ಮುಂಬೈ: ಮುಂಬೈನ ಖಾಸಗಿ ಆಸ್ಪತ್ರೆಯೊಂದು ದೇಶದಲ್ಲಿನ ಕೋವಿಡ್ 19 ವೈರಸ್ ನ ಹಾಟ್ ಸ್ಪಾಟ್ ಗಳಲ್ಲಿ ಒಂದು ಎಂದು ಕೇಂದ್ರ ಸರ್ಕಾರ ಗುರುತಿಸಿದೆ ಎಂದು ವರದಿ ತಿಳಿಸಿದ್ದು, ಖಾಸಗಿ ಆಸ್ಪತ್ರೆಯಲ್ಲಿನ 26 ನರ್ಸ್ ಹಾಗೂ ಮೂವರು ವೈದ್ಯರಿಗೆ ಕೋವಿಡ್ 19 ವೈರಸ್ ತಗುಲಿದ್ದು, ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಅಲ್ಲದೇ ಇದೊಂದು (ಆಸ್ಪತ್ರೆ) ನಿಯಂತ್ರಿತ ಪ್ರದೇಶ ಎಂದು ಘೋಷಿಸಿದೆ.
ಇಲ್ಲಿನ ವೋಕಾರ್ಡ್ ಆಸ್ಪತ್ರೆಯಲ್ಲಿ ಕೋವಿಡ್ 19 ಪ್ರಕರಣ ದಿಢೀರ್ ಆಗಿ ಭಾರೀ ಪ್ರಮಾಣದಲ್ಲಿ ಹೇಗೆ ಹರಡಿದೆ ಎಂಬ ಬಗ್ಗೆ ತನಿಖೆ ನಡೆಸಲು ಆದೇಶ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ಪತ್ರೆಯಿಂದ ಯಾರೂ ಒಳಬರುವಂತಿಲ್ಲ ಹಾಗೂ ಹೊರ ಹೋಗುವಂತಿಲ್ಲ. ಆಸ್ಪತ್ರೆಯೊಳಗಿರುವ ಎಲ್ಲಾ ರೋಗಿಗಳನ್ನು ಎರಡು ಬಾರಿ ಪರೀಕ್ಷಿಸಿ ನೆಗೆಟಿವ್ ವರದಿ ಬರುವವರೆಗೂ ಇಡೀ ಆಸ್ಪತ್ರೆ ಕಟ್ಟಡ ನಿಯಂತ್ರಣದಲ್ಲಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿರುವ 270ಕ್ಕೂ ಅಧಿಕ ರೋಗಿಗಳನ್ನು ಹಾಗೂ ನರ್ಸ್ ಗಳನ್ನು ಪರೀಕ್ಷಿಸಲಾಗಿದೆ. ಹೊರರೋಗಿ ವಿಭಾಗ ಮತ್ತು ತುರ್ತು ಸೇವಾ ಘಟಕ ಸೇವೆಯನ್ನು ರದ್ದುಪಡಿಸಲಾಗಿದೆ. ಆಸ್ಪತ್ರೆ ಕ್ಯಾಂಟೀನ್ ನಿಂದ ರೋಗಿಗಳಿಗೆ ಮತ್ತು ನರ್ಸ್ ಗಳಿಗೆ ಆಹಾರ ಸರಬರಾಜು ಮಾಡಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಕೋವಿಡ್ 19 ಭಾರೀ ಪ್ರಮಾಣದಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ನಿಯಂತ್ರಿತ ಯೋಜನೆ ವಿವರವನ್ನು ಬಿಡುಗಡೆಗೊಳಿಸಿತ್ತು. ಬಫರ್ ಝೋನ್ ಗುರುತಿಸಿ, ಸುತ್ತಮುತ್ತಲಿನ ಪ್ರದೇಶವನ್ನು ಒಂದು ತಿಂಗಳ ಕಾಲ ಬಂದ್ ಮಾಡುವಂತೆ ಸೂಚಿಸಿದೆ.