ಮುಂಬಯಿ, ಸೆ. 28: ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಸ್ಥಿರ ಏರಿಕೆಯ ಮಧ್ಯೆ ಚೇತರಿಕೆ ದರ ಸುಧಾರಿಸುತ್ತಿದ್ದು, ಮುಂಬಯಿಯಲ್ಲಿ ಸೆಪ್ಟೆಂಬರ್ ಮಧ್ಯದಲ್ಲಿ ಶೇ. 75ಕ್ಕೆ ಇಳಿದಿದ್ದ ಚೇತರಿಕೆ ಪ್ರಮಾಣ ಮತ್ತೂಮ್ಮೆ ಶೇ. 81ಕ್ಕೆ ಏರಿದೆ. ಕೋವಿಡ್ ಪರೀಕ್ಷೆಯ ಹೆಚ್ಚಳದಿಂದಾಗಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ ಎಂದು ಬಿಎಂಸಿ ಹೆಚ್ಚುವರಿ ಆಯುಕ್ತ ಸುರೇಶ್ ಕಾಕಾನಿ ಹೇಳಿದ್ದು, ಆದರೆ ಚೇತರಿಕೆ ದರ ಉತ್ತಮಗೊಳ್ಳುತ್ತಿದೆ. ಕ್ರಮೇಣ ಬೆಳವಣಿಗೆ ದರವೂ ಸುಧಾರಿಸುತ್ತಿದೆ ಎಂದು ತಿಳಿಸಿದ್ದಾರೆ.
ಸೆಪ್ಟಂಬರ್ 26ರ ವರೆಗೆ ಮುಂಬಯಿಯಲ್ಲಿ 1,58,749 ಮಂದಿ ಸೋಂಕಿ ನಿಂದ ಚೇತರಿಸಿಕೊಂಡಿದ್ದು, ಪರಿಣಾಮ ಚೇತರಿಕೆ ಪ್ರಮಾಣವು ಶೇ. 81ಕ್ಕೆ ಏರಿದೆ. ಕೋವಿಡ್ ಬೆಳವಣಿಗೆಯ ದರವು ಶೇ. 1.07ರಷ್ಟಿದ್ದರೆ, ದ್ವಿಗುಣಗೊಳಿಸುವಿಕೆ ಪ್ರಮಾಣ ಸುಧಾರಿಸಿದೆ. ಕೆಲವು ದಿನಗಳ ಹಿಂದೆ ದ್ವಿಗುಣಗೊಳಿಸುವ ದರವು 56 ದಿನಗಳಲ್ಲಿತ್ತು. ಪ್ರಸ್ತುತ 65 ದಿನಗಳಿಗೆ ಏರಿಕೆಯಾಗಿದೆ.
ಬೊರಿವಲಿ, ಮಲಾಡ್, ಅಂಧೇರಿಯಲ್ಲಿ ಅತಿ ಹೆಚ್ಚು ಚೇತರಿಕೆ : ಮುಂಬಯಿಯ ಬೊರಿವಲಿ ಮಲಾಡ್ ಮತ್ತು ಅಂಧೇರಿಯಲ್ಲಿ ಅತಿ ಹೆಚ್ಚು ಕೋವಿಡ್ ಸೋಂಕಿತರಿದ್ದು, ಆದರೆ ಈ ಪ್ರದೇಶಗಳಲ್ಲಿ ಹೆಚ್ಚಿನ ಮಂದಿ ಚೇತರಿಸಿಕೊಂಡಿದ್ದಾರೆ. ಬೊರಿವಲಿ 12,000 ಕೋವಿಡ್ ಸೋಂಕಿತರ ಗಡಿ ದಾಟಿದ ಮೊದಲ ವಾರ್ಡ್ ಆಗಿದ್ದು, ಇಲ್ಲಿ 9,613 ಮಂದಿ ಚೇತರಿಸಿಕೊಂಡಿದ್ದಾರೆ. ಮಲಾಡ್
ಪ್ರದೇಶದಿಂದಲೂ ಈವರೆಗ 9,519 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಮುಂಬಯಿಯ ಕೋವಿಡ್ ಸಂಖ್ಯೆಯಲ್ಲಿ ಮಲಾಡ್ 3ನೇ ಸ್ಥಾನದಲ್ಲಿದೆ. ಇಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 11,403ಕ್ಕೆ ಏರಿದ್ದು, 1,472 ಸಕ್ರಿಯ ಪ್ರಕರಣಗಳಿವೆ. ಅಂಧೇರಿ ಪಶ್ಚಿಮ ಪ್ರದೇಶದಲ್ಲಿ 11,539 ಮಂದಿ ಸೋಂಕಿತರು ಪತ್ತೆಯಾಗಿದ್ದು, ಈ ಪೈಕಿ 9,230 ಮಂದಿ ಚೇತರಿಸಿಕೊಂಡಿದ್ದಾರೆ. 