 26, ಹರ್ಷ ಗಾವಿÛ 25, ಉಮೇಶ್ ಯಾದವ್ 40ಕ್ಕೆ 3, ಯಶ್ ಠಾಕೂರ್ 51ಕ್ಕೆ 3, ಅಕ್ಷಯ್ ವಖಾರೆ 68ಕ್ಕೆ 2).