1,914 ಸಕ್ರಿಯ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಾದರ್ ಮತ್ತು ಮಹೀಮ್‌ನಲ್ಲಿ ಹೆಚ್ಚುತ್ತಿರುವ ಸೋಂಕು : ಧಾರಾವಿ, ದಾದರ್ ಮತ್ತು ಮಹೀಮ್ ವಾರ್ಡ್‌ಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10,302ಕ್ಕೆ ತಲುಪಿದ್ದು, ಇತ್ತೀಚಿನ ದಿನಗಳಲ್ಲಿ ದಾದರ್ ಮತ್ತು ಮಹೀಂನಲ್ಲಿ ಸೋಂಕಿತರ ಸಂಖ್ಯೆ ವೇಗವಾಗಿ ಹೆಚ್ಚಾಗಿದೆ. ಈ ವಾರ್ಡ್ ನಲ್ಲಿರುವ ಕೋವಿಡ್ ಚೇತರಿಕೆ ಸಂಖ್ಯೆ 8,545ಕ್ಕೆ ಏರಿದ್ದು, 1,208 ಸಕ್ರಿಯ ಪ್ರಕರಣಗಳಿವೆ. ಉತ್ತರ ಮುಂಬಯಿಯ ಕಾಂದಿವಲಿ ಪ್ರದೇಶದಲ್ಲಿ 10,094 ಮಂದಿ ಕೋವಿಡ್ ಸೋಮಕಿತರು ಪತ್ತೆಯಾಗಿದ್ದಾರೆ. ಮುಂಬಯಿಯಲ್ಲಿ 8,042 ಮಂದಿ ಸಾವನ್ನಪ್ಪಿದ್ದರೆ, 1,762 ಮಂದಿ ಸೋಂಕಿತರು ಇನ್ನೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾಂಡೂಪ್ ಮತ್ತು ಘಾಟ್ಕೊಪರ್ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 9 ಸಾವಿರ ದಾಟಿದ್ದು, 7 ಸಾವಿರಕ್ಕೂ ಅಧಿಕ ಮಂದಿ ಚೇತರಿಸಿಕೊಂಡಿದ್ದಾರೆ. ಗ್ರ್ಯಾಂಟ್ ರೋಡ್ ವಾರ್ಡ್‌ನಲ್ಲಿ 7 ಸಾವಿರಕ್ಕೂ ಅಧಿಕ ಮಂದಿ ಚೇತರಿಸಿಕೊಂಡಿದ್ದಾರೆ. ಇಲ್ಲಿ ಕೋವಿಡ್ ರೋಗಿಗಳ ಸಂಖ್ಯೆ 8 ಸಾವಿರಕ್ಕಿಂತ ಹೆಚ್ಚಿದೆ.
ಮುಲುಂಡ್ ಮತ್ತು ಪರೇಲ್ ಪ್ರದೇಶದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ 8 ಸಾವಿರಕ್ಕಿಂತ ಹೆಚ್ಚಿದ್ದರೆ, 6 ಸಾವಿರಕ್ಕೂ ಹೆಚ್ಚು ಮಂದಿ ಕೋವಿಡ್ ದಿಂದ ಚೇತರಿಸಿಕೊಂಡಿದ್ದಾರೆ. ವರ್ಲಿ, ಕುರ್ಲಾ ಮತ್ತು ವಡಾಲಾ ಪ್ರದೇಶಗಳಲ್ಲಿ ಕೋವಿಡ್ ದಿಂದ ಚೇತರಿಸಿಕೊಳ್ಳುವವರ ಸಂಖ್ಯೆ 6 ಸಾವಿರಕ್ಕಿಂತ ಹೆಚ್ಚಿದೆ. ಮುಂಬಯಿಯ ಸ್ಯಾಂಡ್‌ಹರ್ಸ್ಡ್ ರೋಡ್ ಪ್ರದೇಶದಲ್ಲಿ 1,608 ಮಂದಿ ರೋಗಿಗಳಿದ್ದು, ಇಲ್ಲಿ 1,282 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದರೆ, 225 ಸಕ್ರಿಯ ಪ್ರಕರಣಗಳಿವೆ.